ನಗು ತುಂಬಿದ ವದನದಲ್ಲಿ, ಸದಾ ತೊಡುವ ಶ್ವೇತ ವಸನದಲ್ಲಿ, ನಿತ್ಯವೂ ಸತ್ಯ ನ್ಯಾಯ, ನಿಷ್ಠೆಯ ಕುರುಹು. ಇವುಗಳೇ ಇವರ ಧ್ಯೇಯ ಮಂತ್ರ. ಬದುಕಿನ ವಿಜಯ ಪಥವಾಗಿತ್ತು. ನಡೆಯಲ್ಲಿ ಗಂಭೀರತೆ, ನುಡಿಯಲ್ಲಿ ತಿರುಳುಳ್ಳ ಮಾತು. ನಡು ನಡುವೆ ಹಾಸ್ಯ ಹೊನಲ ಝರಿ. ಮಗುವಿನಂತೆ ನಗು. ಸಮಯ, ಸಂದರ್ಭ ಸನ್ನಿವೇಶವನ್ನು ಅರ್ಥೈಸಿಕೊಂಡು ಅದರೊಂದಿಗೆ ಅನುಸಂಧಾನ ಮಾಡುತ್ತಲೇ ತನ್ನ ಸವಿ ಸವಿ ನೆನಪುಗಳ ಸುರುಳಿಯನ್ನು ಬಿಚ್ಚಿಡುತ್ತಲೇ ಸಾಗುವವರು. ಎಂ.ಕೆ. ಅವರ ಮಾತು ಉಪನ್ಯಾಸ ಅದೊಂದು ವಿಶೇಷ ಜ್ಞಾನದ ಸಮರ್ಪಣೆ. ಅವರ ಭಾಷಣದಲ್ಲಿ ಆದರ್ಶ ಮಹನೀಯರ ಹೆಸರೇಳುತ್ತಲೇ ಇದ್ದಕ್ಕಿದ್ದಂತೆಯೇ ಕಂಠಗದ್ಗತರಾಗಿ ಕಣ್ಣೀರಿಡುತ್ತಿದ್ದರು. ಅಪ್ಪಟ ದೇಶಪ್ರೇಮಿ. ರಾಷ್ಟೀಯತೆಯ ಚಿಂತನೆಯ ಹರಿಕಾರರಾಗಿದ್ದರು.
ಇವರ ವಾಕ್ಪಟುತ್ವದಲ್ಲಿ ರಾಜಕೀಯ, ಸಾಹಿತ್ಯ, ನಾಡಿನ ಇತಿಹಾಸಗಳ ಹೋರಾಟದ ನೆಲೆ, ಸಾಹಿತ್ಯ ಸಂಗತಿಗಳು, ಅಂದಿನ ಬ್ರಿಟೀಷರ ಆಡಳಿತದಲ್ಲಿದ್ದ ಕಟ್ಟುನಿಟ್ಟುಗಳ ಕುರಿತ ಕಥನವೂ ಇರುತ್ತದೆ. ಇವರದು ಸಾಹಿತ್ಯ ಮನಃಶಾಸ್ತ್ರ ತತ್ವಶಾಸ್ತ್ರ ನ್ಯಾಯಿಕ ವಿಚಾರಗಳಿಂದ ಸಾಗಿದ ಮೇರು ವ್ಯಕ್ತಿತ್ವ. ವೈಯಕ್ತಿಕವಾಗಿ ನಾನು ಕಳೆದ ಹನ್ನೆರಡು ವರ್ಷಗಳಿಂದ ಅವರ ಮಾರ್ಗದರ್ಶನ, ಪ್ರೋತ್ಸಾಹದಿಂದ ತಾಲೂಕು ಸ್ಕೌಟ್ ಗೈಡ್ಸ್ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತ ಬಂದಿದ್ದೇನೆ. ಕಾರ್ಕಳದ ಸ್ಕೌಟ್ಸ್ ಗೈಡ್ಸ್ ನ ಅಧ್ಯಕ್ಷರಾಗಿ ಮೂವತ್ತೈದು ವರ್ಷಗಳಿಂದಲೂ ಈ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದರು. ಇಂದು ತಾಲೂಕು, ಜಿಲ್ಲಾ, ರಾಷ್ಟ್ರ, ಅಂತಾರಾಷ್ಟ್ರೀಯ ಸ್ತರದಲ್ಲೂ ಈ ಸಂಸ್ಥೆಯ ವಿದ್ಯಾರ್ಥಿಗಳು ಶಿಕ್ಷಕರು ಗುರುತಿಸುವಂತಾಗಿದ್ದರೇ ಈ ಮಹನೀಯನ ಸ್ಪೂರ್ತಿಯ ಮಾತುಗಳೇ ಪ್ರೇರಣೆಯಾಗಿದೆ .ಕಾರ್ಕಳದ ಖ್ಯಾತ ಹಿರಿಯ ನ್ಯಾಯ ತಜ್ಞರು, ಸಾಮಾಜಿಕ ,ಶೈಕ್ಷಣಿಕ ಧಾರ್ಮಿಕ ಹಾಗೂ ಪರಿಸರ ಪ್ರೀತಿಯಲ್ಲಿ ಕಾಯಕದಲ್ಲಿ ಗುರುತಿಸಿಕೊಂಡವರು. ಇವರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು .
ಕಾರ್ಕಳ ತಾಲೂಕಿನ ಸ್ಕೌಟ್ಸ್ ಗೈಡ್ಸ್ ಚಳುವಳಿಯ ಸೇವಾ ಸಂಸ್ಥೆಯಲ್ಲಿ ನಮಗೆ ಮಾರ್ಗದರ್ಶನ ಮಾಡಿದವರು. ಅವರು ಈ ಚಳುವಳಿಯಲ್ಲಿ ಅಧ್ಯಕ್ಷರಾಗಿ ಸುಮಾರು ಮೂವತ್ತೈದು ವರ್ಷಗಳಿಂದ ತೊಡಗಿಸಿಕೊಂಡವರು. ತಾಲೂಕು ಜಿಲ್ಲೆಯಲ್ಲಿ ರಾಜ್ಯ ಮಟ್ಟದಲ್ಲಿ ಹಾಗೂ ರಾಷ್ಟ್ರ ಮಟ್ಟದ ಚಟುವಟಿಕೆಯಲ್ಲಿ ಇವತ್ತು ಕಾರ್ಕಳ ಸಂಸ್ಥೆಯ ಗೌರವಕ್ಕೆ ಪ್ರೇರಣೆ ಇವರೇ ಆಗಿದ್ದರು.

ಇಂದು ಕಾರ್ಕಳ ತಾಲೂಕಿನ ಸ್ಕೌಟ್ಸ್ ಗೈಡ್ಸ್ ಚಟುವಟಿಕೆಯಲ್ಲಿ ಶಿಕ್ಷಕ ಮಿತ್ರರ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಂತೆಯೇ ವಿದ್ಯಾರ್ಥಿಗಳು ಕೂಡ .ಅದು ನಮ್ಮ ಸಂಸ್ಥೆಯ ವಿಜಯಿಭವರೆನಿಸಿದವರು. ಶಿಕ್ಷಕ ಮಿತ್ರರಾದ ನಾವೆಲ್ಲರೂ ಅವರ ಹಿತ ಮಾತಿನಿಂದಲೇ ಸ್ಪೂರ್ತಿ ಪಡೆದವರು. ಅವರು ತಾಲೂಕು ಸ್ಕೌಟ್ಸ್ ಗೈಡ್ಸ್ ಅಧ್ಯಕ್ಷರಾಗಿ ವಾರ್ಷಿಕ ಮಹಾಸಭೆಗೆ ಶ್ರೀಮದ್ ಭುವನೇಂದ್ರ ವಿದ್ಯಾಸಂಸ್ಥೆಗೆ ಆಗಮಿಸುತ್ತಿದ್ದರು .