ತಾಲೂಕಿನಲ್ಲಿದೆ 10ಕ್ಕಿಂತ ಕಡಿಮೆ ಮಕ್ಕಳಿರುವ 12 ಶಾಲೆಗಳು

ವಿದ್ಯಾರ್ಥಿಗಳಿಲ್ಲದೇ ಮುಚ್ಚಿತು 2 ಶಾಲೆ, ಪಲಾಯಿಬಾಕ್ಯಾರಿನಲ್ಲಿ ಮೂರೇ ವಿದ್ಯಾರ್ಥಿಗಳು

ಕಾರ್ಕಳ : ಸರಕಾರಿ ಶಾಲೆಗಳತ್ತ ವಿದ್ಯಾರ್ಥಿಗಳ ಮತ್ತು ಪೋಷಕರ ಒಲವು ವೃದ್ಧಿಸುವ ಸಲುವಾಗಿ, ಸರಕಾರಿ ಶಾಲೆಗಳ ಅಭಿವೃದ್ಧಿಗಾಗಿ ಸರಕಾರ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದೆ. ಉಚಿತ ಶಿಕ್ಷಣ, ಬಿಸಿಯೂಟ, ಮೊಟ್ಟೆ ಚಿಕ್ಕಿ, ಶೂ, ಬಗೆ ಬಗೆಯ ಸ್ಕಾಲರ್‌ ಶಿಪ್‌, ಪಠ್ಯ ಪುಸ್ತಕ, ಸಮವಸ್ತ್ರ, ಕ್ಷೀರಭಾಗ್ಯ, ಪ್ರೋತ್ಸಾಹಕರ ಯೋಜನೆ, ಗ್ರಂಥಾಲಯ ಖರೀದಿಗಾಗಿ ಅನುದಾನ ಹೀಗೆ ಸರಕಾರಿ ಶಾಲಾ ಮಕ್ಕಳಿಗಾಗಿ ಹಲವಾರು ಸೌಲಭ್ಯಗಳನ್ನು ಸರಕಾರ ಒದಗಿಸುತ್ತಿದೆ. ಆದರೂ ಸರಕಾರಿ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಅನೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಬೆರಳೆಣಿಕೆಯಷ್ಟಿದೆ.

ಸರಕಾರಿ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಪ್ರಮುಖವಾದುದು ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ. ಕಡಿಮೆ ಸಂಖ್ಯೆ ವಿದ್ಯಾರ್ಥಿಗಳಿರುವ ಶಾಲೆಗಳನ್ನು ಉಳಿಸಿಕೊಳ್ಳುವುದು ಶಿಕ್ಷಣ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ಕಾರ್ಕಳ-ಹೆಬ್ರಿ ತಾಲೂಕಿನಲ್ಲಿ 126 ಪ್ರಾಥಮಿಕ ಸರಕಾರಿ ಶಾಲೆಗಳಿದ್ದು ಒಟ್ಟು 8,117 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದರಲ್ಲಿ 12 ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ಸಂಖ್ಯೆ ವಿದ್ಯಾರ್ಥಿಗಳಿರುವುದು ಸೋಜಿಗದ ಸಂಗತಿ.

ಕಡಿಮೆ ಮಕ್ಕಳಿರುವ ಶಾಲೆ
ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 4 ವಿದ್ಯಾರ್ಥಿಗಳು, ಪಡ್ಡಾಯಿಗುಡ್ಡೆ 7, ಜೋಗುಳಬೆಟ್ಟು 9, ಮೂಡಬೆಟ್ಟು 8, ಮಂಗಳನಗರ 9, ಕಾಡುಹೊಳೆ 6, ಮಾಯಾಂದಾಲಕ್ಯಾರ್‌ 8, ಪೇರಲ್ದ ಬೆಟ್ಟು 10, ಪಲಾಯಿಬಾಕ್ಯಾರು 3, ಪೊಸನೊಟ್ಟು 4, ನೀರೆ ಹೆದ್ದಾರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 10 ಹಾಗೂ ಕಾಡಂಬಳ ಶಾಲೆಯಲ್ಲಿ 9 ಮಂದಿ ವಿದ್ಯಾರ್ಥಿಗಳಿದ್ದಾರೆ.

