ಲೋಕಸಭೆಯಲ್ಲಿ ವಕ್ಫ್​ ತಿದ್ದುಪಡಿ ಮಸೂದೆ ಅಂಗೀಕಾರ – ಇಂದು ರಾಜ್ಯಸಭೆಯಲ್ಲಿ ಮಂಡನೆ

12 ಗಂಟೆಗಳ‌ ಕಾಲ ನಡೆದ ಚರ್ಚೆ ಬಳಿಕ ಮಸೂದೆ ಪಾಸ್

ದೆಹಲಿ : ಸುದೀರ್ಘ 12 ಗಂಟೆಗಳ ಕಾಲ ನಡೆದ ಚರ್ಚೆ ಬಳಿಕ ಲೋಕಸಭೆಯಲ್ಲಿ ವಕ್ಫ್​ ತಿದ್ದುಪಡಿ ಮಸೂದೆ ಬುಧವಾರ ಅಂಗೀಕಾರಗೊಂಡಿತು. ಇಂದು ರಾಜ್ಯಸಭೆಯಲ್ಲಿ ಮಸೂದೆ ಮಂಡನೆಯಾಗಲಿದೆ.

ಮಸೂದೆಯ ಪರವಾಗಿ 288 ಮತಗಳು ಚಲಾವಣೆಗೊಂಡರೆ, ವಿರುದ್ಧವಾಗಿ 232 ಮತಗಳು ಚಲಾವಣೆಯಾದವು. ಸದನವು ವಿರೋಧ ಪಕ್ಷದ ಎಲ್ಲಾ ತಿದ್ದುಪಡಿಗಳನ್ನು ಧ್ವನಿ ಮತದ ಮೂಲಕ ತಿರಸ್ಕರಿಸಿತು. ವಿರೋಧ ಪಕ್ಷದ ಸಂಸದ ಎನ್.ಕೆ. ಪ್ರೇಮಚಂದ್ರನ್ ಅವರ ತಿದ್ದುಪಡಿ ಪ್ರಸ್ತಾವನೆಯ ಮೇಲೆ ಬೆಳಗಿನ ಜಾವ 1.15 ಕ್ಕೆ ಮತದಾನ ನಡೆಯಿತು. ಇದನ್ನು 231 ವಿರುದ್ಧ 288 ಮತಗಳಿಂದ ತಿರಸ್ಕರಿಸಲಾಯಿತು. ಮಂಡಳಿಯಲ್ಲಿ ಮುಸ್ಲಿಮೇತರ ಸದಸ್ಯರು ಇರಬಾರದು ಎಂಬ ಪ್ರಸ್ತಾವನೆ ಇತ್ತು. ಲೋಕಸಭೆಯಲ್ಲಿ ಈ ಮಸೂದೆಯ ಬಗ್ಗೆ 12 ಗಂಟೆಗಳಿಗೂ ಹೆಚ್ಚು ಕಾಲ ಚರ್ಚೆ ನಡೆಯಿತು. ಈಗ ಮಸೂದೆಯನ್ನು ಇಂದು ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ.

ಕೇಂದ್ರ ಸರಕಾರದ ಪರವಾಗಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಮಸೂದೆಯನ್ನು ಮಂಡಿಸಿದರು. ಆದರೆ, ಮಸೂದೆ ವಿರುದ್ಧ ವಿಪಕ್ಷಗಳು ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿತು.

ಮಸೂದೆ ಮಂಡಿಸುವ ಮೊದಲು ಅಮಿತ್ ಶಾ ಅವರು ಮಾತನಾಡಿ, ವಕ್ಫ್ ಮಸೂದೆಯ ಮೂಲಕ ಅಲ್ಪಸಂಖ್ಯಾತರಿಗೆ ತೊಂದರೆ ಕೊಡುವ ಉದ್ದೇಶ ಕೇಂದ್ರ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು. ವಕ್ಫ್ ಆಸ್ತಿಗಳ ನಿರ್ಹವಣೆಗೆ ಪಾರದರ್ಶಕವಾಗಿಸಲು ಹಾಗೂ ಹೆಚ್ಚು ಪರಿಣಾಮಕಾರಿಯಾಗಿರುವಂತೆ ಈ ಮಸೂದೆಯನ್ನು ಸೂಚಿಸಲಾಗಿದೆ ಎಂದು ಹೇಳಿದರು.

ಮಸೂದೆ ಮಂಡಿಸುವ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಕಿರಣ್ ರಿಜಿಜು, “ಈ ವಿಧೇಯಕವು ಕಾನೂನಾಗಿ ಬದಲಾದ ನಂತರ ಈ ಕಾಯ್ದೆಗೆ ಏಕೀಕೃತ ವಕ್ಫ್ ನಿರ್ವಹಣೆ, ಸಬಲೀಕರಣ, ದಕ್ಷತೆ ಹಾಗೂ ಅಭಿವೃದ್ಧಿ (UMEED – ಉಮೀದ್) ಕಾಯ್ದೆ” ಎಂದು ಕರೆಯುವುದಾಗಿ ಹೇಳಿದ್ದಾರೆ.

ಇದು ಯಾವುದೇ ಧರ್ಮದವರ ಧಾರ್ಮಿಕ ಸ್ವಾಯತ್ತತೆಗೆ ಪೆಟ್ಟು ಕೊಡುವಂಥದ್ದಲ್ಲ. ಇದು ಕೇವಲ ವಕ್ಫ್ ಆಸ್ತಿಗಳ ನಿರ್ವಹಣೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿರುವುದಷ್ಟೇ. ವಕ್ಫ್ ಮಂಡಳಿಗಳ ದಕ್ಷತೆಯನ್ನು ಮತ್ತಷ್ಟು ಹೆಚ್ಚಿಸಿ, ಆಸ್ತಿಪಾಸ್ತಿಗಳ ನಿರ್ವಹಣೆಯಲ್ಲಿ ತಂತ್ರಜ್ಞಾನದ ಬಳಕೆ ಇತ್ಯಾದಿ ವಿಚಾರಗಳನ್ನು ತಂದು ಮಸೂದೆಯನ್ನು ಕಾಲಕ್ಕೆ ತಕ್ಕಂತೆ ಅಪ್ಡೇಟ್ ಮಾಡುವ ಪ್ರಯತ್ನವಾಗಿದೆ ಎಂದರು.

ಸಿಕ್ಕ ಸಿಕ್ಕ ಭೂಮಿಗಳನ್ನು ವಕ್ಫ್ ಆಸ್ತಿಗಳೆಂದು ಘೋಷಿಸಲಾಗುತ್ತಿರುವುದರಿಂದ ದೇಶದಲ್ಲಿ ಒಂದು ರೀತಿಯ ಅರಾಜಕತೆ ಉಂಟಾಗುತ್ತಿದೆ ಎಂದ ಕಿರಣ್ ರಿಜಿಜು, ನಾವು ಈ ಮಸೂದೆಯನ್ನು ಪಾಸು ಮಾಡದಿದ್ದರೆ, ನಾವು ಈಗ ಉಪಸ್ಥಿತರಿರುವ ಈ ಸಂಸತ್ ಭವನ, ವಿಮಾನ ನಿಲ್ದಾಣಗಳು ಸೇರಿದಂತೆ ಅನೇಕ ಸಾರ್ವಜನಿಕ ಆಸ್ತಿಪಾಸ್ತಿಗಳು ವಕ್ಫ್ ಆಸ್ತಿಗಳೆಂದು ಘೋಷಿಸಲ್ಪಡುತ್ತವೆ ಎಂದರು.































































































































error: Content is protected !!
Scroll to Top