ಉಡುಪಿ : ಕ್ಯಾಂಪಾ ಕೋಲಾ ವೆಬ್‌ಸೈಟ್ ಮಾಡಿ ಉದ್ಯಮಿ ಓರ್ವರಿಗೆ ಆನ್‌ಲೈನ್‌ನಲ್ಲಿ ಮೋಸ ಮಾಡಿರುವ ಘಟನೆ ಉಡುಪಿಯಲ್ಲಿ ಬೆಳಕಿಗೆ ಬಂದದ್ದು, ಜಿಲ್ಲಾ ಸೆನ್ ಠಾಣಾ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದ ಇಬ್ಬರು ಬಂಧಿತರಾಗಿದ್ದಾರೆ. ಅವರಿಂದ ನಗದು, ಮೊಬೈಲ್, ಲ್ಯಾಪ್ ಟಾಪ್ ಸೇರಿ ಒಟ್ಟು ರೂ. 6,15,000 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಣಿಪಾಲದಲ್ಲಿ ವುಡ್ ಬಿಸಿನೆಸ್ ಮಾಡಿಕೊಂಡಿರುವ ಅನಿನಾಶ್ ಪೂಜಾರಿ ಉದ್ಯಮಿ ಓರ್ವರು ರಿಲಯನ್ಸ್ ಇಂಡಸ್ಟ್ರೀ ಮಾಲಕತ್ವದ ಕ್ಯಾಂಪಾ ಕೋಲಾ ಪ್ರಾಂಚೈಸ್ ಗೆ campacolabusiness.com ಮುಖಾಂತರ ಅರ್ಜಿ ಸಲ್ಲಿಸಿದ್ದು, ಕೆಲವು ದಿನಗಳಲ್ಲಿ ಮೇಲ್ ಮುಖಾಂತರ ಹಾಗೂ ಪೋನ್ ಮುಖಾಂತರ ಹೆಚ್ಚಿನ ಮಾಹಿತಿಗಾಗಿ, ದಾಖಲಾತಿಗಾಗಿ ಅಲ್ಲಿಂದ ಕರೆ ಬಂದಿದೆ. ಅವರು ತಿಳಿಸಿದಂತೆ ವಿದ್ಯಾಭ್ಯಾಸದ ದಾಖಲಾತಿ, ಬ್ಯಾಂಕ್ ಸ್ಟೇಟ್‌ಮೆಂಟ್ ಹಾಗೂ ಆಧಾರ್ ಕಾರ್ಡ್ ದಾಖಲಾತಿಗಳನ್ನು ಅನ್ನು ಅವಿನಾಶ್ ಕಳುಹಿಸಿಕೊಟ್ಟಿರುತ್ತಾರೆ. ಅನಂತರ ಪ್ರಾಂಚೈಸಿ ಅರ್ಜಿ ಸಲ್ಲಿಕೆ ಆಗಿರುವುದಾಗಿ ತಿಳಿಸಿದ್ದು, ಆರೋಪಿತರು ತಿಳಿಸಿದಂತೆ ರಿಜಿಸ್ಟ್ರೇಷನ್, ಪ್ರೋಡಕ್ಟ್ ಬುಕಿಂಗ್‌ಗೆ ಎಂದು ಹಂತ ಹಂತವಾಗಿ ರೂ. 5,72,500/-ಹಣವನ್ನು ಅಪರಿಚಿತರು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ಅವಿನಾಶ್ ಜಮಾ ಮಾಡಿರುತ್ತಾರೆ. ಆರೋಪಿತರು ಪುನಃ ಪುನಃ ಹಣ ಹಾಕುವಂತೆ ಒತ್ತಾಯಿಸುತ್ತಿರುವುದರಿಂದ ಅವಿನಾಶ್ ಅವರಿಗೆ ಸಂಶಯ ಉಂಟಾಗಿದೆ. ಆರೋಪಿತರು ಉದ್ಯಮಿಗೆ ಕ್ಯಾಂಪಾ ಕೋಲಾ ಪ್ರಾಂಚೈಸಿಯನ್ನು ಕೊಡುವುದಾಗಿ ನಂಬಿಸಿ ಒಟ್ಟು 5,72,500/- ಹಣ ಪಡೆದುಕೊಂಡು ಈ ವರೆಗೆ ಪ್ರಾಂಚೈಸಿ ಕೊಡದೇ, ಹಾಕಿದ ಹಣವನ್ನು ವಾಪಾಸ್ ನೀಡದೇ ಮೋಸ ಮಾಡಲಾಗಿದೆ.
ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಹರಿರಾಂ ಶಂಕರ್ ಅವರ ಆದೇಶದಂತೆ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ನಾಯಕ್ ಅವರ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್ ಉಪಾಧೀಕ್ಷಕಿ ಡಾ. ಹರ್ಷ ಪ್ರಿಯಂವದರವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ಆರೋಪಿಗಳಾದ ದೇವ್ ಹರ್ಷ, ಚಂದನ ಕುಮಾರ್ ಎಂಬುವರನ್ನು ದಸ್ತಗಿರಿ ಮಾಡಿ ಅವರಿಂದ 10 ಮೊಬೈಲ್ ಪೋನ್, 4 ಲ್ಯಾಪ್ ಟಾಪ್ ಗಳನ್ನು ಹಾಗೂ 4,50,000/- ನಗದನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.
ಪೊಲೀಸ್ ವೃತ್ತ ನಿರೀಕ್ಷಕ ನಿಲೇಶ್ ಜಿ. ಚವ್ಹಾಣ್, ಪೊಲೀಸ್ ಉಪನಿರೀಕ್ಷಕ ಅಶೋಕ್ ಕುಮಾರ್, ಸೈಬರ್ ಕ್ರೈಂ ಪೊಲೀಸ್ ಠಾಣಾ ಸಿಬ್ಬಂದಿಗಳಾದ ರಾಘವೇಂದ್ರ ಕಾರ್ಕಡ, ಪ್ರವೀಣ್ ಕುಮಾರ್, ಪ್ರವೀಣ ಶೆಟ್ಟಿಗಾರ್, ರಾಜೇಶ್, ದೀಕ್ಷಿತ್ ಅವರನ್ನೊಳಗೊಂಡ ವಿಶೇಷ ತಂಡವು ಬಿಹಾರ ರಾಜ್ಯದ ಪಾಟ್ನಾ ಮತ್ತು ಬೆಂಗಳೂರುನಲ್ಲಿ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿರುತ್ತಾರೆ. ಸಿಬ್ಬಂದಿಗಳಾದ ಎ.ಎಸ್.ಐ, ಉಮೇಶ್ ಜೋಗಿ, ಯತೀನ್, ವೆಂಕಟೇಶ್, ಧರ್ಮಪ್ಪ, ನಿಲೇಶ್, ಪವನ್ ಹಾಗೂ ದಿನೇಶ್, ಎಂ. ಸಹಕರಿಸಿರುತ್ತಾರೆ.










































































