ಕಾರ್ಕಳದಲ್ಲಿ ಹೆಚ್ಚುತ್ತಿದೆ ರಸ್ತೆ ಅಪಘಾತ – ಕಳೆದ 2 ತಿಂಗಳಲ್ಲಿ 10 ಮಂದಿ ಮೃತ್ಯು

ಕಾರ್ಕಳ : ಕಾರ್ಕಳ ಹೆಬ್ರಿ ತಾಲೂಕಿನ ಬಹುತೇಕ ರಸ್ತೆಗಳು‌ ಅಗಲೀಕರಣವಾಗಿ ಉತ್ತಮ ಸ್ಥಿತಿಯಲ್ಲಿದೆ. ರಸ್ತೆ ಅಭಿವೃದ್ಧಿಗೊಂಡು ಸುಗಮ ಸಂಚಾರಕ್ಕೆ ಅನುಕೂಲವಾಗುತ್ತಿದ್ದಂತೆ ರಸ್ತೆ ಅಪಘಾತ ಸುದ್ದಿಗಳು ಹೆಚ್ಚಾಗಿ ಕೇಳಿಬರುತ್ತಿದೆ. ಚಾಲಕರ ನಿರ್ಲಕ್ಷ್ಯ, ಬೇಜವಾಬ್ದಾರಿ, ಪಾನಮತ್ತರಾಗಿ ಚಾಲನೆ, ಸಂಚಾರ ನಿಯಮಗಳ ಉಲ್ಲಂಘನೆ, ಅತಿಯಾದ ವೇಗ, ಓವರ್‌ ಟೇಕ್‌ ಮಾಡುವ ಧಾವಂತ, ಮೊಬೈಲ್‌ ಬಳಕೆ ಪರಿಣಾಮ ಅಪಘಾತಗಳು ಸಂಭವಿಸುತ್ತಿದ್ದು, ಮೃತ್ಯುವಿಗೆ ದಾರಿಯಾಗುತ್ತಿದೆ. ಅಪಘಾತದ ವರದಿಗಳು ಕೇಳಿಬರುತ್ತಿದ್ದಾಗ್ಯೂ ಕೆಲವೊಂದು ವಾಹನ ಚಾಲಕರು, ಬೈಕ್‌ ಸವಾರರು ಎಚ್ಚರಿಕೆಯಿಂದ ಚಾಲನೆ ಮಾಡದೇ ನಿರ್ಲಕ್ಷ್ಯವಹಿಸುತ್ತಿರುವುದು ಕಂಡುಬರುತ್ತಿದೆ.

ಕಳೆದ ಎರಡು ತಿಂಗಳಲ್ಲಿ 10 ಮೃತ್ಯು
2025ರ ಜನವರಿಯಿಂದ ಮಾರ್ಚ್‌ವರೆಗೆ ಕಾರ್ಕಳ ಗ್ರಾಮಾಂತರ (11), ನಗರ (15) ಅಜೆಕಾರು (2) ಮತ್ತು ಹೆಬ್ರಿ ಪೊಲೀಸ್‌ ಠಾಣಾ (5) ವ್ಯಾಪ್ತಿಯಲ್ಲಿ ಒಟ್ಟು 33 ವಾಹನ ಅಪಘಾತ ಸಂಭವಿಸಿದೆ. ಇದರಲ್ಲಿ 10 ಮಂದಿ ಸಾವಿಗೀಡಾಗಿದ್ದಾರೆ. 34 ಮಂದಿ ಗಾಯಗೊಂಡಿರುತ್ತಾರೆ.

2024ರ ಇಸವಿಯಲ್ಲಿ ಕಾರ್ಕಳ ಗ್ರಾಮಾಂತರ (56), ನಗರ (73) ಅಜೆಕಾರು (11) ಮತ್ತು ಹೆಬ್ರಿ ಪೊಲೀಸ್‌ ಠಾಣಾ (37) ವ್ಯಾಪ್ತಿಯಲ್ಲಿ ಒಟ್ಟು 177 ವಾಹನ ಅಪಘಾತ ಸಂಭವಿಸಿದೆ. ಇದರಲ್ಲಿ 45 ಮಂದಿ ಸಾವಿಗೀಡಾಗಿದ್ದಾರೆ. 217 ಮಂದಿ ಗಾಯಗೊಂಡಿರುತ್ತಾರೆ.

