ಕಾರ್ಕಳ : ಕುದುರೆಮುಖ ವನ್ಯಜೀವಿ ವಿಭಾಗ ಕಾರ್ಕಳ ಇದರ ವತಿಯಿಂದ ಅರಣ್ಯ ಇಲಾಖಾ ಸಿಬ್ಬಂದಿ, ಅರಣ್ಯ ವೀಕ್ಷಕರು ಮತ್ತು ಬೆಂಕಿ ಕಾವಲುಗಾರರಿಗೆ ಕುಕ್ಕುಂದೂರು ಪಂಚಾಯತ್ ಮೈದಾನದಲ್ಲಿ ಬೆಂಕಿ ಅವಘಡ ನಿಯಂತ್ರಣ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ಜ. 21ರಂದು ನಡೆಯಿತು.
ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ ಬಾಬು ಮಾತನಾಡಿ, ಬೇಸಿಗೆ ಕಾಲದಲ್ಲಿ ಕಾಡಿನಲ್ಲಿ ಬೆಂಕಿ ಅವಘಡ ಸಂಭವಿಸುತ್ತಿದೆ. ಇದನ್ನು ತಡೆಯಲು ಎಲ್ಲಾ ಸಿಬ್ಬಂದಿ ಪೂರ್ವತಯಾರಿ ಮಾಡಿಕೊಳ್ಳಬೇಕಿದೆ. ಬೆಂಕಿ ನಂದಿಸುವಾಗ ಎಚ್ಚರದಿಂದಿರಬೇಕಿದೆ ಎಂದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಎನ್. ಮಾತನಾಡಿ, ಬೆಂಕಿ ಅನಾಹುತ ತಡೆಯಲು ವಿಭಾಗದ ಎಲ್ಲಾ ವಲಯಗಳಲ್ಲಿ ಈಗಾಗಲೇ ಬೆಂಕಿ ರೇಖೆಗಳನ್ನು ನಿರ್ಮಿಸಲಾಗಿದೆ. ಬೆಂಕಿ ಕಾವಲುಗಾರರನ್ನು ನೇಮಿಸಿಕೊಳ್ಳಲಾಗಿದೆ. ಈ ವರ್ಷ ನಮ್ಮ ವಿಭಾಗದಲ್ಲಿ ಬೆಂಕಿ ಅವಘಡ ಶೂನ್ಯ ಪ್ರಕರಣ ದಾಖಲಾಗಬೇಕು. ಈ ನಿಟ್ಟಿನಲ್ಲಿ ಸಿಬ್ಬಂದಿ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕೆಂದರು.
ಕಾರ್ಕಳ ಅಗ್ನಿಶಾಮಕ ಠಾಣೆಯ ಅಧಿಕಾರಿಗಳಾದ ಚಂದ್ರಶೇಖರ್, ಹರಿಪ್ರಸಾದ್ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಉಪ ವಲಯ ಅರಣ್ಯಾಧಿಕಾರಿ ರಾಜು ಎಲ್. ಜೆ. ಸ್ವಾಗತಿಸಿದರು. ವಲಯ ಅರಣ್ಯ ಅಧಿಕಾರಿ ಶಶಿಧರ ಗೌಡ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು. ಉಪ ವಲಯ ಅರಣ್ಯ ಅಧಿಕಾರಿ ಅಭಿಲಾಶ್ ಎಸ್. ಬಿ. ವಂದಿಸಿದರು.






























































