ಮಹಾಪರಾಕ್ರಮಿ, ದಕ್ಷ ಆಡಳಿತಗಾರ ಶಿವಾಜಿ ಮಹಾರಾಜ

ಫೆಬ್ರವರಿ 19 ಅಪೂರ್ವ ಚೇತನ, ಪರಾಕ್ರಮಿ ಶಿವಾಜಿ ಮಹಾರಾಜರ ಜನ್ಮದಿನ. ಶಿವಾಜಿ ಎಂದರೆ ನಿಷ್ಠೆ, ಸಾಹಸ, ಪರಾಕ್ರಮ, ಧರ್ಮ ತೀಕ್ಷ್ಣತೆ, ಏಕಾಗ್ರತೆ, ವಿನಯ, ಜಾಣ್ಮೆ ಎಂದರೆ ತಪ್ಪಾಗಲಾರದು.
1627 ಫೆಬ್ರವರಿ 19ರಂದು ಶಿವಾಜಿ ಪುಣೆಯ ಶಿವನೇರಿ ದುರ್ಗದಲ್ಲಿ ಜನಿಸಿದರು. ಇವರ ತಂದೆ ಬೋಂಸ್ಲೆ ಮನೆತನದ ಷಹಜಿ ಬೋಂಸ್ಲೆ ಹಾಗೂ ತಾಯಿ ಜೀಜಾಬಾಯಿ. ಷಹಜಿ ಬೋಂಸ್ಲೆ ಬಿಜಾಪುರದ ಸುಲ್ತಾನ ನೀಡಿದ್ದ ಬೆಂಗಳೂರಿನ ಜಹಾಗೀರನ್ನು ನೋಡಿಕೊಳ್ಳುತ್ತಿದ್ದರು. ಪುಣೆಯ ಜಹಾಗೀರಿನಲ್ಲಿ ತನ್ನ ತಾಯಿ ಜೀಜಾಬಾಯಿಯ ಜೊತೆ ಶಿವಾಜಿ ವಾಸವಾಗಿದ್ದರು. ಮಾತೆ ಜೀಜಾಬಾಯಿಯು ಬಾಲಕ ಶಿವಾಜಿಗೆ ರಾಮಾಯಣದ ಹಾಗೂ ಮಹಾಭಾರತದ ಕಥೆಗಳನ್ನು ತಿಳಿಸಿ ಅವನಲ್ಲಿ ಆದರ್ಶಗಳನ್ನು ಸಾಹಸ, ಕೆಚ್ಚು, ಧೈರ್ಯಗಳನ್ನು ತುಂಬಿಸಿದಳು, ಜೊತೆಗೆ ಗುರು ದಾದಾಜಿ ಕೊಂಡದೇವ ಯುದ್ಧ ವಿದ್ಯೆ, ಶಸ್ತ್ರ ವಿದ್ಯಾಭ್ಯಾಸಗಳನ್ನು ಕಲಿಸಿದರು. ಸಂತ ರಾಮದಾಸರು ಮತ್ತು ಸಂತ ತುಕಾರಾಮರ ವಿಚಾರಧಾರೆ, ಭಕ್ತಿ ಧರ್ಮ, ಸದಾಚಾರಗಳು ಬಾಲಕ ಶಿವಾಜಿಗೆ ಅವರ ವ್ಯಕ್ತಿತ್ವ ಬೆಳೆಸಿಕೊಳ್ಳಲು ಪ್ರೇರಣಾ ಶಕ್ತಿಗಳಾದವು.

