ಉಡುಪಿ : ಗೃಹರಕ್ಷಕ ದಳವು ಪೊಲೀಸ್ ಇಲಾಖೆಗೆ ಸರಿಸಮನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಕೊರೋನಾ ಕಾಲದಲ್ಲಿ ಗೃಹರಕ್ಷಕ ದಳದ ಕಾರ್ಯವೈಖರಿಯು ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಗೃಹರಕ್ಷಕ ದಳದ ಸಿಬ್ಬಂದಿ ಪೊಲೀಸರ ಮಾದರಿಯಲ್ಲೇ ಕಾರ್ಯನಿರ್ವಹಿಸುತ್ತಿದ್ದು, ಅವರ ಸೇವೆ ಅನನ್ಯ ಎಂದು ಜಿಲ್ಲಾ ಪೋಲಿಸ್ ಅಧೀಕ್ಷಕ ಹರಿರಾಂ ಶಂಕರ್ ಅಭಿಪ್ರಾಯಪಟ್ಟರು.
ಅವರು ನ. 14ರಂದು ಅಜ್ಜರಕಾಡು ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲಾ ಗೃಹರಕ್ಷಕ ದಳದ ವತಿಯಿಂದ ಪಶ್ಚಿಮ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ತವ್ಯ ಬದ್ಧತೆಗೆ ಕೈಗನ್ನಡಿ
ಅತಿ ಹೆಚ್ಚು ಜನಸಂದಣಿ ಸೇರುವ ಕಾರ್ಯಕ್ರಮಗಳಲ್ಲಿ ಗೃಹರಕ್ಷಕ ದಳವು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತದೆ. ವಾಹನ ಸಂಚಾರದ ನಿಭಾವಣೆಯಲ್ಲಿ ಪೊಲೀಸರಿಗಿಂತಲೂ ಒಂದು ಹೆಜ್ಜೆ ಮುಂದಿದ್ದು ಅತ್ಯಂತ ದಕ್ಷತೆಯಿಂದ ಕಾರ್ಯನಿರ್ವಹಿಸಿ ಖುದ್ದು ಜನರೇ ಗೃಹರಕ್ಷಕರನ್ನು ನಿಯುಕ್ತಿಗೊಳಿಸುವಂತೆ ಕೇಳಿಕೊಳ್ಳುವ ಉದಾಹರಣೆಗಳಿವೆ. ಇದು ಗೃಹರಕ್ಷಕರ ಕರ್ತವ್ಯ ಬದ್ದತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದವರು ಹೇಳಿದರು.

ಆರೋಗ್ಯ ವಿಮೆ
ಪೊಲೀಸ್ ಇಲಾಖೆಯಂತೆ ಗೃಹರಕ್ಷಕರಿಗೆ ಯಾವುದೇ ರೀತಿಯ ಆರೋಗ್ಯ ಸೇವೆಗಳು ಸಿಗುವುದಿಲ್ಲ. ಅಫಘಾತ ಸಂಭವಿಸಿದಾಗ ಅಥವಾ ಅನಾರೋಗ್ಯ ಪೀಡಿತರಾದಾಗ ಚಿಕಿತ್ಸೆಗಾಗಿ ಹಲವಾರು ಲಕ್ಷ ಖರ್ಚಾಗುತ್ತದೆ. ವ್ಯಕ್ತಿಯೊಬ್ಬನು ತನ್ನ ಸಂಪೂರ್ಣ ಜೀವಿತಾವಧಿಯಲ್ಲಿ ದುಡಿದ ಹಣವು ವೈದ್ಯಕೀಯ ವೆಚ್ಚಗಳಿಗಾಗಿ ಖರ್ಚಾಗುತ್ತವೆ. ವ್ಯಕ್ತಿಯು ಅಕಾಲಿಕ ಮರಣ ಹೊಂದಿದಂತಹ ಸಂದರ್ಭಗಳಲ್ಲಿ ಕುಟುಂಬಿಕರಿಗೆ ಯಾವುದೇ ರೀತಿಯ ಆರ್ಥಿಕ ಭದ್ರತೆ ಇರುವುದಿಲ್ಲ. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಖಾಸಗಿ ಬ್ಯಾಂಕ್ ಗಳ ಸಹಯೋಗದೊಂದಿಗೆ ಆರೋಗ್ಯ ವಿಮಾ ಪ್ಯಾಕೇಜ್ ಅನ್ನು ದೊರಕುವಂತೆ ಮಾಡಲಾಗುವುದು ಎಂದರು.





















