ಆತಂಕ ಬೇಡ – ಮುನ್ನೆಚ್ಚರಿಕೆ ಅಗತ್ಯ
ಕಾರ್ಕಳ : ಮಳೆ, ಬಿಸಿಲು ಹೀಗೆ ಹವಾಮಾನ ಬದಲಾವಣೆಯಿಂದ ಡೆಂಗ್ಯೂ/ಮಲೇರಿಯಾ ರೋಗವು ಹರಡಲು ಉಡುಪಿ ಜಿಲ್ಲೆಯಲ್ಲಿ ಅನುಕೂಲಕರವಾದ ವಾತಾವರಣ ಸೃಷ್ಟಿಯಾಗಿದೆ. ವಾಡಿಕೆಯ ಆರಂಭಕ್ಕೆ ಮುಂಚಿತವಾಗಿ ಮುಂಗಾರು ಮಳೆ ಆಗಮನದಿಂದ ಈ ವರ್ಷ ಡೆಂಗ್ಯೂ ಹಾವಳಿಯೂ ಬೇಗನೇ ಕಂಡುಬಂದಿದೆ. ಉಡುಪಿ ಜಿಲ್ಲೆಯಲ್ಲಿ ಈ ವರ್ಷದ ಜನವರಿಯಿಂದ ಜೂನ್ವರೆಗೆ ಒಟ್ಟು 54 ಪ್ರಕರಣ ವರದಿಯಾಗಿದೆ. ಉಡುಪಿ ತಾಲೂಕಿನಲ್ಲಿ 27, ಕುಂದಾಪುರ ತಾಲೂಕಿನಲ್ಲಿ 5, ಕಾರ್ಕಳ ತಾಲೂಕಿನಲ್ಲಿ 22 ಡೆಂಗ್ಯೂ ಪ್ರಕರಣಗಳು ದಾಖಲಾಗಿದೆ. ಕಾರ್ಕಳ ತಾಲೂಕಿನ ಮಾಳ, ಶಿರ್ಲಾಲು, ಅಜೆಕಾರು, ಕೆರ್ವಾಶೆ, ಹೆಬ್ರಿ ಪರಿಸರದಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿದೆ. ಕಳೆದ ವರ್ಷ ಇದೇ ಅವಧಿಗೆ ಜಿಲ್ಲೆಯಲ್ಲಿ 91 ಪ್ರಕರಣ ದಾಖಲಾಗಿತ್ತು.
ಡೆಂಗ್ಯೂ ಜ್ವರ ಸಾಂಕ್ರಮಿಕ ರೋಗ. ಈಡೀಸ್ ಈಜಿಪ್ಟೆ ಎಂದು ಕರೆಯಲ್ಪಡುವ ಸೊಳ್ಳೆ ಕಚ್ಚುವುದರಿಂದ ಡೆಂಗ್ಯೂ ಜ್ವರ ಹರಡುತ್ತದೆ. ಈ ಸೊಳ್ಳೆ ನಿಂತ ನೀರಿನಲ್ಲಿ ಉತ್ಪತ್ತಿಯಾಗುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಡೆಂಗ್ಯೂ ಅಪಾಯಕಾರಿ.