ಶಿಕ್ಷಕರ ಬಗ್ಗೆ ಅಪಾರ ಪ್ರೀತಿ ಮತ್ತು ಕಾಳಜಿ ಇತ್ತು. ಪದಾಧಿಕಾರಿಗಳೂ ಎಂದರೆ ಅದೇ ಆತ್ಮೀಯತೆ ಮತ್ತು ಗೌರವ. ಅಧ್ಯಕ್ಷೀಯ ಭಾಷಣ ಮಾಡಲು ಹೊರಟರೆಂದರೆ ಎಲ್ಲರ ಮುಖದಲ್ಲಿ ನಗು ಮಿಶ್ರಿತ ಗೌರವದ ಮೌನ ಮತ್ತು ನಮಗೆ ಹೊಸ ಜ್ಞಾನದ ನಿರೀಕ್ಷೆ. ಮಾತು ಪ್ರಾರಂಭವಾಗಿ ಗಂಭೀರತೆಯ ವಾರಿಧಿಯ ದಾಟಿ ಮತ್ತೆ ತಿಳಿ ಹಾಸ್ಯದ ತೆರೆಗಳಪ್ಪಳಿಸಿದಾಗ ಇಡೀ ಸಭೆಯು ನಗೆಗಡಲಲ್ಲಿ ತೇಲಾಡುವುದು. ಕಾರ್ಕಳ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾಗಿ ಆಯೋಜಿಸಿದ ಕಾರ್ಯಕ್ರಮಗಳೆಲ್ಲವೂ ಯಶಸ್ಸು.
ಸ್ಕೌಟ್ಸ್ ವಿಚಾರವಾಗಿ ಅವರ ಕಛೇರಿಗೆ ಭೇಟಿ ಕಛೇರಿಯಲ್ಲಿನ ಅಷ್ಟೂ ಕಾನೂನು ಕೃತಿಗಳ ಕಂಡರೆ ನಿರಂತರ ಅಧ್ಯಯನದ ಜ್ಞಾನದ ಮಧ್ಯೆ ಅಷ್ಟೇ ಕನ್ನಡ ಸಾಹಿತ್ಯದ ಆಸಕ್ತಿ ಮತ್ತು ಜ್ಞಾನವನ್ನು ಹೊಂದಿದ್ದರು. ಪ್ರಾಚೀನ ಕವಿಗಳಾದ ಪಂಪ ರನ್ನ ಪೊನ್ನ ಕುಮಾರವ್ಯಾಸ ಜನ್ನ ರತ್ನಾಕರವರ್ಣಿ ಲಕ್ಷ್ಮೀಶ ಮೊದಲಾದವರ ಕಾವ್ಯಗಳ ಸಾಲುಗಳನ್ನು ಕವಿ ಮುದ್ದಣನ ಕಾವ್ಯಗಳಿಂದ ತೊಡಗಿ ಆಧುನಿಕ ಸಾಹಿತಿಗಳಾದ ಕುವೆಂಪು ಬೇಂದ್ರೆ ಶಿವರಾಮ ಕಾರಂತ ಗೋಪಾಲಕೃಷ್ಣ ಅಡಿಗ ಪಂಜೆ ಮಂಗೇಶರಾಯ ಮುಳಿಯ ತಿಮ್ಮಪ್ಪಯ್ಯ ಮೊದಲಾರವರ ಕಾವ್ಯ ಕಥೆ ಕಾದಂಬರಿ ಸಾಹಿತ್ಯ ಸಾಲುಗಳನ್ನು ಹೇಳಿ ಖುಷಿಪಡುತ್ತಿದ್ದರಲ್ಲದೇ ನಮಗೂ ಕೃತಿಗಳನ್ನೂ ಓದುವ ಪ್ರೇರಣೆ ಮೂಡಿಸುತ್ತಿದ್ದರು. ನನಗರಿವಾದದು