ಹೆಬ್ರಿ : ಶಿವಪುರದಲ್ಲಿ ಫೆ. 16ರಂದು ನಡೆಯುವ ಹೆಬ್ರಿ ತಾಲೂಕು ಐದನೆಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಲೇಖಕಿ ಪಿ. ಜಯಲಕ್ಷ್ಮಿ ಅಭಯ ಕುಮಾರ್ (ಅಭಯ ಲಕ್ಷ್ಮಿ) ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಜ. 5ರಂದು ಶಿವಪುರದಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆಯಲ್ಲಿ ಸರ್ವಾಧ್ಯಕ್ಷರ ಆಯ್ಕೆಯನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ತಿಳಿಸಿದ್ದಾರೆ. ಈ ಸಂದರ್ಭ ಹೆಬ್ರಿ ತಾಲೂಕು ಕ.ಸಾ.ಪ. ಅಧ್ಯಕ್ಷ ಶ್ರೀನಿವಾಸ ಭಂಡಾರಿ, ಸ್ವಾಗತ ಸಮಿತಿ ಅಧ್ಯಕ್ಷ ಗಣೇಶ ಹಾಂಡ, ಸಂಚಾಲಕ ರಮಾನಂದ ಶೆಟ್ಟಿ, ಗೌರವಾಧ್ಯಕ್ಷ ಶಂಕರನಾರಾಯಣ ಕೊಡಂಚ, ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕಿ ಗುಲಾಬಿ, ಗೌರವ ಕಾರ್ಯದರ್ಶಿಗಳಾದ ಡಾ. ಪ್ರವೀಣ ಕುಮಾರ್, ಮಂಜುನಾಥ ಕೆ. ಶಿವಪುರ ಮತ್ತು ಕ.ಸಾ.ಪ ಪದಾಧಿಕಾರಿಗಳು, ಸದಸ್ಯರು ಮತ್ತು ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪಿ. ಜಯಲಕ್ಷ್ಮಿ ಅಭಯ್ ಕುಮಾರ್
(ಕಾವ್ಯನಾಮ : ಅಭಯ ಲಕ್ಷ್ಮಿ)
ಪಿ. ಜಯಲಕ್ಷ್ಮಿ ಅಭಯ್ ಕುಮಾರ್ ಅವರು ನಾಡಿನ ಖ್ಯಾತ ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರ ಹೆಬ್ರಿ ತಾಲೂಕಿನ ಪಡುಕುಡೂರಿನ ಎಂ. ಡಿ. ಅಧಿಕಾರಿ ಮತ್ತು ಕಮಲಾವತಿ ಅಧಿಕಾರಿ ದಂಪತಿ ಪುತ್ರಿ. ಕನ್ನಡ ಎಂ.ಎ. ಪದವಿ ಮತ್ತು ಜೈನಾಲಜಿಯಲ್ಲಿ ಡಿಪ್ಲೋಮವನ್ನು ಪಡೆದಿದ್ದಾರೆ. ದಿ ನ್ಯೂ ಕೇಂಬ್ರಿಜ್ ಪದವಿ ಪೂರ್ವ ಕಾಲೇಜು, ವಿಜಯನಗರ ಬೆಂಗಳೂರು ಇಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಕೃತಿಗಳು
ಹೇಗಿರಲಿ ನಾನು (ಕವನ ಸಂಕಲನ ), ಸ್ವಾತಂತ್ರ್ಯ ಯೋಧ ಶ್ರೀ ಎಂಡಿ ಅಧಿಕಾರಿ (ಜೀವನ ಚರಿತ್ರೆ ), ಅಭಿನವ ಅತ್ತಿಮಬ್ಬೆ (ಜೀವನ ಸಾಧನೆ), ಗಂಧಶಾಲಿ (ಪ್ರಬಂಧ ಸಂಕಲನ ) ಪುಣ್ಯವನಿತೆ ಮೈನಾ ಸುಂದರಿ (ರಂಗ ನಾಟಕ) ಪ್ರೇಮ ಭಟ್ (ಬದುಕು ಬರಹ) ಮಹಾಕವಿ ರತ್ನಾಕರವರ್ಣಿ ಪ್ರಶಸ್ತಿ ಪುರಸ್ಕೃತರು, ಸಾವಿರದ ಎಂಟು ಮಹಾವೀರವಾಣಿ ಮುಂತಾದ ಕೃತಿಗಳನ್ನು ಬರೆದಿದ್ದಾರೆ. ಜೈನ ಧರ್ಮದ ತಿರುಳು, ರೂವಾರಿ ಅಭೀಷ್ಟ, ತ್ಯಾಗ ಶ್ರೀ, ಶತ ಸಂಭ್ರಮ (ಸಂಪಾದಕತ್ವ) ಇದಲ್ಲದೆ ಹಲವಾರು ಮಕ್ಕಳಿಗಾಗಿ ಕಿರು ನಾಟಕ ದೃಶ್ಯ ರೂಪಕಗಳನ್ನು ಬರೆದು ಧ್ವನಿ ಸುರುಳಿ ಹೊರತಂದಿದ್ದಾರೆ ಅವುಗಳೆಂದರೆ ಸುವರ್ಣ ಭಾರತಿ, ಕೆಂಪಜ್ಜಿಯ ಸುಖೀ ಸಂಸಾರ, ನವರಸೋಲಾಸ, ನಿಸರ್ಗ ಇತ್ಯಾದಿ. ಭವ್ಯಾಂಜಲಿ (ಧ್ವನಿ ಸುರಳಿ) ವೀರ ಧರ್ಮ ದೀಪಿಕೆಯರು (ದೃಶ್ಯಾರೋಪಕ ) ಹಂಪ – ಕಂತಿಯರ ಸಂವಾದ.

