ಸರಕಾರದ ಸೌಲಭ್ಯ ಸದುಪಯೋಗವಾಗಲಿ – ಶ್ರೀನಿವಾಸ್
ಕಾರ್ಕಳ : ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ ಸರಕಾರ ಹಲವಾರು ಕಾರ್ಯಕ್ರಮಗಳು ಜಾರಿಗೊಳಿಸಿದೆ. ಆ ಯೋಜನೆಗಳ ಸದುಪಯೋಗ ಆಗಬೇಕೆಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಬೆಂಗಳೂರಿನ ಸಹಾಯಕ ನಿರ್ದೇಶಕ ಹೆಚ್. ಶ್ರೀನಿವಾಸ್ ಹೇಳಿದರು.
ಅವರು ಜೂ. 29ರಂದು ಪೇರಡ್ಕ ಮಲೆಕುಡಿಯ ಸಮುದಾಯ ಭವನದಲ್ಲಿ ಜರುಗಿದ ಜಿಲ್ಲಾ ಮಲೆಕುಡಿಯ ಸಂಘದ 13ನೇ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದರು.
ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ ಉಡುಪಿ ಇದರ ಯೋಜನಾ ಸಮನ್ವಯಾಧಿಕಾರಿ ನಾರಾಯಣ ಸ್ವಾಮಿ ಮಾತನಾಡಿ, ಕಬ್ಬಿನಾಲೆ ಮತ್ತಾವು ಸೇತುವೆಗೆ ಸರಕಾರದಿಂದ 2 ಕೋಟಿ ರೂ. ಅನುದಾನ ಮಂಜೂರಾಗಿದೆ. ಈ ಮೂಲಕ ಮಲೆಕುಡಿಯ ಸಮುದಾಯದ 50 ವರ್ಷಗಳ ಬೇಡಿಕೆ ಈಡೇರಿದೆ ಎಂದರು.
ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ ಉಡುಪಿ ಇದರ ವ್ಯವಸ್ಥಾಪಕ ವಿಶ್ವನಾಥ್ ಮಾತನಾಡಿ, ಮಲೆಕುಡಿಯ ಜನಾಂಗದವರು ಸಂಘಟಿತರಾಗಿ ಸರಕಾರದ ಸೌಲಭ್ಯ ಪಡೆಯುತ್ತಿರುವುದು ಶ್ಲಾಘನೀಯ ಎಂದರು.
ರಾಜ್ಯ ಮಲೆಕುಡಿಯ ಸಂಘದ ಅಧ್ಯಕ್ಷ ಶ್ರೀಧರ್ ಗೌಡ ಈದು ಮಾತನಾಡಿ, ಸಂಘದ ಪ್ರಾರಂಭ ದಿನದಿಂದಲೂ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಮುಂದಿನ ದಿನಗಳಲ್ಲೂ ಇಂತಹ ಕಾರ್ಯಕ್ರಮಗಳು ನಡೆಸಲು ಸಮುದಾಯದ ಬೆಂಬಲ ಬೇಕೆಂದರು. ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಗೌಡ ಅಧ್ಯಕ್ಷತೆ ವಹಿಸಿದ್ದರು.

ಸನ್ಮಾನ
2025ನೇ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸೆಲ್ಸಿ ಟಾಪರ್ ಸ್ವಾತಿ ಹೆರ್ಮುಂಡೆ ಹಾಗೂ ದ್ವಿತೀಯ ಪಿಯುಸಿ ಟಾಪರ್ ಧೀರಜ್ ನೂರಾಳ್ ಬೆಟ್ಟು (ವಿಜ್ಞಾನ ವಿಭಾಗ), ಕಲಾ ವಿಭಾಗ (ಪ್ರಜ್ಞಾ ಕೆರ್ವಾಶೆ), ವಾಣಿಜ್ಯ ವಿಭಾಗ ವಿದ್ಯಾ ಕೆರ್ವಾಶೆ ಅವರನ್ನು ಸನ್ಮಾನಿಸಲಾಯಿತು. ಆಯ್ದ ಪ್ರತಿಭಾವಂತ 13 ವಿದ್ಯಾರ್ಥಿಗಳಿಗೆ ಮಾಸಿಕ ಪ್ರೋತ್ಸಾಹಧನ, 3 ಅಶಕ್ತ ಕುಟುಂಬಗಳಿಗೆ ಸಹಾಯಧನ ವಿತರಿಸಲಾಯಿತು. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಮುದಾಯದವರನ್ನು ಗೌರವಿಸಲಾಯಿತು.
ರಾಜ್ಯ ಸಂಘಟನಾ ಕಾರ್ಯದರ್ಶಿ ನೋಣಯ್ಯ ಗೌಡ ರೆಂಜಾಳ, ಜಿಲ್ಲಾ ಸಂಘದ ಉಪಾಧ್ಯಕ್ಷ ಶೋಭಾ ನೂರಾಳ್ ಬೆಟ್ಟು, ಸಂಘದ ವಕ್ತಾರ ದಿನೇಶ್ ಗೌಡ ನೂರಾಳ್ ಬೆಟ್ಟು , ಸಹ ವಕ್ತಾರೆ ಸುಜಾತ ಕಬ್ಬಿನಾಲೆ, ಕ್ರೀಡಾ ಸಮಿತಿ ಅಧ್ಯಕ್ಷರಾದ ಕರ್ಣ ನೂರಾಳ್ ಬೆಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರಾವ್ಯ ಪ್ರಾರ್ಥಿಸಿ, ಕೋಶಾಧಿಕಾರಿ ಸುಂದರಿ ಪೇರಡ್ಕ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಶೋಕ ಕೆರ್ವಾಶೆ ಕಾರ್ಯಕ್ರಮ ನಿರೂಪಿಸಿದರು. ಸಹ ಕಾರ್ಯದರ್ಶಿ ಮಲ್ಲಿಕಾ ಮಾಳ ವಂದಿಸಿದರು.






