ಪಾಜೆಗುಡ್ಡೆ
ಪಾಜೆಗುಡ್ಡೆ ತಿರುವಿನೊಂದಿಗೆ ಏರು ರಸ್ತೆಯಾಗಿರುವ ಪರಿಣಾಮ ಇಲ್ಲಿ ನಿರಂತರವಾಗಿ ಆಕ್ಸಿಡೆಂಟ್‌ ಆಗುತಿದೆ. ಅಲ್ಲಿ ಏರುರಸ್ತೆಯನ್ನು ತಗ್ಗುಗೊಳಿಸಿ ರಸ್ತೆ ಅಗಲೀಕರಣ ಮಾಡಲಾಗಿದ್ದರೂ ಅನಾಹುತ ಸಂಭವಿಸುವ ಸಂಖ್ಯೆ ಕಡಿಮೆಯಾಗಿಲ್ಲ. ಕಳೆದ ಸೆ. 30ರಂದು ಮಿನಿ ಲಾರಿ ಮತ್ತು ಬೈಕ್ ಮಧ್ಯೆ ಭೀಕರ ಅಪಘಾತವಾಗಿ ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಇನ್ನು ಈ ಸ್ಥಳದಲ್ಲಿ ಸಣ್ಣ ಪುಟ್ಟ ಅಪಘಾತಗಳು ಆಗಿದ್ದಾಂಗೆ ನಡೆಯುತ್ತಲೇ ಇರುತ್ತದೆ.

ಸಮರ್ಪಕವಾಗಿರಲಿ ದಾಖಲೆ
ಪೊಲೀಸರು ಆಗಾಗ ವಾಹನಗಳನ್ನು ತಡೆದು ನಿಲ್ಲಿಸಿ ತಪಾಸಣೆ, ದಂಡ ವಿಧಿಸುವ ಕೆಲಸವನ್ನು ಮಾಡುತ್ತಿರುತ್ತಾರೆ. ಆದರೆ, ಅನೇಕ ಮಂದಿಯ ಬಳಿ ಡ್ರೈವಿಂಗ್‌ ಲೈಸೆನ್ಸ್‌ ಇರುವುದಿಲ್ಲ. ಹೊಗೆ ಮಾಲಿನ್ಯ ಪರೀಕ್ಷೆ ಮಾಡಿಸಿಕೊಂಡಿರುವುದಿಲ್ಲ. ವಾಹನ ವಿಮೆ ಮಾಡಿಸಿರುವುದಿಲ್ಲ. ಇನ್ನೂ ಕೆಲವರು ಹೆಲ್ಮೆಟ್‌ ಹೊಂದಿದ್ದರೂ ಧರಿಸದೆ ಕೈ ಯಲ್ಲೇ ಹಿಡಿದುಕೊಂಡಿರುತ್ತಾರೆ. ವಾಹನಕ್ಕೆ ಸಂಬಂಧಿಸಿದ ದಾಖಲೆಗಳು ಇಲ್ಲದಿದ್ದರೆ ಅಪಘಾತ ಸಂಭವಿಸಿದರೆ ವಿಮೆ ಪರಿಹಾರ ಸಿಗುವುದಿಲ್ಲ. ಅಲ್ಲದೆ ಕೇಸು ಕೂಡ ಕೋರ್ಟಿನಲ್ಲಿ ನಿಲ್ಲುವುದಿಲ್ಲ. ಅಗತ್ಯ ದಾಖಲೆ, ಪರವಾನಿಗೆ ಚಾಲಕ, ಸವಾರರಲ್ಲಿ ಇರಬೇಕಾದುದು ಅಗತ್ಯ.





























































































































error: Content is protected !!
Scroll to Top