ಸಂವಿಧಾನ ಪೀಠಿಕೆಯ ಸಮಾಜವಾದ-ಜಾತ್ಯಾತೀತ ಪದಗಳನ್ನು ತೆಗೆದರೆ ಬಿಜೆಪಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆ – ಬಿಪಿನ್‌ಚಂದ್ರ ಪಾಲ್‌ ನಕ್ರೆ

ಕಾರ್ಕಳ : ತುರ್ತು ಪರಿಸ್ಥಿತಿಯ ಸಂದರ್ಭ ಸಂವಿಧಾನದ ಪೀಠಿಕೆಗೆ ಸೇರಿಸಲಾದ ಸಮಾಜವಾದ ಮತ್ತು ಜಾತ್ಯಾತೀತ ಪದಗಳು ಭಾರತ‌ದ ಪ್ರಜಾತಂತ್ರ ವ್ಯವಸ್ಥೆ ಪ್ರತಿಪಾದಿಸುವ ಸಮಾನತೆ, ಸೌಹಾರ್ಧತೆ ಮತ್ತು ಸಮಗ್ರ ಅಭಿವೃದ್ಧಿಯ ಸಾಮಾಜಿಕ ನ್ಯಾಯದ ಭದ್ರ ಬುನಾದಿಯ ಅಡಿಗಲ್ಲುಗಳಾಗಿವೆ. ಇದನ್ನು ಕೀಳಲು ಹೊರಟರೆ ದೇಶದಲ್ಲಿ ಜನಾಂದೋಲನವೆದ್ದು ಬಿಜೆಪಿ ತನ್ನ ಅಸ್ತಿತ್ವವನ್ನೆ ಕಳೆದುಕೊಳ್ಳಲಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್‌ಚಂದ್ರ ಪಾಲ್ ನಕ್ರೆ ಹೇಳಿದ್ದಾರೆ.

70ರ ದಶಕದ ಆದಿಭಾಗದಲ್ಲಿ ದೇಶದಲ್ಲಿ ಆಂತರಿಕ ರಾಜಕೀಯ ಮತ್ತು ಸಾಮಾಜಿಕ ಪಲ್ಲಟಗಳ ಪರಿಣಾಮವಾಗಿ ಉಂಟಾದ ಬಂಡವಾಳಶಾಹಿ ಪ್ರವೃತ್ತಿಯ ಸಮಾಜವಾದಿ ಮುಖವಾಡದ ಆಂದೋಲನಗಳು, ಪ್ರತಿಭಟನೆಗಳು, ಉಗ್ರವಾದಿ ಚಟುವಟಿಕೆಗಳು ಅಂಬೇಡ್ಕರ್ ಸಂವಿಧಾನದ ಆಶಯ ತತ್ವ ಸಿದ್ಧಾಂತಗಳನ್ನು ಅಣಕಿಸುವಂತಿತ್ತು. ಆ ಸಂದರ್ಭ ದೇಶದಲ್ಲಿ ತಳಹಂತದ ವರ್ಗಕ್ಕೆ ನೈಜ ಸಾಮಾಜಿಕ ನ್ಯಾಯವನ್ನು ಒದಗಿಸುವುದು ಅನಿವಾರ್ಯವಾಗಿತ್ತು. ದೇಶದ ಸಂಪತ್ತಿನ ಸಮಾನ ಹಂಚಿಕೆ, ಶಿಕ್ಷಣದ ಅವಕಾಶ, ಉದ್ಯೋಗ ಸೃಷ್ಠಿ, ಅಸ್ಪರ್ಶತೆ ನಿವಾರಣೆ ಮೊದಲಾದ ಜನಪರ ಕೆಲಸಗಳು ಆಳುವ ಸರಕಾರದ ಆದ್ಯತೆಗಳಾಗಿ ಹೊರಹೊಮ್ಮಿದವು. ಇದಕ್ಕೆ ಪೂರಕವಾಗಿ ಪ್ರಧಾ‌ನಿ ಇಂದಿರಾ ಗಾಂಧಿಯವರಿಗೆ ಅಂದು ವಿನೋಭಾ ಭಾವೆಯವರು ಹಮ್ಮಿಕೊಂಡಿದ್ದ ಭೂಧಾನ ಚಳವಳಿ ಸ್ಪೂರ್ತಿಯಾಗಿ ಧೈರ್ಯ ತುಂಬಿತ್ತು. ಆ ನೆಲೆಯಲ್ಲಿ ಸಾಮಾಜಿಕ ಅಭ್ಯುದಯವನ್ನು ಗುರಿಯಾಗಿಸಿ 20 ಅಂಶ ಕಾರ್ಯಕ್ರಮವನ್ನು ದೇಶಾದ್ಯಂತ ಜಾರಿಗೊಳಿಸುವ ನಿಟ್ಟಿನಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಸಂವಿಧಾನದ ಪೀಠಿಕೆಗೆ ಸಮಾಜವಾದ ಮತ್ತು ಜಾತ್ಯಾತೀತ ಪದಗಳನ್ನು ಸೇರಿಸಲಾಯಿತು. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿರುವ ಬಿಪಿನ್‌ಚಂದ್ರ ಪಾಲ್‌ ನಕ್ರೆ ಅಂದಿನ 20 ಅಂಶ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನದಿಂದಾಗಿ ಮುಂದಿನ ಕೆಲವೇ ವರ್ಷಗಳಲ್ಲಿ ಭಾರತ ವಿಶ್ವದ ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಬಂದು ನಿಂತಿತ್ತು ಎಂದಿದ್ದಾರೆ.

1949ರಿಂದ ಇಂದಿನವರೆಗೆ ಬಿಜೆಪಿಯ ಮೂಲಭೂತವಾದಿ ಚಿಂತನಾ ಕಮ್ಮಟ ಅಂಬೇಡ್ಕರ್ ಪ್ರತಿಪಾದಿಸಿದ ದೇಶದ ಸಂವಿಧಾನವನ್ನು ವಿರೋದಿಸುತ್ತಲೇ ಬಂದಿದೆ. ಲೋಕಸಭೆಯಲ್ಲಿ 400 ಸದಸ್ಯ ಬಲಹೊಂದಿ ಮನುಸ್ಮೃತಿ ಯನ್ನು ದೇಶದ ಸಂವಿಧಾನವನ್ನಾಗಿ ಜಾರಿಗೆ ತರುವುದು ಈ ಮನುವಾದಿ ಸಾರ್ವರ್ಕಾರ್, ಗೋಳ್ವಾರ್ಕಾರ್ ಶಿಷ್ಯಂದಿರ ಗುಪ್ತ ರಾಜಕೀಯ ಕಾರ್ಯಸೂಚಿಯಾಗಿದೆ. ಆ ನೆಲೆಯಲ್ಲಿ ಸಂವಿಧಾನದ ಪೀಠಿಕೆಗೆ ಸೇರಿಸಲಾದ ಸಹಬಾಳು ಸಮಪಾಲು ಸಿದ್ಧಾಂತದ ಸಮಾಜವಾದ, ಸರ್ವ ಧರ್ಮ ಸಮನ್ವಯತೆಯ ಗುರಿಹೊಂದಿದ ಜಾತ್ಯಾತೀತತೆ ಇವರಿಗೆ ದೇಶದ್ರೋಹವಾಗಿ ಕಾಣುತ್ತದೆ ಎಂದು ಬಿಪಿನ್‌ಚಂದ್ರ ಪಾಲ್ ನಕ್ರೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.









































































































error: Content is protected !!
Scroll to Top