ಇವರು ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತು ಸದಸ್ಯರಾಗಿ ಹಾಗೂ ಕರ್ನಾಟಕ ಲೇಖಕಿಯ ಸಂಘ ಬೆಂಗಳೂರು ಇದರ ಕಾರ್ಯಕಾರಿ ಸದಸ್ಯರಾಗಿದ್ದಾರೆ. ದಕ್ಷಿಣ ಕನ್ನಡ ಜೈನ ಮೈತ್ರಿಕೂಟ ಬೆಂಗಳೂರು ಇದರ ಗೌರವ ಸಲಹೆಗಾರರಾಗಿ, ಆರ್ಟಿ ನಗರ ಜೈನ ಮಿಲನ್ ಬೆಂಗಳೂರು ಇದರ ಅಧ್ಯಕ್ಷರಾಗಿ, ಕರ್ನಾಟಕ ಜೈನ ಅಸೋಸಿಯೇಷನ್ ಬೆಂಗಳೂರು ಇಲ್ಲಿನ ಹಾಲಿ ಕಾರ್ಯಕಾರಿ ಸದಸ್ಯರಾಗಿ, ನ್ಯೂ ಕೇಂಬ್ರೆಜ್ ವಿದ್ಯಾ ಸಂಸ್ಥೆಯ ಸಾಂಸ್ಕೃತಿಕ ಸಮಿತಿ ಬೆಂಗಳೂರು ಇದರ ಸದಸ್ಯರು, ಲಯನ್ಸ್ ಕ್ಲಬ್ ಆಫ್ ಜಾಣ ಯೋಗ ಬೆಂಗಳೂರು ಇದರ ಕಾರ್ಯಕಾರಿ ಸದಸ್ಯರು, ಚಕ್ರೇಶ್ವರಿ ಮಹಿಳಾ ಸಮಾಜ ಬೆಂಗಳೂರು, ತುಳು ಒಕ್ಕೂಟ ಬೆಂಗಳೂರು, ಕರ್ನಾಟಕ ಕರಾವಳಿ ವೇದಿಕೆ ಬೆಂಗಳೂರು ಇದರ ಕಾರ್ಯಕಾರಿ ಸದಸ್ಯರು, ಮಹಾವೀರ ಪೌಂಡೇಶನ್ ಇದರ ಕಾರ್ಯಕಾರಿ ಸದಸ್ಯರಾಗಿ ಹೀಗೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ.
ಪ್ರಶಸ್ತಿಗಳು
1998ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕವನ ಸಂಕಲನಕ್ಕೆ ಪಿ. ಶಾಂತಿಲಾಲ್ ಪ್ರಶಸ್ತಿ (ಮೂರು ಬಾರಿ).
1998ರಲ್ಲಿ ಪ್ರಶಾಂತನಗರದ ಲಯನ್ಸ್ ಕ್ಲಬ್ ನಿಂದ ಉತ್ತಮ ಶಿಕ್ಷಕ ಪ್ರಶಸ್ತಿ
1998ರಲ್ಲಿ ಶ್ರವಣಬೆಳಗೊಳದ ಸ್ವಸ್ತಿ ಶ್ರೀ ಚಾರು ಕೀರ್ತಿ ಸ್ವಾಮೀಜಿ ಅವರಿಂದ ರಾಜ್ಯಮಟ್ಟದ ಜೈನ ಕವಿಗೋಷ್ಠಿಯಲ್ಲಿ ಸ್ವಸ್ತಿ ಪ್ರಶಸ್ತಿ
1999ರಲ್ಲಿ ಕವನ ಸಂಕಲನಕ್ಕೆ ಅತ್ತಿಮಬ್ಬೆ ಪ್ರಶಸ್ತಿ 2001ರಲ್ಲಿ ಸ್ವಾತಂತ್ರ್ಯ ಯೋಧ ಎಂ ಡಿ ಅಧಿಕಾರಿ ಕೃತಿಗೆ ಗೋರೂರು ಸಾಹಿತ್ಯ ಪ್ರಶಸ್ತಿ
2004ರಲ್ಲಿ ಕರ್ನಾಟಕ ಪ್ರತಿಭ ಅಕಾಡೆಮಿಯಿಂದ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಪ್ರಶಸ್ತಿ ನ್ಯೂ ಕೇಂಬ್ರಿಜ್ ವಿದ್ಯಾ ವಿದ್ಯಾ ಸಂಸ್ಥೆಯಿಂದ ಉತ್ತಮ ಶಿಕ್ಷಕ ಪ್ರಶಸ್ತಿ
2012ರಲ್ಲಿ ಜೈಹಿಂದ್ ಅಕಾಡೆಮಿ ಎಜುಕೇಶನ್ ಟ್ರಸ್ಟ್ ನಿಂದ ಉತ್ತಮ ಶಿಕ್ಷಕಿ ಪ್ರಶಸ್ತಿ
2017ರಲ್ಲಿ ನವಚೈತನ್ಯ ಉದಯ ಪ್ರತಿಷ್ಠಾನದಿಂದ ಕರುನಾಡ ಸಾಧನ ಶ್ರೀ ಸಿರಿ ರತ್ನ ಪ್ರಶಸ್ತಿ ಮೊದಲಾದವು.






























































