ಆಪರೇಷನ್ ಮೇಡ್ ಮ್ಯಾಕ್ಸ್ ಹೆಸರಿನಲ್ಲಿ ಕಾರ್ಯಾಚರಣೆ
ಉಡುಪಿ : ಉಡುಪಿಯನ್ನು ಕೇಂದ್ರವಾಗಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ಮಾದಕ ದ್ರವ್ಯ ನಿಯಂತ್ರಣ ಬ್ಯುರೋ (NCB) ಅಂತಾರಾಷ್ಟ್ರೀಯ ಮಾದಕ ವಸ್ತು ಜಾಲವನ್ನು ಬೇಧಿಸಿದ್ದು, 8 ಮಂದಿಯನ್ನು ಬಂಧಿಸಿದೆ.
ಭಾರತದ ಮಾದಕ ದ್ರವ್ಯ ನಿಯಂತ್ರಣ ಬ್ಯುರೋ ಕಳೆದ ಮೇ ತಿಂಗಳಲ್ಲಿ ‘ಆಪರೇಷನ್ ಮೇಡ್ ಮ್ಯಾಕ್ಸ್’ ಹೆಸರಲ್ಲಿ ಅಮೆರಿಕ, ಆಸ್ಟ್ರೇಲಿಯಾ, ಭಾರತ ಸೇರಿದಂತೆ ಹತ್ತಕ್ಕೂ ಹೆಚ್ಚು ದೇಶಗಳು ಮತ್ತು ನಾಲ್ಕು ಖಂಡಗಳಲ್ಲಿ ಕಾರ್ಯಾಚರಣೆಗೆ ಇಳಿದಿತ್ತು. ದೆಹಲಿ, ಜೈಪುರ, ಉಡುಪಿ ಹಾಗೂ ರೂರ್ಕಿಯಲ್ಲಿ ನಡೆಸಿದ್ದ ಕಾರ್ಯಾಚರಣೆ ಬಗ್ಗೆ ಟ್ವೀಟ್ ಮಾಡುವ ಮೂಲಕ ಗ್ರಹ ಸಚಿವ ಅಮಿತ್ ಶಾ ಖಚಿತಪಡಿಸಿದ್ದರು. ಉಡುಪಿ ಸೇರಿದಂತೆ ನಾಲ್ಕು ಪಟ್ಟಣಗಳಿಂದ ಆರೋಪಿಗಳನ್ನು ಎನ್‌ಸಿಬಿ ವಶಕ್ಕೆ ಪಡೆದಿದೆ.

ವಿದೇಶಗಳಲ್ಲಿ ನಿಷೇಧಿತ ಔಷಧಿ (ನಾರ್ ಕೋಟಿಕ್ಸ್ ಒಳಗೊಂಡ) ಪೂರೈಸುವ ಜಾಲ ಇದಾಗಿದ್ದು, ಆನ್ಲೈನ್ಜಾಹೀರಾತು ಮತ್ತು ಫೋನ್ ಸಂಖ್ಯೆ ಹಂಚಿ ವಿದೇಶಗಳಲ್ಲಿ ಡ್ರಗ್ಸ್ ವಿತರಣೆ ಮಾಡಲಾಗುತ್ತಿತ್ತು. ಗ್ರಾಹಕರ ಕರೆಗಳನ್ನು ಸ್ವೀಕರಿಸಲು ಉಡುಪಿಯಲ್ಲಿ ಕಾಲ್ ಸೆಂಟರ್ ಇದ್ದ ಶಂಕೆ ವ್ಯಕ್ತವಾಗಿದ್ದು, ತಮಿಳು ಮೂಲದ ಆರೋಪಿ ಜಾಯಲ್ ಅಲ್ಬಾ ಎಂಬಾತನನ್ನು ಎನ್‌ಸಿಬಿ ಅಧಿಕಾರಿಗಳು ಉಡುಪಿಯಲ್ಲಿ ಬಂಧಿಸಿದ್ದಾರೆ. ದೆಹಲಿ ಮೂಲಕ ಇತರ ದೇಶಗಳಿಗೆ ಡ್ರಗ್ಸ್ ಸರಬರಾಜಾಗುತ್ತಿತ್ತು. ಒಂದು ತಿಂಗಳ ಹಿಂದೆ ಎನ್‌ಸಿಬಿ ಅಧಿಕಾರಿಗಳಿಂದ ದೆಹಲಿ ಮೂಲದ ಮುಖ್ಯಸ್ಥನನ್ನು ಬಂಧಿಸಲಾಗಿತ್ತು.






































