ಗುತ್ತಿಗೆದಾರರ ಮೇಲೆ ದಬ್ಬಾಳಿಕೆ – ಅಕ್ರಮವಾಗಿ ಸಾರ್ವಜನಿಕ ರಸ್ತೆ ಅಗೆದು ಹಾನಿ

ಕಾರ್ಕಳ : ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಸರಕಾರಿ ಕಾಮಗಾರಿಗಳಲ್ಲಿ ಏಕಸ್ವಾಮ್ಯತೆ ಸಾಧಿಸಲು‌ ಗುತ್ತಿಗೆದಾರರ ಮೇಲೆ ದಬ್ಬಾಳಿಕೆ ಹಾಗೂ ಸಾರ್ವಜನಿಕ ಸ್ವತ್ತುಗಳಿಗೆ ಹಾನಿ ಮಾಡಿರುವ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಕಾರ್ಕಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಶಿವಪುರ ಒತ್ತಾಯಿಸಿದ್ದಾರೆ.

ಲೋಕೋಪಯೋಗಿ ಇಲಾಖೆ ಮೂಲಕ ಮುನಿಯಾಲು-ಪಡುಕೂಡುರು ಖಜಾನೆ ರಸ್ತೆ ನಿರ್ಮಾಣದ 2.50 ಕೋಟಿ ರೂ. ಕಾಮಗಾರಿ ಪ್ರಶಾಂತ್ ಶೆಟ್ಟಿ ಮಳವಳ್ಳಿ ಎಂಬವರಿಗೆ ಟೆಂಡರ್ ಆಗಿತ್ತು. ಈ ಕಾಮಗಾರಿ ಇನ್ನಷ್ಟೇ ಪ್ರಾರಂಭವಾಗಬೇಕಿತ್ತು. ಆದರೆ, ಎಲ್ಲ ಸರಕಾರಿ ಕಾಮಗಾರಿಗಳನ್ನು ತಾನೇ ಮಾಡಬೇಕೆಂಬ ಹಪಹಪಿಗೆ ಬಿದ್ದಿರುವ ಉದಯಕುಮಾರ್ ಶೆಟ್ಟಿ ಅಕ್ರಮವಾಗಿ ಸದರಿ ರಸ್ತೆಯನ್ನು ಅಗೆದು ಕಾಮಗಾರಿ ಪ್ರಾರಂಭ ಮಾಡಿರುತ್ತಾರೆ. ಈ ವಿಷಯ ತಿಳಿದು ಸರ್ಕಾರಿ ಎಂಜಿನಿಯರ್ ಗುತ್ತಿಗೆದಾರ ಪ್ರಶಾಂತ ಶೆಟ್ಟಿ ಮಳವಳ್ಳಿಯವರಿಗೆ ನೋಟಿಸ್ ನೀಡಿದ್ದಾರೆ. ಆದರೆ, ಈ ಕೃತ್ಯಕ್ಕೆ ಮೂಲ ಕಾರಣೀಕರ್ತ ಮುನಿಯಾಲು ಉದಯ ಕುಮಾರ್ ಶೆಟ್ಟಯಾಗಿದ್ದು ಅವರ ವಿರುದ್ಧ ಕ್ರಮ‌ ತೆಗೆದುಕೊಳ್ಳಬೇಕು ಎಂದು ಸುರೇಶ್‌ ಆಗ್ರಹಿಸಿದ್ದಾರೆ.
ಕಾಮಗಾರಿಯ ಟೆಂಡರ್‌ ಆಗಿರುವುದು ಪ್ರಶಾಂತ್‌ ಅವರಿಗೆ, ಆದರೆ, ಉದಯ ಕುಮಾರ್ ಶೆಟ್ಟಿಯವರು ಹೇಗೆ ಕಾಮಗಾರಿ ಆರಂಭಿಸಿದ್ದಾರೆ ? ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಇಂಥ ಕಾನೂನು ಬಾಹಿರ ಹಾಗೂ ದಬ್ಬಾಳಿಕೆ ನೀತಿಯು ಕಾರ್ಕಳ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದ್ದು, ಬೇರೆ ಗುತ್ತಿಗೆದಾರರು ತಲೆ ಎತ್ತಬಾರದು ಎಂಬಂತೆ ವರ್ತಿಸುತ್ತಿದ್ದಾರೆ. ಸರಕಾರಿ ಸ್ವತ್ತನ್ನು ಹಾನಿ ಮಾಡಿದ ಅವರ ವಿರುದ್ಧ ಮೊದಲು ಕ್ರಮವಾಗಬೇಕೆಂದು ಸುರೇಶ್‌ ಶೆಟ್ಟಿ ಆಗ್ರಹಿಸಿದ್ದಾರೆ.

