ಬೆಂಗಳೂರು : ಸಿಎಂ ಕಾರ್ಯಕ್ರಮದಲ್ಲಿ ಅವಮಾನಕ್ಕೆ ಒಳಗಾಗಿದ್ದ ಧಾರವಾಡ ಎಎಸ್‌ಪಿ ನಾರಾಯಣ ಬರಮಣ್ಣಿ ಸ್ವಯಂ ನಿವೃತ್ತಿಗೆ ಮುಂದಾಗಿದ್ದು, ಈ ಬಗ್ಗೆ ಅವರು ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಇದೀಗ ಗೃಹ ಇಲಾಖೆಯಿಂದ ಸ್ವಯಂ ನಿವೃತ್ತಿ ಅಂಗೀಕಾರಕ್ಕೆ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಜುಲೈ 6ಕ್ಕೆ ಡೆಡ್‌ಲೈನ್ ಫಿಕ್ಸ್ ಮಾಡಿದ್ದು, ಅಷ್ಟರೊಳಗೆ ವಿಆರ್‌ಎಸ್ ಪತ್ರ ವಾಪಸ್ ಪಡೆಯದೇ ಇದ್ದರೆ ಸ್ವಯಂ ನಿವೃತ್ತಿ ಅಂಗೀಕರಿಸುವಂತೆ ಸೂಚನೆ ನೀಡಲಾಗಿದೆ.
ಬೆಳಗಾವಿ ಸಮಾರಂಭದಲ್ಲಿ ಬಿಜೆಪಿ ಕಾರ್ಯಕರ್ತರು ಏಕಾಏಕಿ ಪ್ರತಿಭಟನೆಗೆ ಮುಂದಾಗಿದ್ದರಿಂದ ಆಕ್ರೋಶಗೊಂಡ ಸಿಎಂ ವೇದಿಕೆ ಮೇಲೆಯೇ ಎಎಸ್‌ಪಿ ನಾರಾಯಣ ಬರಮಣ್ಣಿ ಅವರ ಮೇಲೆ ಕಪಾಳಮೋಕ್ಷಕ್ಕೆ ಮುಂದಾಗಿದ್ದರು. ಈ ಸನ್ನಿವೇಶದಿಂದ ಅಧಿಕಾರಿ ನೊಂದುಕೊಂಡಿದ್ದರು. ಅದೇ ಕಾರಣಕ್ಕೆ ಸ್ವಯಂ ನಿವೃತ್ತಿಯ ನಿರ್ಧಾರ ಕೈಗೊಂಡಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.
ಸ್ವಯಂಪ್ರೇರಿತ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದ ನಾರಾಯಣ ಬರಮಣ್ಣಿ ಅವರ ಮನವೊಲಿಸಲು ಹಿರಿಯ ಅಧಿಕಾರಿಗಳು ಸಿಎಂ ಸಮ್ಮುಖದಲ್ಲಿ ಪ್ರಯತ್ನಿಸಿದ್ದರು ಎನ್ನಲಾಗಿತ್ತು. ಇದೀಗ ಜುಲೈ 6ರ ಒಳಗೆ ಸ್ವಯಂ ನಿವೃತ್ತಿಗೆ ಸಲ್ಲಿಸಿರುವ ಅರ್ಜಿ ಹಿಂಪಡೆಯದೇ ಇದ್ದರೆ, ಅಂಗೀಕರಿಸುವಂತೆ ಗೃಹ ಇಲಾಖೆ ಸೂಚನೆ ನೀಡಿರುವುದಾಗಿ ತಿಳಿದು ಬಂದಿದೆ.






































