ಶಾಲೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್‌ ಕಳ್ಳನ ಬಂಧನ

ಕಾರ್ಕಳ : ತಾಲೂಕಿನ ವಿವಿಧ ಶಾಲೆಗಳಲ್ಲಿ ಕಳ್ಳತನ ಮಾಡಿದ್ದ ಆರೋಪಿಯೊಬ್ಬನನ್ನು ಕಾರ್ಕಳ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ. ಆರೋಪಿಯನ್ನು ಬೈಂದೂರು ನಿವಾಸಿ ಅರ್ಷಿತ್ ಅವಿನಾಶ್ ದೋಡ್ರೆ (24) ಎಂದು ಗುರುತಿಸಲಾಗಿದೆ.

ಬೆಳ್ಮಣ್‌ ಶಾಲೆಯಲ್ಲಿ ಕಳ್ಳತನ
ಫೆ. 21ರ ರಾತ್ರಿ ಬೆಳ್ಮಣ್ ಗ್ರಾಮದ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ಕಚೇರಿಯ ಬೀಗ ಮುರಿದು ಕಪಾಟು ಮತ್ತು ಮೇಜಿನ ಡ್ರಾವರನ್ನು ಒಡೆದು 1,50,000 ರೂ. ನಗದು ಮತ್ತು 3 ಡಿವಿಆರ್‌ಗಳನ್ನು ಕಳವು ಮಾಡಿದ್ದನು. ಅಲ್ಲದೆ ಶಾಲೆಯ ಸಿಸಿಟಿವಿಯನ್ನು ಹಾಳು ಮಾಡಿದ್ದ.

ನಂದಳಿಕೆ ಶಾಲೆ
ಮಾ. 6ರ ರಾತ್ರಿ ನಂದಳಿಕೆ ಗ್ರಾಮದ ಸ.ಹಿ.ಪ್ರಾ.ಶಾಲೆಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ ಈತ ಮುಖ್ಯ ಶಿಕ್ಷಕರ ಕೊಠಡಿಗೆ ಹಾಕಿದ್ದ ಬೀಗವನ್ನು ಮುರಿದು ಕಪಾಟಿನ ಬಾಗಿಲು ತೆಗೆದು, ರಿಜಿಸ್ಟರ್‌ ಬುಕ್‌ಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದ.

ಹಿರ್ಗಾನ ಶಾಲೆ
ಮಾ. 4ರಂದು ರಾತ್ರಿ ಹಿರ್ಗಾನ ಗ್ರಾಮದ ಸಂತ ಮರಿಯಾ ಗೊರಟ್ಟಿ ಆಂಗ್ಲ ಮಾದ್ಯಮ ಶಾಲೆಯ ಕಚೇರಿಯ ಬೀಗ ಒಡೆದು ಕಪಾಟಿನನಲ್ಲಿದ್ದ 60 ಸಾವಿರ ರೂ. ಹಣ ಮತ್ತು ಐದು ಸಾವಿರ ರೂ. ಮೌಲ್ಯದ ಸಿಸಿ ಕ್ಯಾಮರಾ ಡಿವಿಆರ್ ಕಳವು ಮಾಡಿದ್ದ.

ನಿಟ್ಟೆಯಲ್ಲಿ ಸಿಕ್ಕಿ ಬಿದ್ದ
ಶಾಲೆಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ನಡೆದ ಪ್ರಕರಣಗಳ ಕುರಿತು ತನಿಖೆ ಆರಂಭಿಸಿದ ಪೊಲೀಸರು ಮಾ. 20ರಂದು ನಿಟ್ಟೆ ಗ್ರಾಮದ ಸಂತ ಲಾರೆನ್ಸ್ ಪ್ರೌಡ ಶಾಲೆಯ ಸಮೀಪ ಅನುಮಾನಾಸ್ಪದವಾಗಿ ನಿಂತಿದ್ದ ಬಿಳಿ ಬಣ್ಣದ ಕಾರಿನಲ್ಲಿದ್ದ ಆರೋಪಿ ಅರ್ಷಿತ್‌ ಅವಿನಾಶ್ ದೋಡ್ರೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಆರೋಪಿ ಕಳ್ಳತನ ವಿಚಾರವನ್ನು ಬಾಯ್ಬಿಟ್ಟಿದ್ದಾನೆ. ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಆತನಿಂದ ಕೃತ್ಯಕ್ಕೆ ಬಳಸಿದ್ದ ಕಾರು, ಮೊಬೈಲ್ ಫೋನ್ ಮತ್ತು 84,500 ರೂ. ನಗದನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ನ್ಯಾಯಾಲಯವು ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ.





























































































































error: Content is protected !!
Scroll to Top