ಕಾರ್ಕಳ : ಸಂವಿಧಾನದ ಪುಸ್ತಕ ಹಿಡಿದು ಸಂಸತ್ ಕಲಾಪದಲ್ಲಿ ಭಾಗವಹಿಸಿದ ಕಾಂಗ್ರೆಸ್ಸಿನ ನಾಯಕರುಗಳಿಗೆ ಸಂವಿಧಾನದಲ್ಲಿ ಎಷ್ಟು ಪರಿಚ್ಛೇದಗಳಿವೆ ಗೊತ್ತಿದೆಯೇ.? ಕೇವಲ ಮತಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ಅಂಬೇಡ್ಕರ್ ಹೆಸರು ಬಳಸುತ್ತಿದ್ದು ಅವರಿಗೆ ಯಾವುದೇ ಗೌರವ ನೀಡಿಲ್ಲ ಎಂದು ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮಣಿರಾಜ್ ಶೆಟ್ಟಿ ಹೇಳಿದರು.
ಅವರು ಕರ್ನಾಟಕ ಸರಕಾರದ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಸರಕಾರಿ ಗುತ್ತಿಗೆಯಲ್ಲಿ ಶೇ. 4 ಮೀಸಲಾತಿ ನೀಡಿದ್ದನ್ನು ಸಮರ್ಥಿಸುತ್ತಾ ಅಗತ್ಯ ಬಿದ್ದರೆ ಸಂವಿಧಾನ ಬದಲಿಸಬೇಕಾಗಬಹುದು ಎಂದಿರುವ ಸಂವಿಧಾನ ವಿರೋಧಿ ಹೇಳಿಕೆಯನ್ನು ಖಂಡಿಸಿ ಮಾ. 25ರಂದು ಕಾರ್ಕಳ ತಾಲೂಕು ಕಚೇರಿ ಬಳಿಯಿರುವ ಅಂಬೇಡ್ಕರ್ ಪ್ರತಿಮೆ ಮುಂಭಾಗ ಕಾರ್ಕಳ ಮಂಡಲ ಬಿಜೆಪಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, ಷಹಭಾನು ಕೇಸ್‌ನಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಸಂವಿಧಾನ ತಿದ್ದುಪಡಿಯ ಮೂಲಕ ಅನೂರ್ಜಿತಗೊಳಿಸಲಾಯಿತು. ಅಂಬೇಡ್ಕರ್ ಸಂಸತ್ ಪ್ರವೇಶಿಸಲು ಕಾಂಗ್ರೆಸ್ ಅಡ್ಡಗಾಲು ಹಾಕಿತ್ತು ಎಂದು ಆರೋಪಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಕಳ ಬಿಜೆಪಿ ಮಂಡಲಾದ್ಯಕ್ಷ ನವೀನ್ ನಾಯಕ್, ಸಂವಿಧಾನದ ಘನತೆಯನ್ನು ಎತ್ತಿ ಹಿಡಿಯಬೇಕಾದವರಿಂದಲೇ ಸಂವಿಧಾನಕ್ಕೆ ಅಪಮಾನವಾಗಿದೆ. ಇಂತಹ ಸಂವಿಧಾನ ವಿರೋಧಿ ಕಾಂಗ್ರೆಸಿನ ಧೋರಣೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ ಮಾತನಾಡಿ, ಸಂವಿಧಾನದ ಅಡಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಉಪಮುಖ್ಯಮಂತ್ರಿಯವರಿಂದ ಇಂತಹ ಹೇಳಿಕೆ ನಿರೀಕ್ಷಿಸಿರಲಿಲ್ಲ. ಕಾಂಗ್ರೆಸ್ ನೇತೃತ್ವದ ಸರಕಾರದ ಅವಧಿಯಲ್ಲಿ ಸುಮಾರು 80 ಸಲ ಸಂವಿಧಾನ ತಿದ್ದುಪಡಿಯಾಗಿದೆ. ಸಂವಿಧಾನ ಶಿಲ್ಪಿ ಮಹಾನ್ ಮೇಧಾವಿ ಬಾಬ ಸಾಹೇಬ್ ಅಂಬೇಡ್ಕರ್ ರವರನ್ನೇ 1952 ಸಾರ್ವತ್ರಿಕ ಚುನಾವಣೆಯಲ್ಲಿ ಸೋಲಿಸಿದ ಕಾಂಗ್ರೆಸ್ಸಿನಿಂದ ಜನತೆ ಏನನ್ನು ನಿರೀಕ್ಷಿಸಬಹುದು ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಹಾವೀರ ಹೆಗ್ಡೆ, ಉದಯ ಕೋಟ್ಯಾನ್, ಜಯರಾಮ್ ಸಾಲ್ಯಾನ್, ಮಂಡಲ ಪ್ರಧಾನ ಕಾರ್ಯದರ್ಶಿ ಸತೀಶ್ ಬೋಳ, ರಾಜ್ಯ ಯುವಮೋರ್ಚಾ ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ, ತಾಲೂಕು ಯುವಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ, ಪ್ರಕಾಶ್ ರಾವ್, ಸುಧಾಕರ್ ಹೆಗ್ಡೆ ಹೆಬ್ರಿ, ಲಕ್ಷ್ಮೀನಾರಯಣ್ ಹೆಬ್ರಿ, ಸಮೃದ್ಧಿ ಪ್ರಕಾಶ್, ಯೋಗಿಶ್ ನಾಯಕ್, ಪ್ರಸಾದ್ ಐಸಿರಾ ಹಾಗೂ ಪುರಸಭಾ ಸದಸ್ಯರುಗಳು, ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.






























































