ಬಿಪಿಎಲ್‌ ಕಾರ್ಡ್‌ ವಿತರಣೆಯಲ್ಲಿ ತಾರತಮ್ಯ

ಕಾರ್ಕಳ : ಪಂಚಗ್ಯಾರಂಟಿ ಯೋಜನೆ ಸಮರ್ಪಕ ಜಾರಿ ನಿಟ್ಟಿನಲ್ಲಿ ಅಧಿಕಾರಿಗಳು ಮುತುವರ್ಜಿ ವಹಿಸಬೇಕೆಂದು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ ಹೇಳಿದರು.
ಅವರು ಅ. 13ರಂದು ಕಾರ್ಕಳ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿದರು. ಸಮಿತಿಯ ಸದಸ್ಯೆ ಚರಿತ್ರಾ ಶೆಟ್ಟಿ ಮಾತನಾಡಿ, ಬಿಪಿಎಲ್ ಪಡಿತರ ಪಟ್ಟಿ ಹಂಚಿಕೆಯಲ್ಲಿ ತಾರತಮ್ಯವಾಗುತ್ತಿದೆ ಎಂದರು. ಈ ವೇಳೆ ಮಾತನಾಡಿದ ಅಜಿತ್‌ ಹೆಗ್ಡೆ ಇನ್ನೋವಾ ಕಾರು ಹೊಂದಿದವರಿಗೆ ಬಿಪಿಎಲ್‌, ಮಾರುತಿ 800 ಕಾರು ಇರುವ ಮನೆಗೆ ಎಪಿಎಲ್‌ ಕಾರ್ಡ್‌ ನೀಡಿರುವಂತಹ ಎಡವಟ್ಟು ಆಗಿದೆ ಎಂದರು. ಜಯ ಮೂಲ್ಯ ಇರ್ವತ್ತೂರು ಧ್ವನಿಗೂಡಿಸಿದರು. ಪ್ರತಿಕ್ರಿಯಿಸಿದ ಆಹಾರ ನಿರೀಕ್ಷಕಿ ಶಹನಾಝ್ ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಯತೀಶ್ ಕೋಟ್ಯಾನ್ ಕಲ್ಯಾ ಮಾತನಾಡಿ, ಕಳೆದ ಆರು ಸಭೆಗಳಲ್ಲಿ ಕಲ್ಯಾ, ಕುಂಟಾಡಿ, ಪಳ್ಳಿ ಮಾರ್ಗವಾಗಿ ಸರಕಾರಿ ಬಸ್ ಸಂಚಾರ ಅಗತ್ಯವಿದೆ ಎಂಬ ಬಗ್ಗೆ ಮನವಿ ನೀಡುತ್ತಾ ಬಂದಿರುತ್ತೇವೆ. ಆದರೆ, ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮೂಡುಬೆಳ್ಳೆ ಪಳ್ಳಿ ನಿಂಜೂರು ಮಾರ್ಗವಾಗಿ ಸಂಚರಿಸುತ್ತಿದ್ದ ಸರಕಾರಿ ಬಸ್ ಸೇವೆಯನ್ನು ಸ್ಥಗಿತಗೊಳಿಸಿದ್ದು, ಈ ಬಗ್ಗೆ ಕಳೆದ ನಾಲ್ಕು ತಿಂಗಳಿನಿಂದ ಜನತೆಯ ಪ್ರಶ್ನೆಗೆ ಉತ್ತರಿಸಲಾಗುತ್ತಿಲ್ಲ ಎಂದು ಸಂತೋಷ್ ಶೆಟ್ಟಿ ನಿಂಜೂರು ದೂರಿದರು. ಸಾರಿಗೆ ಅಧಿಕಾರಿ ಮಾತನಾಡಿ, ಸದಸ್ಯರ ಬೇಡಿಕೆಯಂತೆ ಹೆಚ್ಚುವರಿ ಬಸ್ ಓಡಾಟಕ್ಕೆ ಸರ್ವೇ ಕಾರ್ಯ ನಡೆಸುತ್ತಿದ್ದೇವೆ ಎಂದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಗೆ ಬ್ಯಾಂಕಿನವರು ಬರುವಂತಾಗಬೇಕು. ಈ ಮೂಲಕ ಜನರ ಸಮಸ್ಯೆಗಳಿಗೆ ಬ್ಯಾಂಕ್ ಸಿಬ್ಬಂದಿ ಸ್ಪಂದಿಸುವಂತಾಗಬೇಕೆಂದರು.
ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಜಿತ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ರಾವ್, ಸದಸ್ಯರಾದ ರಜನಿ, ಪ್ರಶಾಂತ್ ಪೂಜಾರಿ, ಶೋಭಾರಾಣಿ, ಜಯ ಕುಲಾಲ್, ಸಂತೋಷ್ ದೇವಾಡಿಗ, ಸಂತೋಷ್ ಶೆಟ್ಟಿ, ವಿಶ್ವನಾಥ ಭಂಡಾರಿ, ಹೇಮಂತ್ ಆಚಾರ್ಯ, ಯತೀಶ್ ಕೋಟ್ಯಾನ್, ಫಿಲಿಪ್ ಮಸ್ಕರೇನಸ್, ಮೆಸ್ಕಾಂ ಇಲಾಖೆಯ ಶಿಲ್ಪಾ ಎಸ್. ಶೆಟ್ಟಿ, ಆಹಾರ ಇಲಾಖೆಯ ಶಹನಾಝ್, ಉಡುಪಿ ಲೀಡ್ ಬ್ಯಾಂಕ್‌ನ ಹರೀಶ್ ಜಿ., ಸಿಡಿಪಿಓ ಶ್ರೀಲತ ಎನ್., ಕೆಎಸ್‌ಆರ್‌ಟಿಸಿ ಉಡುಪಿಯ ಅಶೋಕ್ ಜಿ. ಹೆಗ್ಡೆ, ತಾ.ಪಂ.ನ ಕೃಷ್ಣಾನಂದ ಕೆ., ಮೆಸ್ಕಾಂ ವಿಭಾಗದ ವಿನಾಯಕ ಕೆ. ಕಾಮತ್ ಮತ್ತಿತರರು ಉಪಸ್ಥಿತರಿದ್ದರು.









































































































error: Content is protected !!
Scroll to Top