ಸಿಬ್ಬಂದಿಯಿಂದಲೇ ಕೊಲೆ
ಕಾರ್ಕಳ : ಹೊಟೇಲ್ ಮಾಲಕನನ್ನು ಸಿಬ್ಬಂದಿಯೇ ಕೊಲೆ ಮಾಡಿದ ಘಟನೆ ಆ. 26ರ ರಾತ್ರಿ ಪುಣೆಯಲ್ಲಿ ಸಂಭವಿಸಿದೆ. ಮೂಲತಃ ಎಣ್ಣೆಹೊಳೆಯ ಸಂತೋಷ್ ಶೆಟ್ಟಿ (46) ಕೊಲೆಯಾದವರು.
ಸಂತೋಷ್ ಶೆಟ್ಟಿಯವರು ಕಳೆದ ಹಲವು ವರ್ಷಗಳಿಂದ ಪುಣೆಯಲ್ಲಿ ಹೊಟೇಲ್ ಉದ್ಯಮ ಮಾಡಿಕೊಂಡಿದ್ದರು. ಮಂಗಳವಾರ ರಾತ್ರಿ ತನ್ನ ಹೊಟೇಲ್ ನಲ್ಲಿ ಉತ್ತರ ಪ್ರದೇಶ ಮೂಲದ ವೈಟರ್ ಮದ್ಯಪಾನ ಮಾಡಿ ಕೆಲಸ ಮಾಡುತ್ತಿದ್ದಕ್ಕೆ ಸಂತೋಷ್ ಶೆಟ್ಟಿ ಗದರಿದ್ದಾರೆ. ಇದರಿಂದ ಸಿಟ್ಟಿಗೆದ್ದ ವೈಟರ್ ಕಿಚನ್ ನಿಂದ ಕತ್ತಿ ಹಿಡಿದುಕೊಂಡು ಬಂದು ಸಂತೋಷ್ ಶೆಟ್ಟಿಯವರ ಕುತ್ತಿಗೆಗೆ ಕಡಿದು ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಸಂತೋಷ್ ಶೆಟ್ಟಿಯವರು ಪುಣೆಯಲ್ಲಿ ತುಳುಕೂಟ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು.
ಮೃತರು ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮೃತ ದೇಹವನ್ನು ಹುಟ್ಟೂರು ಎಣ್ಣೆಹೊಳೆಗೆ ತರಲಾಗುತ್ತಿದೆ ಎಂದು ತಿಳಿದುಬಂದಿದೆ.





















