ಕಾರ್ಕಳ : ಆರ್ಯಾರ್ಚನಮ್ ಎಂಬ ಶಬ್ದವೇ ನನ್ನನು ಇಲ್ಲಿಗೆ ಬರುವಂತೆ ಮಾಡಿದೆ. ಭಾರತದೆಲ್ಲಿಯೂ ಈ ರೀತಿಯ ಪೂಜಾ ಕೈಂಕರ್ಯವನ್ನು ನಾನು ನೋಡಿರಲಿಲ್ಲ ಎಂದು ವಿದ್ವಾನ್ ಲಲಿತಾನಂದನಾಥ ಹೇಳಿದರು.
ಅವರು ಫೆ. 11ರಂದು ಹಿರಿಯಡ್ಕ ಪಂಚನಬೆಟ್ಟು ಶ್ರೀ ದುರ್ಗಾಪರಮೇಶ್ವರಿ ಯಜ್ಞಶಾಲೆಯಲ್ಲಿ ಆರ್ಯಾರ್ಚನಮ್‌ನಲ್ಲಿ ಭಾಗವಹಿಸಿ ಮಾತನಾಡಿದರು.
ಗಿರಿಜಾಶಂಕರ ಜೋಷಿ ಮಾತನಾಡಿ, ಏಳು ವರುಷಗಳ ಹಿಂದೆ ಸ್ಥಾಪನೆಯಾದ ಯಾಗಶಾಲೆ ಇಂದು ಬಹಳ ದೊಡ್ಡ ಯಜ್ಞಶಾಲೆಯಾಗಿ ಪರಿವರ್ತನೆಯಾಗಿದೆ. ಇದು ಜಾಗದ ಮಹಿಮೆಯಾಗಿದ್ದು, ಅಜಿತ್ ಆಚಾರ್ಯ ಅವರಿಗೆ ದೇವರ ಅನುಗ್ರಹ ಪ್ರಾಪ್ತವಾಗಿದೆ ಎಂದರು.
ವಿದ್ವಾನ್ ಅಜಿತ್ ಆಚಾರ್ಯ ಮಾತನಾಡಿ, ಪಂಚನಬೆಟ್ಟು ಶ್ರೀ ದುರ್ಗಾಪರಮೇಶ್ವರಿ ಯಜ್ಞಶಾಲೆಯಲ್ಲಿ ಆರ್ಯಾರ್ಚನಮ್ ಮಾಡುವಲ್ಲಿ ಮುಖ್ಯ ಕಾರಣ ನನ್ನ ತಾಯಿ. ಇಂಥದೊಂದು ಪುಣ್ಯಕಾರ್ಯ ನೆರವೇರಲು ದೇವಿಯೇ ಪ್ರೇರಣೆ ಎಂದರು. ಯರ್ಲಪಾಡಿ ರಾಮಕೃಷ್ಣ ಆಶ್ರಮದ ಶ್ರೀ ಪ್ರಮೋದಾನಂದ ಸ್ವಾಮೀಜಿ, ಶ್ರೀದುರ್ಗಾಪರಮೇಶ್ವರಿ ಯಜ್ಞಶಾಲಾದ ಟ್ರಸ್ಟಿ ನರಸಿಂಹ, ಅಜಿತ್ ಆಚಾರ್ಯರ ಮಾತೃಶ್ರೀ ಲೀಲಾ ಅಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ
ವಿದುಷಿ ಮಾನಸಿ ಸುಧೀರ್, ಗಾಯಕ ಯಶವಂತ್ ಎಂ.ಜಿ. ಹಾಗೂ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಶಿಲ್ಪಿ ಪ್ರಕಾಶ್ ಆಚಾರ್ಯ ಪಡ್ಡಮ್ ಅವರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಮಾನಸಿ ಸುಧೀರ್ ಮಾತನಾಡಿದರು.
ಸಪ್ತಶತಿ ಪಾರಾಯಣ, ದುರ್ಗಾಹೋಮ, ಪವಮಾನ ಹೋಮ, ಪಂಚಾಮೃತ ಅಭಿಷೇಕ, ಪ್ರಸನ್ನ ಪೂಜೆ, ಸಂಜೆ ಪೂಜಾ ಸಂಕಲ್ಪ, ಅಯುತಾರ್ಚನೆ, ಮಹಾಮಂಗಳಾರತಿ, ಅಷ್ಟಾವಧಾನ ಸೇವೆ ನಡೆಯಿತು. ಸಾಂಸ್ಕೃತಿಕ ವೈಭವದಲ್ಲಿ ವಿಠಲ ನಾಯಕ್ ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ಮತ್ತು ಸ್ಥಳೀಯರಿಂದ ಸಾಂಸ್ಕೃತಿಕ ವೈಭವ ಜರುಗಿತು.

ಗಣೇಶ್ ಆಚಾರ್ಯ ಪ್ರಾರ್ಥಿಸಿ, ಯಶವಂತ್ ಎಂ.ಜಿ. ಸ್ವಾಗತಿಸಿದರು. ಪುರೋಹಿತ್ ದಾಮೋದರ ಶರ್ಮ ನಿರೂಪಿಸಿ, ವಂದಿಸಿದರು.
































