ಲಕ್ಷಣಗಳು
ವಿಪರೀತ ಜ್ವರ, ತಲೆನೋವು, ಮೈ – ಕೈ ನೋವು, ಕೀಲು ನೋವು, ವಾಕರಿಕೆ, ವಾಂತಿ, ಕಣ್ಣಿನ ಗುಡ್ಡೆಗಳ ಹಿಂಭಾಗದಲ್ಲಿ ನೋವು, ಇದನ್ನು ನಿವಾರಿಸದಿದ್ದರೆ ವಾಂತಿಯಲ್ಲಿ ರಕ್ತ, ಬಲಹೀನತೆ, ವಸಡಿನ ರಕ್ತಸ್ರಾವವಾಗುವುದು ಡೆಂಗ್ಯೂವಿನ ಸಾಮಾನ್ಯ ಲಕ್ಷಣವಾಗಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಲಾರ್ವಾ ಉತ್ಪತ್ತಿ ತಾಣಗಳ ನಾಶಕ್ಕಾಗಿ ಒಟ್ಟು 25 ಸ್ವಯಂ ಸೇವಕರನ್ನು100 ದಿನಗಳಿಗೆ ನಿಯಮಿತವಾಗಿ ನೇಮಿಸಲಾಗಿದೆ. ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಮಾಹಿತಿ ಕಾರ್ಯಾಗಾರ, ಜಾಥಾ, ಸಭೆಗಳು ನಡೆಯುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಆಶಾ ಕಾರ್ಯಕರ್ತೆಯರಿಂದ ಆರೋಗ್ಯ ಜಾಗೃತಿ ಮೂಡಿಸುವ ಕೆಲಸವಾಗುತ್ತಿದೆ. ಪಂಚಾಯತ್ ರಾಜ್ ಇಲಾಖೆ ಮತ್ತು ನಗರ ಸ್ಥಳೀಯ ಆಡಳಿತವು ಸ್ವಚ್ಛತಾ ಕಾರ್ಯಕ್ಕೆ ಒತ್ತು ನೀಡುತ್ತಿದೆ.
ಮುನ್ನೆಚ್ಚರಿಕೆ ಕ್ರಮ
ಮನೆಯ ಸುತ್ತಮುತ್ತ ನೀರು ಸಂಗ್ರಹವಾಗದಂತೆ ನೋಡಿಕೊಳ್ಳುವುದು. ಸೊಳ್ಳೆ ಕಚ್ಚದಂತೆ ಮೈತುಂಬಾ ಬಟ್ಟೆ ಧರಿಸುವುದು. ಸೊಳ್ಳೆ ನಿಯಂತ್ರಣ ಕ್ರಮ ಕೈಗೊಳ್ಳುವುದು, ಬೇವಿನ ಹೊಗೆ ಹಾಕಿ ಸೊಳ್ಳೆ ಸುಳಿಯದಂತೆ ಮಾಡುವುದು, ಸೊಳ್ಳೆ ಉತ್ಪತ್ತಿ ತಾಣಗಳಾದ ಅಂದರೆ ನಿಂತ ನೀರಿನ ಮೇಲೆ ಸೀಮೆ ಎಣ್ಣೆ ಅಥವಾ ಇನ್ನಿತರ ಎಣ್ಣೆ ಸುರಿಯುವುದು, ಸೊಳ್ಳೆ ನಿರೋಧಕ ಪರದೆ ಬಳಸಿ ಸೊಳ್ಳೆಯಿಂದ ರಕ್ಷಣೆ ಪಡೆಯಬಹುದಾಗಿದೆ. ರೋಗ ನಿರೋಧಕ ಶಕ್ತಿ ವೃದ್ಧಿಸುವಂತಹ ಪದಾರ್ಥಗಳನ್ನು ಸೇವಿಸುವುದು ಕೂಡ ಮುಖ್ಯವಾಗಿದೆ.
ಸಹಾಯವಾಣಿ
ಆರೋಗ್ಯ ಇಲಾಖೆಗೆ ಸಂಬಂಧಪಟ್ಟ ಯಾವುದೇ ಮಾಹಿತಿ ಪಡೆಯಲು 08258 – 231788 ಅಥವಾ ಆರೋಗ್ಯ ಸಹಾಯವಾಣಿ 104 ನಂಬರ್ ಸಂಪರ್ಕಿಸಬಹುದಾಗಿದೆ.
ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ಕಾರ್ಯಪ್ರವೃತ್ತರಾಗಬೇಕು. ಡೆಂಗ್ಯೂ ಜ್ವರ ತಡೆಗಟ್ಟುವಲ್ಲಿ ಸೊಳ್ಳೆ ನಿಯಂತ್ರಣದ ಕ್ರಮ ಅಗತ್ಯ. ಈ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಜನರಿಗೆ ಮಾಹಿತಿ ನೀಡಲಾಗುತ್ತಿದೆ. ಜ್ವರ, ಮೈಕೈ ನೋವು, ಬೆನ್ನು ನೋವು ಕಂಡುಬಂದಲ್ಲಿ ಭಯಪಡುವ ಅಗತ್ಯವಿಲ್ಲ, ತಕ್ಷಣ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಬೇಕು.