19ನೇ ವಯಸ್ಸಿನಲ್ಲೇ ಪರಾಕ್ರಮ

ಶಿವಾಜಿ 19ನೇ ವಯಸ್ಸಿನಲ್ಲಿ ಅನೇಕ ಕೋಟೆಗಳನ್ನು ವಶಪಡಿಸಿಕೊಂಡರು. ಶಿವಾಜಿಗೆ ಒತ್ತಾಸೆಯಾಗಿ, ಬೆನ್ನೆಲುಬಾಗಿ ನಿಂತ ಮಾವಳಿಯರ ಸಹಾಯದಿಂದ ಶಿವಾಜಿಯು ಸೈನ್ಯ ಕಟ್ಟಿ ತೋರಣದುರ್ಗ, ಛಕಾನ, ಕೊಂಡಾಣ, ಸಿಂಹಗಢ, ಪುರಂದರಗಢ ಮುಂತಾದ ಕೋಟೆಗಳನ್ನು ಬಿಜಾಪುರದ ಸುಲ್ತಾನನ ಹಿಡಿತದಿಂದ ತನ್ನ ವಶಕ್ಕೆ ಪಡೆದುಕೊಂಡರು. ಇದರಿಂದ ಸಿಟ್ಟಾದ ಬಿಜಾಪುರದ ಸುಲ್ತಾನ ತನ್ನ ಸಾಮಂತನಾಗಿದ್ದ ಶಿವಾಜಿಯ ತಂದೆ ಷಹಜಿ ಬೋಂಸ್ಲೆಯನ್ನು ಬಂಧಿಸುತಾನೆ. ಆದರೆ ರಾಜನೈತಿಕ ಜಾಣ್ಮೆಯಿಂದ ತಂದೆ ಷಹಜಿಯನ್ನು ಶಿವಾಜಿ ಬಂಧಮುಕ್ತಗೊಳಿಸಿದರು.

ವ್ಯಾಘ್ರನಖ

ಶಿವಾಜಿಯು ಕೊಂಕಣ ಕರಾವಳಿಯ ಜಾವಳಿ ಎಂಬ ಪ್ರದೇಶವನ್ನು ಆಕ್ರಮಿಸಿ ಸುಸಜ್ಜಿತವಾದ ಮತ್ತು ವ್ಯವಸ್ಥಿತವಾದ ಪ್ರತಾಪಗಢ ಎಂಬ ಕೋಟೆಯನ್ನು ಕಟ್ಟಿಸುತ್ತಾರೆ. ಬಿಜಾಪುರದ ಸುಲ್ತಾನ ಶಿವಾಜಿಯನ್ನು ಹಿಮ್ಮೆಟ್ಟಿಸುವ ಸಲುವಾಗ ತನ್ನ ಬಂಟನಾಗಿದ್ದ ಅಫಜಲ್ ಖಾನ್‌ನನ್ನು ಕಳುಹಿಸಿದಾಗ ಅವನನ್ನು ವ್ಯಾಘ್ರನಖ ಎಂಬ ಆಯುಧದಿಂದ ಶಿವಾಜಿ ಬಗೆದು ಕೊಂದು ಹಾಕುತ್ತಾರೆ. ಇದರಿಂದ ಆಘಾತಗೊಂಡ ಬಿಜಾಪುರದ ಸುಲ್ತಾನ ಶಿವಾಜಿಯೊಂದಿಗೆ ಶಾಂತಿ ಒಪ್ಪಂದ ಮಾಡಿಕೊಂಡು ತನ್ನಿಂದ ಅವನು ಗೆದ್ದಂತಹ ಪ್ರದೇಶಗಳಿಗೆ ಮಾನ್ಯತೆ ನೀಡುತ್ತಾನೆ.