ಜಿಲ್ಲಾಡಳಿತದ ದುರ್ಬಳಕೆ
ಕಳೆದ ಎರಡೂವರೆ ವರ್ಷದಿಂದ ಉದಯಕುಮಾರ್ ಶೆಟ್ಟಿ ಜಿಲ್ಲಾಡಳಿತವನ್ನು ದುರ್ಬಳಕೆ ಮಾಡಿಕೊಂಡು ಜಲ್ಲಿ, ಮರಳು, ಕೆಂಪುಗಲ್ಲು ವ್ಯಾಪಾರಸ್ಥರಿಗೆ ಕೇಸ್ ಹಾಕಿಸುತ್ತಾ ನಿರಂತರವಾಗಿ ಕಿರುಕುಳವನ್ನು ನೀಡುತ್ತಿದ್ದವರು ಈಗ ತನ್ನ ಕ್ಷೇತ್ರದಲ್ಲಿ ನನ್ನನ್ನು ಬಿಟ್ಟು ಬೇರೆ ಯಾರೂ ಗುತ್ತಿಗೆ ಕಾಮಗಾರಿ ಮಾಡಬಾರದು ಎಂಬ ಕಾರಣಕ್ಕಾಗಿ ಇತರ ಗುತ್ತಿಗೆದಾರರ ಮೇಲೆ ದಬ್ಬಾಳಿಕೆ ಮಾಡುತ್ತಾ ಸರಕಾರಿ ಗುತ್ತಿಗೆಯಲ್ಲಿ ಏಕಸ್ವಾಮ್ಯತೆ ಸಾಧಿಸಲು ಪ್ರಯತ್ನಿಸುತ್ತಾ ಸರಕಾರಿ ಕಾಮಗಾರಿಗಳೆಲ್ಲವೂ ತಮ್ಮ ಭ್ರಷ್ಟಾಚಾರದ ಆಹಾರ ಎಂದು ಪರಿಭಾವಿಸಿ ಉಳಿದ ಗುತ್ತಿಗೆದಾರರನ್ನು ತುಳಿಯುತ್ತಿದ್ದಾರೆ. ಇವರ ಈ ಸರ್ವಾಧಿಕಾರಿ ಧೋರಣೆಯನ್ನು ಅಧಿಕಾರಿಗಳು ಕಂಡು ಕಾಣದಂತೆ ಸುಮ್ಮನೆ ಕುಳಿತಿರುವುದು ಅನುಮಾನಕ್ಕೆ ಕಾರಣವಾಗಿದ್ದು, ಲೋಕೋಪಯೋಗಿ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಸಾರ್ವಜನಿಕ ರಸ್ತೆಯನ್ನು ಅಕ್ರಮವಾಗಿ ಅಗೆದು ಸರಕಾರದ ಆಸ್ತಿಗೆ ಹಾನಿ ಮಾಡಿದ ಮುನಿಯಾಲು ಉದಯ ಕುಮಾರ್ ಶೆಟ್ಟಿ ವಿರುದ್ಧ ಕೂಡಲೇ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಸುರೇಶ್ ಶೆಟ್ಟಿ ಆಗ್ರಹಿಸಿದ್ದಾರೆ.‌











































error: Content is protected !!
Scroll to Top