2 ದಿನದ ಹಸುಗೂಸು 1 ಲಕ್ಷ ರೂ. ಗೆ ಕಾರ್ಕಳದ ದಂಪತಿಗೆ ಮಾರಾಟ – ದೂರು ದಾಖಲು

ಕಾರ್ಕಳ : ಹೆರಿಗೆಯಾಗಿ ಎರಡು ದಿನಗಳಲ್ಲಿ ಮಗುವನ್ನು 1 ಲಕ್ಷ ರೂ.ಗೆ ಮಾರಾಟ ಮಾಡಿದ ಚಿಕ್ಕಮಗಳೂರಿನ ದಂಪತಿ ಹಾಗೂ ಮಧ್ಯವರ್ತಿ ಮಹಿಳೆ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಾನೂರು ಗ್ರಾಮ ಪಂಚಾಯಿತಿಯ ಹರಾವರಿ ಗ್ರಾಮದ ರತ್ನಾ- ಸದಾನಂದ ದಂಪತಿ ಹಾಗೂ ಕೊಪ್ಪದ ನಿವೃತ್ತ ಶುಶ್ರೂಷಕಿ ಕುಸುಮಾ ಬಂಧಿತ ಆರೋಪಿಗಳು.

ಹೆರಿಗೆಗಾಗಿ ಕೊಪ್ಪ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ರತ್ನಾ ಎಂಬವರು ಮೇ 22ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮೊದಲೇ ಮಾಡಿಕೊಂಡ 1 ಲಕ್ಷ ರೂ. ಹಣದ ಒಪ್ಪಂದದಂತೆ ಮುಂಗಡ ಹಣ ಪಡೆದು ನಿವೃತ್ತ ಶುಶ್ರೂಷಕಿ ಕುಸುಮಾ ಮೂಲಕ ಕಾರ್ಕಳದ ರಾಘವೇಂದ್ರ ಎಂಬವರಿಗೆ ಮಗು ಮಾರಾಟ ಮಾಡಿದ್ದರು.

ಮಾಹಿತಿ ತಿಳಿದ ನರಸಿಂಹರಾಜಪುರ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ನಿರಂಜನಗೌಡ ಹಾಗೂ ಸಿಬ್ಬಂದಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಕಳ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಅಧಿಕಾರಿಯವರೊಂದಿಗೆ ಮೇ 26ರಂದು ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಮಗು ಪಡೆದಿದ್ದ ಕಾರ್ಕಳದ ದಂಪತಿಯ ಮನೆಗೆ ಬಂದು ಮಗುವನ್ನು ಪಡೆದು ಸುರಕ್ಷಿತವಾಗಿ ಚಿಕ್ಕಮಗಳೂರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದಾರೆ.

ಮಗು ಪಡೆದಿದ್ದ ರಾಘವೇಂದ್ರ ಎಂಬಾತ ಶುಶ್ರೂಷಕಿ ಕುಸುಮಾ ಅವರ ಸಹೋದರ. ತಮಗೆ ಮಕ್ಕಳು ಇಲ್ಲದ ಕಾರಣ ಸಾಕಲು ಮಗು ಪಡೆದಿರುವುದಾಗಿ ರಾಘವೇಂದ್ರ ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ನರಸಿಂಹರಾಜಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





























































































































error: Content is protected !!
Scroll to Top