ಷಹಿಸ್ತೇಖಾನನ ಪಲಾಯನ

ಮೊಗಲ್ ಚಕ್ರವರ್ತಿ ಔರಂಗಜೇಬ ಶಿವಾಜಿಯನ್ನು ನಿಗ್ರಹಿಸಲು ಷಹಿಸ್ತೇಖಾನನ್ನು ದಖನ್ನಿನ ರಾಜ್ಯಪಾಲನಾಗಿ ನೇಮಿಸಿದನು. ಷಹಿಸ್ತೇಖಾನ್ ಪೂನಾವನ್ನು ಒಳಗೊಂಡ ವಿಶಾಲ ಮರಾಠ ಪ್ರದೇಶವನ್ನು ತನ್ನ ಕೈವಶ ಮಾಡಿಕೊಳ್ಳುತ್ತಾನೆ. ಕೊಂಕಣ ಮತ್ತು ಛಕಾನ್ ಕೋಟೆಯನ್ನು ತನ್ನ ವಶಕ್ಕೆ ತೆಗೆದುಕೊಳ್ಳುತ್ತಾನೆ. ಅಲ್ಲದೆ ಶಿವಾಜಿ ವಾಸ ಮಾಡಿದ್ದ ಮನೆಯಲ್ಲಿಯೇ ಷಹಿಸ್ತೇಖಾನ್ ಉಳಿದುಕೊಳ್ಳುತ್ತಾನೆ. 1663ರಲ್ಲಿ ಷಹಿಸ್ತೇಖಾನ್ ಮೇಲೆ ಉಪಾಯದಿಂದ ದಾಳಿ ಮಾಡಿದ ಶಿವಾಜಿ ಅವನ ಬೆರಳುಗಳನ್ನು ಕತ್ತರಿಸಿ ಆತ ಪಲಾಯನ ಮಾಡುವಂತೆ ಮಾಡುತ್ತಾರೆ. ಇದರಿಂದ ಶಿವಾಜಿಯ ಕೀರ್ತಿ ಭಾರತಾದ್ಯಂತ ಪಸರಿಸಿ ಶಿವಾಜಿ ಮನೆಮಾತಾಗುತ್ತಾರೆ.
ಪಶ್ಚಿಮ ಕರಾವಳಿಯ ಸಂಪದ್ಭರಿತವಾದ ಬಂದರು ಸೂರತ್. ಈ ಸೂರತ್‌ನಲ್ಲಿ ಆಂಗ್ಲರು ತಮ್ಮ ವ್ಯಾಪಾರ ಕೇಂದ್ರವನ್ನು ಆರಂಭಿಸಿದ್ದರು. ಇದಕ್ಕೆ ಮೊಗಲರ ಬೆಂಬಲವೂ ಇತ್ತು. ಶಿವಾಜಿ ಸೂರತ್ ಮೇಲೆ ದಾಳಿಮಾಡಿ ಕೋಟೆಯನ್ನು ತನ್ನ ಹತೋಟಿಗೆ ತೆಗೆದುಕೊಂಡು ಬ್ರಿಟಿಷರನ್ನು ಹಿಮ್ಮೆಟ್ಟಿಸಿದರು.

ಪುರಂದರ ಒಪ್ಪಂದ

ಔರಂಗಜೇಬನು ಶಿವಾಜಿಯನ್ನು ಸೆರೆಹಿಡಿಯಲು ರಾಜಾ ಜೈಸಿಂಗ್‌ನನ್ನು ಕಳುಹಿಸಿದನು. ರಾಜಾ ಜೈಸಿಂಗ್‌ನನ್ನು ಅಗಾಧ ಸೇನೆಯೊಂದಿಗೆ ಕಾದಾಡಿದ ಶಿವಾಜಿ ತನ್ನ ಹಲವು ಕೋಟೆಗಳನ್ನು ಕಳೆದುಕೊಂಡ ಮೇಲೆ 1665ರಲ್ಲಿ ಅನಿವಾರ್ಯವಾಗಿ ಪುರಂದರ ಒಪ್ಪಂದ ಮಾಡಿಕೊಳ್ಳುತ್ತಾರೆ. ಈ ಒಪ್ಪಂದದ ಪ್ರಕಾರ ಶಿವಾಜಿ ತನ್ನಲ್ಲಿನ 23 ಕೋಟೆಯನ್ನು ಮೊಘಲರಿಗೆ ಒಪ್ಪಿಸಿ 12 ಕೋಟೆಗಳನ್ನು ತನ್ನಲ್ಲಿ ಉಳಿಸಿಕೊಳ್ಳುತ್ತಾರೆ. ತನ್ನ ಮಗ ಸಂಭಾಜಿಯನ್ನು 5000 ಶ್ರೇಣಿಯ ಮನ್ಸಬ್ ದಾರಿಯನ್ನಾಗಿ ಮಾಡಲು ಒಪ್ಪಿಗೆ ಸೂಚಿಸುತ್ತಾರೆ ಮತ್ತು ಔರಂಗಜೇಬನಿಗೆ ಕಪ್ಪಕೊಡಲು ಒಪ್ಪಿಕೊಳ್ಳುತ್ತಾರೆ. ಈ ಪುರಂದರ ಒಪ್ಪಂದವು ಔರಂಗಜೇಬನ ಆಸ್ಥಾನಕ್ಕೆ ಹೋಗಲು ದಾರಿ ಮಾಡಿ ಕೊಟ್ಟಿತು.

