ಕಾರ್ಕಳ ಬ್ಲಾಕ್‌ ಕಾಂಗ್ರೆಸ್ – ನೂತನ ಬೂತ್ ಅಧ್ಯಕ್ಷರುಗಳಿಗೆ ಅಭಿನಂದನೆ

ಕಾರ್ಕಳ : ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಕಾರ್ಕಳ ಇದರ ವತಿಯಿಂದ ಕಾರ್ಕಳ ಬ್ಲಾಕ್ ವ್ಯಾಪಿಯ ನೂತನ ಬೂತ್‌ ಅಧ್ಯಕ್ಷರುಗಳಿಗೆ ಅಭಿನಂದನೆ ಮತ್ತು ಸಂವಾದ ಕಾರ್ಯಕ್ರಮ ಫೆ. 16ರಂದು ಪ್ರಕಾಶ್ ಹೋಟೇಲ್‌ನಲ್ಲಿ ಜರುಗಿತು.
ನೂತನ 150 ಬೂತ್ ಅಧ್ಯಕ್ಷರುಗಳನ್ನು ಅಭಿನಂದಿಸಿ ಮಾತನಾಡಿದ ಉದಯ್ ಶೆಟ್ಟಿ ಮುನಿಯಾಲು, ಪಕ್ಷ ಸಂಘಟನೆಯಲ್ಲಿ ಬೂತ್ ಅಧ್ಯಕ್ಷರ ಪಾತ್ರ ಮಹತ್ವವಾದುದು. ಅವರು ಸ್ಥಳಿಯ ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಸೇವೆ ಸಲ್ಲಿಸಿದಾಗ ಸುಲಭವಾಗಿ ಸಮಸ್ಯೆಗಳಿಗೆ ಪರಿಹಾರ ಒದಗಿಸಬಹುದು ಮತ್ತು ಅದರ ಪರಿಣಾಮ ಪಕ್ಷ ಸಂಘಟನೆಗೆ ಪೂರಕವಾಗುತ್ತದೆ ಎಂದರು.

ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಶುಭದ ರಾವ್ ಮಾತನಾಡಿ, ನಮ್ಮ ದೇಶದ ಇತಿಹಾಸ ಮತ್ತು ಕಾಂಗ್ರೆಸ್ ಇತಿಹಾಸ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಅಂತಹ ಪಕ್ಷದ ಪದಾಧಿಕಾರಿಗಳಾಗಿರುವುದು ನಮ್ಮೆಲ್ಲರ ಪುಣ್ಯ. ಆದ್ದರಿಂದ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಪಕ್ಷದ ಬಲವರ್ಧನೆಗೆ ಸಂಪೂರ್ಣ ತೊಡಗಿಸಿಕೊಳ್ಳಿ ಎಂದರು.

ಪಕ್ಷದ ಹಿರಿಯರಾದ ನ್ಯಾಯವಾದಿ ಶೇಖರ್ ಮಡಿವಾಳ್ ಮಾತನಾಡಿ, ಕಾರ್ಕಳದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನಾ ಕಾರ್ಯವು ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವುದು ಸಂತಸ ತಂದಿದೆ. ಪಕ್ಷ ಸಂಘಟನೆಯಲ್ಲಿ ಯುವ ಕಾಂಗ್ರೆಸ್ ಪಾತ್ರ ಅತ್ಯಂತ ಮಹತ್ವದ್ದು ಹಾಗಾಗಿ ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳು ಈ ಅಂಶವನ್ನು ಅರಿತುಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂದರು.

ಇದೇ ಸಂದರ್ಭ ಕಾಂಗ್ರೆಸ್ ಪಕ್ಷದ ಚಿಹ್ನೆಯುಳ್ಳ ಸಮವಸ್ತ್ರವನ್ನು ಬಿಡುಗಡೆಗೊಳಿಸಿ ಬೂತ್ ಅಧ್ಯಕ್ಷರುಗಳಿಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದ ನೂತನ ಯುವ ಕಾಂಗ್ರೆಸ್ ಅಧ್ಯಕ್ಷ ಸೂರಜ್ ಶೆಟ್ಟಿ ನಕ್ರೆ, ಕಾರ್ಕಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಮಲಿಕ್ ಅತ್ತೂರು, ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜೇಂದ್ರ ದೇವಾಡಿಗ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೀನಾ ಡಿಸೋಜ, ಹಿಂದುಳಿದ ಘಟಕದ ಅಧ್ಯಕ್ಷ ಅನಿಲ್ ನೆಲ್ಲಿಗುಡ್ಡೆ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಬ್ಬೀರ್, ಕಾನೂನು ಘಟಕದ ಅಧ್ಯಕ್ಷ ರೆಹಮ್ಮತ್ತುಲ್ಲಾ ಉಪಸ್ಥಿತರಿದ್ದರು.
ಕಾರ್ಕಳ ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಕ್ತಾರ ಪ್ರದೀಪ್ ಬೇಲಾಡಿ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಘಟಕದ ಅಧ್ಯಕ್ಷೆ ಭಾನು ಭಾಸ್ಕರ್ ಪೂಜಾರಿ ವಂದಿಸಿದರು.





























































































































error: Content is protected !!
Scroll to Top