ಡಾ. ಸಂದೀಪ್ ಕುಡ್ವ
ತಾಲೂಕು ಆರೋಗ್ಯಾಧಿಕಾರಿ, ಕಾರ್ಕಳ
ದಂಡ ವಿಧಿಸಲು ಅವಕಾಶ
ವಾಣಿಜ್ಯ ಸಂಸ್ಥೆ, ಹೊಟೇಲ್, ಲಾಡ್ಜ್, ಮಾಲ್, ಸಣ್ಣ ಅಂಗಡಿ, ಎಳನೀರು ವ್ಯಾಪಾರಿಗಳು, ಕಾರ್ಖಾನೆಗಳು ಮತ್ತು, ಕೈಗಾರಿಕೆಗಳು, ಥಿಯೇಟರ್ ಗಳು, ಸಮ್ಮೇಳನಾ ಸಭಾಂಗಣಗಳ ಸುತ್ತಮುತ್ತ ಡೆಂಗ್ಯೂ ಹರಡುವಂತೆ ನೀರು ನಿಂತಿರುವುದು ಕಂಡುಬಂದಲ್ಲಿ 2000 (ನಗರ) ರೂ., 1000 (ಗ್ರಾಮೀಣ) ರೂ. ದಂಡ ವಿಧಿಸಬಹುದಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಿರುತ್ತಾರೆ.
ಕೈ – ಕಾಲುಗಳಿಗೆ ಸೊಳ್ಳೆ ಕಚ್ಚದಂತೆ ತೆಂಗಿನ ಎಣ್ಣೆ ಹಚ್ಚುವುದು. ರೋಗ ನಿರೋಧಕ ಶಕ್ತಿ ವೃದ್ಧಿಸುವಂತಹ ಪದಾರ್ಥಗಳನ್ನು ಸೇವಿಸುವುದು. ಯೋಗ, ಪ್ರಾಣಾಯಾಮ ಮಾಡುವುದು. ಅರ್ಧ ಚಮಚ ಅಶ್ವಗಂಧ ಚೂರ್ಣವನ್ನು ಬಿಸಿಹಾಲಿನಲ್ಲಿ ಬೆರೆಸಿ ದಿನಕ್ಕೆರಡು ಸಲ ಸೇವಿಸುವುದು. ಬಿಸಿ ನೀರನ್ನು ಸಾಕಷ್ಟು ಪ್ರಮಾಣದಲ್ಲಿ ಕುಡಿಯುವುದು. ಬಿಸಿ ಊಟ, ಶುದ್ಧ ಆಹಾರ ಸೇವಿಸುವುದು. ಪಪ್ಪಾಯ ಎಲೆಯನ್ನು ಜಜ್ಜಿ ಅದರ ರಸ ತೆಗೆದು ಒಂದು ಚಮಚ ರಸವನ್ನು ದಿನಕ್ಕೆರಡು ಸಲ ಸೇವಿಸುವುದು. ಒಂದು ಲೋಟ ನೀರಿಗೆ ನಾಲ್ಕೈದು ಎಲೆ ತುಳಸಿ ಎಲೆಯನ್ನು ಹಾಕಿ ಕುದಿಸಿ, ಸೋಸಿ ಸೇವಿಸುವುದು. ಒಂದು ಲೋಟ ನೀರಿಗೆ ನಾಲ್ಕೈದು ಎಲೆ ತುಳಸಿ ಎಲೆ, ಸ್ವಲ್ಪ ಅರಿಶಿಣ, ಬೆಲ್ಲ, ಒಂದು ಚಮಚ ಕರಿಮೆಣಸಿನ ಪುಡಿ ಹಾಕಿ ಅರ್ಧ ಗ್ಲಾಸ್ ಆಗುವ ತನಕ ಕುದಿಸಿ ಸೋಸಿ ಸೇವಿಸುವುದು ಉತ್ತಮ.
ಡಾ. ಹರ್ಷಾ ಕಾಮತ್
ಆಯುರ್ವೇದ ವೈದ್ಯರು, ಕಾರ್ಕಳ






























