ಎಂ ಕೆ ವಿ ಕೆ ಯವರು ಕಲೆ ಸಂಸ್ಕೃತಿ ನಾಟಕ ಲಲಿತಕಲೆ ಯಕ್ಷಗಾನ ತುಳು ಜಾನಪದ ಸಾಹಿತ್ಯದ ಜ್ಞಾನ ವಿಸ್ತಾರದಲ್ಲಿ ನಿಸ್ಸೀಮರು ಅಂತಾ ನೋಡಿ ಬೆರಗಾದೆ. ಅಚ್ಚರಿಯೆಂದರೆ ವಿಲಿಯಂ ಷೇಕ್ಸ್ ಪಿಯರ್ ನ ಇಂಗ್ಲಿಷ್ ಸಾಹಿತ್ಯದ ಕಥನವನ್ನು ಅವರಿಂದ ಕೇಳಿದ್ದೇವೆ. ಇದೆಲ್ಲವೂ ಮುಖ್ಯ ಅವರ ಆತಿಥ್ಯ ಸ್ವೀಕರಿಸಿ ಬಿಸಿ ಬಿಸಿ ಮಸಾಲೆ ಸವಿಯುತ್ತಿರಲು ಅವರು ಹೇಳುವುದು ನಾವು ಚಿತ್ತಗೊಟ್ಟು ಕೇಳುವುದಾಗಿತ್ತು .ರಾಜಕೀಯ ಮುತ್ಸದ್ದಿಗೆ ದೇಶದ ನಾಡಿನ ಹಿರಿಯ ಕಿರಿಯ ರಾಜಕೀಯ ದಿಗ್ಗಜರ ಒಡನಾಟವಿತ್ತು. ಅವರ ಆಡು ಭಾಷೆಯಲ್ಲಿ ಅಪ್ಪಟ ದೇಶೀಪದ ತುಳು ಮಣ್ಣಭಾಷೆಯ ಕಂಪಿನ ಸೊಂಪು ಚೆಂದವೋ ಚೆಂದ. ದೇಶೀಯ ಪದ ಪ್ರಯೋಗದಿಂದ ಮತ್ತೆ ಮತ್ತೆ ಎಲ್ಲರಿಗೂ ಹಿತವಾಗಿ ಹತ್ತಿರವಾಗುತ್ತಿದ್ದರು. ಹಿರಿಯ ನಾಯಕನೆಂದೇ ಎಲ್ಲರಿಗೂ
ಗೌರವದ ವ್ಯಕ್ತಿಯಾಗಿದ್ದವರು.
ಈಗಲೂ ನನಗೆ ಕೇಳುವ ಮಾತು ಸ್ಕೌಟ್ಸ್ ಗೈಡ್ಸ್ ವಿಚಾರವಾಗಿ ಮಾತಾಡಲು ಕಛೇರಿಗೆ ಹೋದರೆ ದಾನೆ ಮಾಸ್ಟ್ರೇ.ಬಲೇ..ಏನು ಮಾಸ್ಟ್ರೇ...ಕೂತ್ಕೊಳ್ಳಿ..ಎಂದು ಅವರ . ಅವರು ಕಲಿಸಿಕೊಟ್ಟ ನಾಯಕತ್ವ, ಸಂಘಟನಾ ಕಲೆ, ಕಾರ್ಯಕ್ರಮ ಸಂಯೋಜನೆ , ಸಮಯ ಬದ್ಧತೆ ,ವಾಕ್ಪಟುತ್ವ ಗುಣ ಎಲ್ಲವೂ ಅವರಿಂದ ನಮಗೆ ಸಿಕ್ಕಿರುವ ಬೆಲೆಬಾಳುವ ಬಹುಮಾನವೇ ಸರಿ. ಹಾಗಾಗಿ ಅವರು ನಮಗೆ ಸದಾ ಪ್ರಾಥಃಸ್ಮರಣೀಯರಾಗುವರು.

ಲೇಖನ : ಗಣೇಶ್ ಜಾಲ್ಸೂರು

















