ಮೊಘಲರ ಬಂಧನದಿಂದ ತಪ್ಪಿಸಿಕೊಂಡ ಶಿವಾಜಿ

ಆಗ್ರಾದ ಮೊಘಲ್ ಆಸ್ಥಾನಕ್ಕೆ ಜೈಸಿಂಗ್‌ನ ಒತ್ತಾಯದ ಮೇರೆಗೆ ತನ್ನ ಮಗ ಸಂಭಾಜಿಯೊಂದಿಗೆ ಶಿವಾಜಿ ಭೇಟಿ ನೀಡುತ್ತಾರೆ. ತನ್ನ ಆಸ್ಥಾನಕ್ಕೆ ಬಂದ ಶಿವಾಜಿಯನ್ನು ಔರಂಗಜೇಬ್ ಅವಮಾನಿಸಿದಾಗ ಸಿಡಿದೆದ್ದ ಶಿವಾಜಿ ಮತ್ತು ಸಂಭಾಜಿಯನ್ನು ಔರಂಗಜೇಬ್ ಬಂಧನದಲ್ಲಿರುತ್ತಾನೆ. ಆದರೆ ನಾಲ್ಕೂವರೆ ತಿಂಗಳ ಬಂಧನದ ನಂತರ ಶಿವಾಜಿ ಮತ್ತು ಸಂಭಾಜಿ ಉಪಾಯದಿಂದ ಮಿಠಾಯಿ ಬುಟ್ಟಿಯಲ್ಲಿ ಕುಳಿತು ಔರಂಗಜೇಬನ ಬಂಧನದಿಂದ ತಪ್ಪಿಸಿಕೊಳ್ಳುತ್ತಾರೆ. ರಾಜಗಢಕ್ಕೆ ವಾಪಾಸಾದ ಶಿವಾಜಿ ಪುನಃ ಕಳೆದುಕೊಂಡ ಎಲ್ಲ ಕೋಟೆಗಳನ್ನು ವಶಪಡಿಸಿಕೊಳ್ಳುತ್ತಾರೆ. ಸೂರತ್ ಬಂದರಿನ ಮೇಲೆ ಪುನಃ ಎರಡು ಸಲ ದಾಳಿ ಮಾಡುತ್ತಾರೆ.
ಈ ವಿಜಯ ಹಾಗೂ ಔರಂಗಜೇಬನ ಬಂಧನದಿಂದ ತಪ್ಪಿಸಿಕೊಂಡ ಉಪಾಯದಿಂದಾಗಿ ಶಿವಾಜಿ ಮಹಾರಾಜರ ಕೀರ್ತಿ ಇಮ್ಮಡಿಯಾಗುತ್ತದೆ. ನಂತರ ಔರಂಗಜೇಬನಿಗೆ ಶಿವಾಜಿಯನ್ನು ಅವರ ಜೀವಿತಾವಧಿಯಲ್ಲಿ ನಿಗ್ರಹಿಸಲು ಸಾಧ್ಯವಾಗಲಿಲ್ಲ.
1674ರಲ್ಲಿ ಶಿವಾಜಿಗೆ ರಾಯಘಡದಲ್ಲಿ ವೈದಿಕ ವಿಧಿವಿಧಾನದೊಂದಿಗೆ ಕಿರೀಟಧಾರಣೆ ಮಾಡಲಾಯಿತು ಮತ್ತು ಶಿವಾಜಿ ಮಹಾರಾಜರು ಛತ್ರಪತಿ ಎಂಬ ಬಿರುದನ್ನು ಪಡೆದರು.

