ಬೆಂಗಳೂರು : ಕರ್ನಾಟಕದಲ್ಲಿ ಗಣ್ಯ ವ್ಯಕ್ತಿಗಳ (ವಿಐಪಿ) ಸಂಚಾರ ವೇಳೆ ಸೈರನ್ ಬಳಕೆಯನ್ನು ನಿಷೇಧಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ(ಡಿಜಿ, ಐಜಿಪಿ ) ಡಾ.ಎಂ.ಎ.ಸಲೀಂ ಅವರು ಜು.21ರಂದು ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕರ ಸುರಕ್ಷತೆ ಹಾಗೂ ಶಬ್ದ ಮಾಲಿನ್ಯ ನಿಯಂತ್ರಣ ದೃಷ್ಟಿಯಿಂದ ಸೈರನ್ ನಿಷೇಧಿಸಲಾಗಿದೆ. ಅಲ್ಲದೆ ಸೈರನ್ ಬಳಕೆ ಮಾಡುವುದರಿಂದ ಗಣ್ಯ ವ್ಯಕ್ತಿಗಳು ಯಾವ ರಸ್ತೆಯಲ್ಲಿ ಚಲಿಸುತ್ತಿದ್ದಾರೆ ಎಂಬ ಬಗ್ಗೆ ಅನಧಿಕೃತ ವ್ಯಕ್ತಿಗಳಿಗೆ ಮಾಹಿತಿ ರವಾನೆ. ಇದರಿಂದ ಗಣ್ಯ ವ್ಯಕ್ತಿಗಳಿಗೆ ಅಪಾಯ ಉಂಟಾಗುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ ವಿಐಪಿ ಸಂಚಾರದ ಸಂದರ್ಭದಲ್ಲಿ ವಾಹನಗಳ ಸೈರನ್ ಬಳಕೆಗೆ ಕಡಿವಾಣ ಹಾಕುವಂತೆ ಡಿಜಿ, ಐಜಿಪಿ ಆದೇಶಿಸಿದ್ದಾರೆ.
ವಿಐಪಿ ಸಂಚಾರದ ವೇಳೆ, ತುರ್ತು ಚಲನವಲನದ ಅವಶ್ಯಕತೆಗಳಿಗೆ ವೈರ್‌ಲೆಸ್ ಕಮ್ಯುನಿಕೇಶನ್ ಮುಖಾಂತರ ಮಾಹಿತಿ ವಿನಿಮಯ ಮಾಡಬೇಕು. ಸೈರನ್‌ಗಳನ್ನು ಕೇವಲ ಅಂಬ್ಯುಲೆನ್ಸ್, ಪೊಲೀಸ್, ಅಗ್ನಿಶಾಮಕ ವಾಹನಗಳು ತುರ್ತು ಪರಿಸ್ಥಿತಿಗಳಲ್ಲಿ ಮಾತ್ರ ಬಳಸಬೇಕೆಂದು ಅವರು ಆದೇಶದಲ್ಲಿ ಸೂಚಿಸಿದ್ದಾರೆ.




