ಕಡಿಮೆ ಸಂಖ್ಯೆಯಿರುವ ಶಾಲೆಗಳಲ್ಲಿ ಸರಕಾರದ ನಿಯಮದಂತೆ ಮಂಜೂರುಗೊಂಡ ಸಂಖ್ಯೆಯ ಖಾಯಂ ಶಿಕ್ಷಕರು ಕಾರ್ಯನಿರ್ಹಿಸುತ್ತಿದ್ದಾರೆ. ಖಾಯಂ ಶಿಕ್ಷಕರು ಇಲ್ಲದ ಶಾಲೆಗೆ ಅತಿಥಿ ಶಿಕ್ಷಕರೊಂದಿಗೆ ನಿಯೋಜಿತ (Deputed) ಶಿಕ್ಷಕರನ್ನು ನೇಮಕ ಮಾಡಲಾಗಿದೆ.

ಸ್ಪರ್ಧಾತ್ಮಕ ಮನೋಭಾವ ಇಲ್ಲ
ಒಂದು ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಬೆರಳೆಣಿಕೆಯಲ್ಲಿದ್ದಲ್ಲಿ ಆ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಯಲು ಸಾಧ್ಯವಿಲ್ಲ. ಆಟ, ಪಾಠದಲ್ಲಿ ಸ್ಪರ್ಧೆ ಇಲ್ಲದೇ ಹೋದಲ್ಲಿ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಾಗದೇ ಇರಬಹುದು. ಮಕ್ಕಳಿಗೂ ಸಹಪಾಠಿಗಳ ಸಂಖ್ಯೆ ಬಹಳ ಕಡಿಮೆ ದೊರೆಯುವುದು.

ಇಂಗ್ಲೀಷ್‌ ಮೀಡಿಯಂ ಪ್ರಭಾವ
ಪೋಷಕರು ತಮ್ಮ ಮಕ್ಕಳನ್ನು ಆಂಗ್ಲ ಮಾ‍‍ಧ್ಯಮ ಶಾಲೆಗೆ ಸೇರಿಸಲು ಹೆಚ್ಚು ಉತ್ಸುಕರಾಗಿರುವುದು ಕನ್ನಡ ಶಾಲೆಯ ದಾಖಲಾತಿ ಕಡಿಮೆಯಾಗುವಲ್ಲಿ ಪ್ರಮುಖ ಕಾರಣವಾಗಿದೆ. ಇದನ್ನು ಮನಗಂಡ ಸರಕಾರ ಸರಕಾರಿ ಶಾಲೆಯಲ್ಲೂ ಆರಂಭದಿಂದಲೇ ಇಂಗ್ಲಿಷ್‌ ಶಿಕ್ಷಣ ಒದಗಿಸುವ ಇಂಗಿತ ವ್ಯಕ್ತಪಡಿಸಿ ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಯಿತು. ಆದರೆ ಅದಕ್ಕೆ ಪೂರಕವಾಗಿ ಪರಿಣಾಮಕಾರಿ ಯೋಜನೆಯನ್ನು ಸರಕಾರ ಕೈಗೊಂಡಿರಲಿಲ್ಲ. ಕಟ್ಟಡ ಸೌಕರ್ಯವಿರುವ ಶಾಲೆಗಳಲ್ಲಿ ಎಸ್‌ಡಿಎಂಸಿ, ಹಿರಿಯ ವಿದ್ಯಾರ್ಥಿಗಳು, ಊರ ದಾನಿಗಳ ನೆರವಿನಿಂದ ಅತಿಥಿ ಶಿಕ್ಷಕರ ನೇಮಕಗೊಳಿಸಿ ಹಲವೆಡೆ ಇಂಗ್ಲಿಷ್‌ ಶಿಕ್ಷಣ ನೀಡಲಾಗುತ್ತಿದೆ.

ವರದಿ : ನಳಿನಿ ಎಸ್.‌ ಸುವರ್ಣ





























































































































error: Content is protected !!
Scroll to Top