ಶಿವಾಜಿ ಹುಬ್ಬಳ್ಳಿ, ಜಿಂಜಿ ಮತ್ತು ವೆಲ್ಲೂರು ಸಂಸ್ಥಾನಗಳನ್ನು ವಶಪಡಿಸಿಕೊಂಡರು. ಇವು ಮುಂದೆ ಮರಾಠರಿಗೆ ಸಂಕಷ್ಟ ಒದಗಿದ ಸಂದರ್ಭದಲ್ಲಿ ಆಶ್ರಯವನ್ನು ಪಡೆಯಲು ಆಶ್ರಯತಾಣವಾಯಿತು. ತನ್ನ ಮಲಸಹೋದರ ವೆಂಕೋಜಿಯನ್ನು ತಂಜಾವೂರಿನ ಅರಸನಾಗಿ ಮಾಡಿ ತನ್ನ ನಿಯಂತ್ರಣದಲ್ಲಿ ಇರಿಸಿಕೊಂಡಿದ್ದರು.
ಶಿವಾಜಿ ಒಬ್ಬ ದಕ್ಷ ಆಡಳಿತಗಾರರಾಗಿದ್ದು, ಶಿವಾಜಿ ಮರಾಠ ಸಾಮ್ರಾಜ್ಯವನ್ನು ನಿರ್ಮಿಸಿದ್ದಲ್ಲದೆ ತನ್ನ ಪ್ರಜೆಗಳಿಗೆ ಉತ್ತಮ ಆಡಳಿತವನ್ನು ನೀಡಿದ್ದರು. ರಾಜ ಸರಕಾರದ ಏಕಮಾತ್ರ ಮುಖ್ಯಸ್ಥನಾಗಿದ್ದನು ಮತ್ತು ಎಲ್ಲ ಅಧಿಕಾರಗಳು ಅವನಲ್ಲೇ ಕೇಂದ್ರಕೃತವಾಗಿದ್ದವು. ಇದನ್ನು ಕೇಂದ್ರ ಸರ್ಕಾರ ಎಂದು ಕರೆಯುತ್ತಿದ್ದರು.

ಅಷ್ಟ ಪ್ರಧಾನರ ಆಡಳಿತ ವ್ಯವಸ್ಥೆ

ಶಿವಾಜಿಯ ಆಸ್ಥಾನದಲ್ಲಿ 8 ಜನ ಮಂತ್ರಿಗಳಿಂದ ಕೂಡಿದ ಅಷ್ಟ ಪ್ರಧಾನರು ಎಂಬ ಮಂತ್ರಿ ಮಂಡಲವಿತ್ತು. ಪೇಶ್ವೆ, ಅಮಾತ್ಯ, ಮಂತ್ರಿ, ಸುಮಂತ, ಸಚಿವ, ಪಂಡಿತರಾವ್, ಸೇನಾಪತಿ, ನ್ಯಾಯಾಧೀಶ ಎಂಬ ಈ ಅಷ್ಟ ಪ್ರಧಾನರ ಮಂತ್ರಿ ಮಂಡಲ ರಾಜನಿಗೆ ಆಡಳಿತದಲ್ಲಿ ಸಹಾಯ ಮಾಡುತ್ತಿತ್ತು. ಪೇಶ್ವೆಯು ಪ್ರಧಾನ ಮಂತ್ರಿಯಾಗಿಯೂ, ಅಮಾತ್ಯರು ಹಣಕಾಸು ಮಂತ್ರಿಯಾಗಿಯೂ, ಮಂತ್ರಿ ಇತಿಹಾಸಕಾರರಾಗಿಯೂ, ದಾಖಲೆ ಇಡುವವನಾಗಿಯೂ, ಸುಮಂತ ವಿದೇಶಾಂಗ ವ್ಯವಹಾರಗಳನ್ನು ನೋಡಿಕೊಳ್ಳುವನಾಗಿಯೂ, ಸಚಿವ ರಾಜರ ಪತ್ರ ವ್ಯವಹಾರಗಳನ್ನು ಗುರುತಿಸುವವರಾಗಿಯೂ, ಪಂಡಿತರಾವ್ ದಾನಾಧ್ಯಕ್ಷರಾಗಿಯೂ, ಸೇನಾಪತಿ ಸೈನ್ಯದ ಮುಖ್ಯ ದಂಡಾಧಿಕಾರಿಯೂ ಹಾಗೂ ನ್ಯಾಯಾಧೀಶ ನ್ಯಾಯ ತೀರ್ಮಾನ ಮಾಡುವ ಮುಖ್ಯ ನ್ಯಾಯಾಧೀಶರಾಗಿಯೂ ರಾಜನಿಗೆ ಸಹಾಯ ಮಾಡುವ ಅಷ್ಟ ಪ್ರಧಾನ ವ್ಯವಸ್ಥೆ ಕೇಂದ್ರ ಸರ್ಕಾರದ ಮುಖ್ಯ ಭಾಗವಾಗಿತ್ತು.
ಜೊತೆಗೆ 18 ಇಲಾಖೆಗಳಿದ್ದವು. ಇದರ ವಿವಿಧ ಮಂತ್ರಿಗಳು ಅವುಗಳ ಉಸ್ತುವರಿ ನೋಡಿಕೊಳ್ಳುತ್ತಿದ್ದರು. ಇವರೆಲ್ಲರೂ ರಾಜನ ಆಜ್ಙೆಯಂತೆ ಅವನ ಮಾರ್ಗದರ್ಶನ ಮತ್ತು ಮುಂದಾಳತ್ವದಲ್ಲಿ ತಮ್ಮ ಜವಾಬ್ದಾರಿ ನಿರ್ವಹಿಸುತ್ತಿದ್ದರು.

