ದೆಹಲಿ : ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ಬಳಿಕ ಭಾರತ-ಪಾಕಿಸ್ತಾನ ನಡುವೆ ಯುದ್ಧದ ಭೀತಿ ಹೆಚ್ಚಾಗುತ್ತಲೇ ಇದೆ. ಉಭಯ ರಾಷ್ಟ್ರಗಳು ಪೂರ್ವಸಿದ್ಧತೆ ಮಾಡಿಕೊಳ್ಳುತ್ತಿವೆ. ಅದರ ಮುಂದುವರಿದ ಭಾಗವಾಗಿ ಮೇ 7ರಂದು ದೇಶಾದ್ಯಂತ ಮಾಕ್ ಡ್ರಿಲ್ ನಡೆಯಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ನಾಗರಿಕರ ರಕ್ಷಣೆ ಸಂಬಂಧ ಭದ್ರತಾ ತಾಲೀಮು ನಡೆಸುವಂತೆ ಕೇಂದ್ರ ಗೃಹ ಸಚಿವಾಲಯ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿದೆ. ಒಟ್ಟು 5 ಹಂತಗಳಲ್ಲಿ ಮಾಕ್ ಡ್ರಿಲ್ (ಅಣುಕು ಕಾರ್ಯಾಚರಣೆ) ನಡೆಸುವಂತೆ ಸೂಚಿಸಿದೆ. ದೇಶದ ಆಂತರಿಕ ಭದ್ರತೆ ಮತ್ತು ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಸನ್ನದ್ಧತೆಯನ್ನು ಬಲಪಡಿಸುವ ಉದ್ದೇಶದಿಂದ ಈ ತಾಲೀಮು ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.
ಮಾಕ್ ಡ್ರಿಲ್ ಹೇಗಿರಲಿದೆ?
-ವಾಯುದಾಳಿ ಎಚ್ಚರಿಕೆಗೆ ಸಂಬಂಧಿಸಿದಂತೆ ಸೈರನ್‌ಗಳ ಕಾರ್ಯಾಚರಣೆ
-ಪ್ರತಿಕೂಲ ದಾಳಿಯ ಸಂದರ್ಭದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ನಾಗರಿಕರು, ವಿದ್ಯಾರ್ಥಿಗಳು ಇತ್ಯಾದಿಗಳಿಗೆ ನಾಗರಿಕ ರಕ್ಷಣಾ ಅಂಶಗಳ ಕುರಿತು ತರಬೇತಿ ನೀಡುವುದು.
-ಕ್ರ್ಯಾಶ್ ಬ್ಲ್ಯಾಕೌಟ್ ಕ್ರಮಗಳನ್ನು ಒದಗಿಸುವುದು
-ಪ್ರಮುಖ ಸ್ಥಾವರಗಳು/ಅನುಷ್ಠಾನವನ್ನು ಆರಂಭಿಕ ಮರೆಮಾಚುವಿಕೆ ತಂತ್ರಗಾರಿಕೆಗೆ ಅವಕಾಶ
-ಸ್ಥಳಾಂತರಿಸುವ ಯೋಜನೆಯ ನವೀಕರಣ ಮತ್ತು ಅದರ ಪೂರ್ವಾಭ್ಯಾಸ ಮಾಡುವುದು ಇದರ ಹಂತಗಳಾಗಿವಿವೆ.

ಪಂಜಾಬ್ ಗಡಿಯಲ್ಲಿ ಮಾಕ್ ಡ್ರಿಲ್
ಯುದ್ಧ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಂಜಾಬ್‌ನ ಫಿರೋಜ್ ಪುರದಲ್ಲಿ ಮೇ 5ರಂದು ರಾತ್ರಿ 9 ಗಂಟೆಯಿಂದ 9:30ರ ವರೆಗೆ ಸೂಕ್ಷ್ಮ ಪ್ರದೇಶದಲ್ಲಿ ಲೈಟ್ಸ್ ಆಫ್ ಮಾಡಿ ಮಾಕ್ ಡ್ರಿಲ್ ನಡೆಸಲಾಯಿತು. ನಿಗದಿತ ತಾಲೀಮು ಸಮಯದಲ್ಲಿ ವಿದ್ಯುತ್ ಕಡಿತಗೊಳಿಸುವಂತೆ ಅಧಿಕಾರಿಗಳು ಪಂಜಾಬ್ ರಾಜ್ಯ ವಿದ್ಯುತ್ ನಿಗಮ ಲಿಮಿಟೆಡ್ (ಪಿಎಸ್‌ಪಿಸಿಎಲ್)ಗೆ ಮುಂಚಿತವಾಗಿಯೇ ತಿಳಿಸಲಾಗಿತ್ತು. ಹಾಗಾಗಿ ಸಂಪೂರ್ಣ ವಿದ್ಯುತ್ ಕಡಿತಗೊಳಿಸಿ ಕಠಿಣ ತಾಲೀಮು ನಡೆಸಲಾಯಿತು. ಈ ಮೂಲಕ ರಾತ್ರಿ ಕಾರ್ಯಾಚರಣೆಗೆ ಭದ್ರತಾ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲಾಯಿತು.






























































