ಕಾರ್ಕಳ : ನೀರೆ ಗ್ರಾಮ ಪಂಚಾಯತ್ನಲ್ಲಿ 2024–25ನೇ ಸಾಲಿನ ಮಕ್ಕಳ ಗ್ರಾಮಸಭೆ ಜ. 20ರಂದು ಸುವರ್ಣ ಸಮುದಾಯ ಭವನದಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಸದಾನಂದ ನಾಯಕ್, ಮಕ್ಕಳ ಹಕ್ಕುಗಳು, ರಕ್ಷಣೆ, ಪೋಕ್ಸೋ ಕಾಯ್ದೆ, ಆರೋಗ್ಯ ಶುಚಿತ್ವ, ನೈರ್ಮಲ್ಯ ಕುರಿತಾದ ಮಾಹಿತಿಯೊಂದಿಗೆ ಮಕ್ಕಳಿಗೆ ಧೈರ್ಯ ಸಾಹಸೀ ಮನೋಭಾವ ಬೀರುವಂತಹ ಕಥೆಗಳನ್ನು ಪ್ರಚುರಪಡಿಸಿದರು.
ಪೋಲೀಸ್ ಇಲಾಖೆಯ ಯಶವಂತ್, ಕ್ಷೇತ್ರ ಶಿಕ್ಷಣ ಇಲಾಖೆಯ ಆಶಾ ಬಾನು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಕಿ ಉಮಾ ಇಲಾಖಾವಾರು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲೂರ್ಡ್ ಆಂಗ್ಲ ಮಾಧ್ಯಮ ಶಾಲೆ ಕಣಜಾರು ಶಾಲಾ ವಿದ್ಯಾರ್ಥಿನಿ ಜೋತ್ನಾ ರೆಬೆಲ್ಲೋ ಮಾತನಾಡಿ, ಗ್ರಾಮ ಸಭೆಯಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ಮಾಹಿತಿ ಸಿಗುತ್ತದೆ. ಎಲ್ಲಾ ಮಕ್ಕಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು.
ಹೆದ್ದಾರಿ ಶಾಲಾ ವಿದ್ಯಾರ್ಥಿನಿ ಕೀರ್ತಿ ಶಾಲೆಯ ಮೇಲ್ಚಾವಣಿ ತೀರಾ ಹಳೆಯದಾಗಿದ್ದು, ಮಳೆಗಾಲದಲ್ಲಿ ನೀರು ಸೋರಿಕೆಯಾಗುತ್ತಿರುವ ಬಗ್ಗೆ ಸಭೆಯಲ್ಲಿ ಗಮನ ಸೆಳೆದರು. ಲೂರ್ಡ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ನಿಷ್ಕಾ ಶೆಟ್ಟಿ ಸ್ವಚ್ಚತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸಮುದಾಯ ಶೌಚಾಲಯ, ಸೃಷ್ಟಿ ಪಿ. ಶೆಟ್ಟಿ ಕಣಜಾರು ಗ್ರಾಮದ ರಸ್ತೆಯ ಬದಿಗಳಲ್ಲಿ ಸ್ವಚ್ಚತೆಯನ್ನು ಕೈಗೊಳ್ಳುವ ಬಗ್ಗೆ, ಲಿನೋಲಾ ಡಿಸೋಜಾ ಶನಿವಾರ ಸ್ವಚ್ಚತಾ ಕಾರ್ಯಕ್ರಮವನ್ನು ಕೈಗೊಳ್ಳಬೇಕೆಂದು ಮೌಖಿಕವಾಗಿ ತಿಳಿಸಿದರು.

ಪಂಚಾಯತ್ ಅಧ್ಯಕ್ಷ ಸಚ್ಚಿದಾನಂದ ಪ್ರಭು ಮಾತನಾಡಿ, ಮಕ್ಕಳ ಗ್ರಾಮಸಭೆಯಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶವಿದೆ. ಸಭೆಯಲ್ಲಿ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ಹೇಳುವ ಮೂಲಕ ಶಾಲೆಯ ಸರ್ವತೋಮುಖ ಬೆಳವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದ ಅವರು ವಿದ್ಯಾರ್ಥಿಗಳು ನೀಡಿದ ಮೌಖಿಕ ಅಹಲುವಾಲುಗಳಿಗೆ ಕೂಡಲೇ ಕ್ರಮಕೈಗೊಳ್ಲುವುದಾಗಿ ತಿಳಿಸಿದರು.
ಸಭೆಯಲ್ಲಿ ಶೇ. 25ರ ನಿಧಿಯಲ್ಲಿ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ 51 ಮಕ್ಕಳಿಗೆ ಬ್ಯಾಗ್ ವಿತರಣೆ, ಶೇ. 5%ರ ನಿಧಿಯಲ್ಲಿ ಬೈಲೂರು ಸರಕಾರಿ ಪದವಿ ಪೂರ್ವ ಕಾಲೇಜಿಗೆ ವಾಲಿಬಾಲ್ ಕ್ರೀಡೆಗೆ ಬೇಕಾದ ಕ್ರೀಡಾ ಸಾಮಾಗ್ರಿಗಳನ್ನು ವಿತರಣೆ ಮಾಡಲಾಯಿತು. ಸಭೆಯಲ್ಲಿ ನೋಡೆಲ್ ಅಧಿಕಾರಿ ಕೃಷಿ ಇಲಾಖೆಯ ಗೋವಿಂದ ನಾಯ್ಕ, ಪಂಚಾಯತ್ ಉಪಾಧ್ಯಕ್ಷ ವಿದ್ಯಾ ಎಸ್. ಶೆಟ್ಟಿ, ಗ್ರಾಮ ಕರಣಿಕ ಸುಚಿತ್ರಾ, ವಿವಿಧ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾಕಾರ್ಯಕರ್ತೆಯರು, ಶ್ರಿ ಬನಶಂಕರಿ ಸಂಜೀವಿನಿ ಒಕ್ಕೂಟದ ಎಲ್ಸಿಆರ್ಪಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ಅಂಕಿತಾ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.































