ಮರಾಠ ಸಾಮ್ರಾಜ್ಯವನ್ನು ಶಿವಾಜಿಯು 4 ಭಾಗಗಳಾಗಿ ವಿಂಗಡಿಸಿ ಸ್ವರಾಜ್ಯ ಮತ್ತು ಅನೇಕ ಜಿಲ್ಲೆಗಳ ಗುಂಪನ್ನು ಪ್ರಾಂತ್ ಎಂದೂ ಕರೆಯಲಾಗುತ್ತಿತ್ತು. ಸ್ವರಾಜ್ಯವನ್ನು ವಿಂಗಡಿಸಿ ದೇಶ್ ಎಂದೂ, ದೇಶ್ ಅನ್ನು ವಿಂಗಡಿಸಿ ಪರಗಣವೆಂದೂ, ಪರಗಣವನ್ನು ವಿಂಗಡಿಸಿ ಗ್ರಾಮಗಳೆಂದೂ ಮಾಡಲಾಗಿತ್ತು.
ರಾಜ್ಯದ ಮುಖ್ಯಸ್ಥ ರಾಜನಾಗಿದ್ದರು. ರಾಜ್ಯವನ್ನು ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸಿ ಸ್ವರಾಜ್ಯವನ್ನು ಸರ್ದೇಶ್‌ಮುಖ್ ಎಂಬ ಮುಖ್ಯಸ್ಥ ನೋಡಿಕೊಳ್ಳುತ್ತಿದ್ದರು. ಸ್ವರಾಜ್ಯವನ್ನು ವಿಂಗಡಿಸಿದ ದೇಶ್‌ ಅನ್ನು ದೇಶ್‌ಮುಖ್ ಅಥವಾ ದೇಶ್‌ಪಾಂಡೆ ಎಂಬ ಅಧಿಕಾರಿ ವರ್ಗ ನೋಡಿಕೊಳ್ಳುತ್ತಿದ್ದರು. ದೇಶನ್ನು ವಿಭಾಗಿಸಿದ ಪರಗಣಗಳನ್ನು ದೇಸಾಯಿಗಳು ಎಂಬ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದರು. ಪರಗಣಗಳನ್ನು ವಿಂಗಡಿಸಿ ಗ್ರಾಮಗಳಾಗಿ ಮಾಡಿ ಅವುಗಳನ್ನು ಗ್ರಾಮಸಭೆಗಳು ನಡೆಸುತ್ತಿದ್ದವು. ಅಧಿಕಾರಿಗಳಿಗೆ ಜಾಗೀರು ಕೊಡುವ ಪದ್ಧತಿ ಇರಲಿಲ್ಲ. ಅದರ ಬದಲು ನಗದು ರೂಪದಲ್ಲಿ ವೇತನ ನೀಡುತ್ತಿದ್ದರು. ನಮ್ಮ ದೇಶದಲ್ಲಿ ಈಗಲೂ ಇದರ ಅಭಿವೃಧ್ಧಿ ರೂಪಿತ ವ್ಯವಸ್ಥೆಯನ್ನು ನಾವು ಕಾಣಬಹುದಾಗಿದೆ.

