ಶ್ರೀನಗರ : ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಏ. 22ರಂದು ಭಯೋತ್ಪಾದಕ ದಾಳಿಯ ಬಳಿಕ ಮುಚ್ಚಲಾಗಿರುವ ಜಮ್ಮು ಮತ್ತು ಕಾಶ್ಮೀರದ ಏಳು ಪ್ರಸಿದ್ಧ ಪ್ರವಾಸಿ ತಾಣಗಳು ಸೆ.29ರಿಂದ ಮತ್ತೆ ತೆರೆಯಲಿವೆ. ಶ್ರೀನಗರದ ರಾಜ್ ಭವನದಲ್ಲಿ ನಡೆದ ಸಭೆಯಲ್ಲಿ ಸಂಪೂರ್ಣ ಭದ್ರತಾ ಪರಿಶೀಲನೆ ನಡೆಸಿ ಪ್ರವಾಸಿ ತಾಣಗಳನ್ನು ಸಾರ್ವಜನಿಕರ ಪ್ರವೇಶಕ್ಕೆ ತೆರೆಯಲು ನಿರ್ಧಾರ ಕೈಗೊಳ್ಳಲಾಯಿತು ಎಂದು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಶುಕ್ರವಾರ ತಿಳಿಸಿದ್ದಾರೆ.
ಭದ್ರತಾ ಪರಿಶೀಲನೆ ಮತ್ತು ಚರ್ಚೆಯ ಅನಂತರ ಮುನ್ನೆಚ್ಚರಿಕೆ ಕ್ರಮವಾಗಿ ತಾತ್ಕಾಲಿಕವಾಗಿ ಮುಚ್ಚಲ್ಪಟ್ಟ ಕಾಶ್ಮೀರ ಮತ್ತು ಜಮ್ಮು ವಿಭಾಗಗಳಲ್ಲಿ ಹೆಚ್ಚಿನ ಪ್ರವಾಸಿ ತಾಣಗಳನ್ನು ಮತ್ತೆ ತೆರೆಯಲು ನಾನು ಆದೇಶಿಸಿದ್ದೇನೆ ಎಂದು ಹೇಳಿರುವ ಸಿನ್ಹಾ ಕಾಶ್ಮೀರ ವಿಭಾಗದಲ್ಲಿ ಮತ್ತೆ ತೆರೆಯಲಾಗುವ ಏಳು ತಾಣಗಳಲ್ಲಿ ಅರು ಕಣಿವೆ, ರಾಫ್ಟಿಂಗ್ ಪಾಯಿಂಟ್ ಯನ್ನೆರ್, ಅಕ್ಕಡ್ ಪಾರ್ಕ್, ಪದಶಾಹಿ ಪಾರ್ಕ್ ಮತ್ತು ಕಮನ್ ಪೋಸ್ಟ್ ಸೇರಿವೆ. ಹೆಚ್ಚುವರಿಯಾಗಿ ಜಮ್ಮು ವಿಭಾಗದ ಐದು ಸ್ಥಳಗಳಾದ ದಗನ್ ಟಾಪ್, ರಾಂಬನ್, ಕಥುವಾದಲ್ಲಿನ ಧಾಗ್ಗರ್, ಸಲಾಲ್‌ನಲ್ಲಿರುವ ಶಿವ ಗುಹೆ ಮತ್ತು ರಿಯಾಸಿ ಕೂಡ ತೆರೆಯಲಾಗುವುದು ಎಂದರು.

