ಕಂದಾಯ ಆಡಳಿತ

ಶಿವಾಜಿ ತನ್ನ ರಾಜ್ಯದಲ್ಲಿ ಕಂದಾಯ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರು. ಪ್ರಜೆಗಳು ತಮ್ಮ ಆದಾಯದ ಶೇಖಡ 30ರಷ್ಟು ಕಂದಾಯ ಪಾವತಿಸುತ್ತಿದ್ದರು. ಪ್ರಕೃತಿ ವಿಕೋಪಗಳಾದಾಗ ಈ ಕಂದಾಯವನ್ನು ಮನ್ನಾ ಮಾಡಲಾಗುತ್ತಿತ್ತು. ಶಿವಾಜಿ ತನ್ನ ಸಾಮ್ರಾಜ್ಯದಲ್ಲಿ ಸುಸಜ್ಜಿತವಾದ ಸೈನ್ಯವನ್ನು ಹೊಂದಿದ್ದರು. ಕಾಲ್ದಳ, ಅಶ್ವದಳ, ಗಜದಳ, ನೌಕಾದಳ, ಫಿರಂಗಿದಳ, ಒಂಟೆದಳ ಎಂಬ 6 ದಳಗಳಿಂದ ಕೂಡಿದ ಸುಸಜ್ಜಿತವಾದ ಸೈನ್ಯ ಶಿವಾಜಿ ಮಹಾರಾಜರ ಕಾಲದಲ್ಲಿ ಇತ್ತು. ತನ್ನ ಸೈನಿಕರಿಗೆ ಶಿವಾಜಿ ಕೆಲವು ಆದೇಶಗಳನ್ನು ನೀಡಿದ್ದರು. ಯುದ್ಧ ಕೈದಿಗಳನ್ನು ಹಿಂಸಿಸಬಾರದು, ಸ್ತ್ರೀಯರ ಮೇಲೆ ಅನಾಚಾರ ಹಿಂಸೆ ಮಾಡಬಾರದು, ಕೃಷಿಭೂಮಿ ಮತ್ತು ಫಸಲು ನಾಶ ಮಾಡಬಾರದು ಎಂಬ ಆದೇಶವನ್ನು ನೀಡಿದ್ದರು. ಇದನ್ನು ಉಲ್ಲಂಘಿಸಿದವರಿಗೆ ಉಗ್ರ ಶಿಕ್ಷೆ ನೀಡಲಾಗುತ್ತಿತ್ತು.

ಶಿವಾಜಿಯ ಕಾಲ್ದಳದಲ್ಲಿ ಗೆರಿಲ್ಲಾ ಮತ್ತು ಪರ್ವತ ಮಾದರಿ ಯುದ್ಧ ತರಬೇತಿ ಪಡೆದ ಸೈನಿಕರಿದ್ದರು. ನೌಕಾದಳದಲ್ಲಿ ಸುಮಾರು 200 ಹಡಗುಗಳ ಬಲಿಷ್ಠ ನೌಕಾಪಡೆಯನ್ನು ಹೊಂದಿದ್ದರು. ಇದರಿಂದಾಗಿ ಶಿವಾಜಿ ಸೂರತ್ ಬಂದರಿನ ಮೇಲೆ ಎರಡೆರಡು ಬಾರಿ ದಾಳಿ ನಡೆಸಿ ಅಪಾರ ಸಂಪತ್ತು ಗಳಿಸುತ್ತಾರೆ. ಈ ನೌಕಾದಳವನ್ನು ಸಮರ್ಥವಾಗಿ ಮುನ್ನಡೆಸಲು ಕಾನೋಜಿ ಆಂಗ್ರೆ ಎಂಬ ಮರಾಠರ ಪ್ರಸಿದ್ಧ ನೌಕಾದಳಪತಿಯೂ ಇದ್ದರು.

ನ್ಯಾಯಾಡಳಿತ

ಶಿವಾಜಿಯು ತನ್ನ ರಾಜ್ಯದಲ್ಲಿ ಉತ್ತಮ ನ್ಯಾಯಾಡಳಿತ ವ್ಯವಸ್ಥೆಯನ್ನು ಹೊಂದಿದ್ದರು. ಬಡವ ಬಲ್ಲಿದ ಎಂಬ ತಾರತಮ್ಯ ಇಲ್ಲದೆ ಎಲ್ಲರಿಗೂ ಸಮಾನ ನ್ಯಾಯ ಸಿಗುವ ವ್ಯವಸ್ಥೆ ಇತ್ತು. ತಮ್ಮ ಆಡಳಿತದಲ್ಲಿ ಮರಾಠಿ ಮತ್ತು ಸಂಸ್ಕೃತ ಭಾಷೆಯನ್ನು ಬಳಸಲು ಪ್ರೇರೆಪಿಸಿದರು. ಅವರು ಹಿಂದವೀ ಸಾಮ್ರಾಜ್ಯವನ್ನು ಸ್ಥಾಪಿಸಿದರೂ ಸರ್ವಧರ್ಮ ಸಹಿಷ್ಣುವಾಗಿದ್ದರು. ಅವರ ಆಸ್ಥಾನದಲ್ಲಿ ಅನೇಕ ಮುಸಲ್ಮಾನರು ಅಧಿಕಾರಿಗಳಾಗಿದ್ದರು.

ಛತ್ರಪತಿ ಶಿವಾಜಿ ಮಹಾರಾಜ ಒಬ್ಬ ವ್ಯಕ್ತಿಯಾಗಿರದೆ ಒಬ್ಬ ವಿಚಾರವಾಗಿದ್ದರು. ಮೊಘಲ್ ಮತ್ತು ನಿಜಾಮಶಾಹಿಗಳ ಕಪಿಮುಷ್ಟಿಯಲ್ಲಿ ನಲುಗಿ ಮೂಲೆ ಗುಂಪಾಗುತ್ತಿದ್ದ ಹಿಂದೂಗಳನ್ನು ಒಗ್ಗೂಡಿಸಿದ ಒಬ್ಬ ಯುಗ ಪರಿವರ್ತನೆಯ ಶಿಲ್ಪಿಯಾಗಿದ್ದರು. ನಮ್ಮ ರಾಜ್ಯವಿರಬೇಕು, ನಮ್ಮ ಧರ್ಮದ ವಿಕಾಸವಾಗಬೇಕು. ನಮ್ಮ ಜೀವನ ಮೌಲ್ಯ ಅಭಿವೃದ್ಧಿಪಡಿಸಬೇಕು ಎಂದು ಸ್ವಾಭಿಮಾನ, ಧೈರ್ಯ, ಕೆಚ್ಚು, ತುಂಬಿದ ಆತ್ಮವಿಶ್ವಾಸವನ್ನು ಅನಾವರಣಗೊಳಿಸಿದ ಛತ್ರಪತಿ ಶಿವಾಜಿ ಮಹಾರಾಜರು ಅದಮ್ಯ ಚೇತನವಾಗಿ ಎಲ್ಲರಲ್ಲಿಯೂ ನವಭಾವವನ್ನು ತುಂಬುವ ಪುಣ್ಯ ಪುರುಷರಾಗಿದ್ದಾರೆ.

ಗಿರೀಶ್ ರಾವ್ ಛತ್ರಪತಿ ಕಾರ್ಕಳ







































error: Content is protected !!
Scroll to Top