ಕಾರ್ಕಳ : ಜೀವನದಲ್ಲಿ ನಗು ಮತ್ತು ಪೌಷ್ಟಿಕ ಆಹಾರ ಪದ್ಧತಿ ಸರ್ವತೋಮುಖ ಆರೋಗ್ಯಕ್ಕೆ ಪೂರಕ ಎಂದು ತಹಶೀಲ್ದಾರ್ ಪ್ರತಿಭಾ ಆರ್. ಅಭಿಪ್ರಾಯಪಟ್ಟರು. ಅವರು ಸೆ. 29ರಂದು ವಿಶ್ವ ಹೃದಯ ದಿನಾಚರಣೆ ಅಂಗವಾಗಿ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಮತ್ತು ರೋಟರಾಕ್ಟ್ ಕ್ಲಬ್ ಶ್ರೀ ಭುವನೇಂದ್ರ ಕಾಲೇಜು ಹಾಗೂ ಡಾ.ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯ ಸಹಯೋಗದಲ್ಲಿ ನಡೆದ ಹೃದಯಕ್ಕಾಗಿ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅನಂತಶಯನ ವೃತ್ತದಿಂದ ನಡಿಗೆ ಪ್ರಾರಂಭವಾಗಿದ್ದು, ಲೆಕ್ಕ ಪರಿಶೋಧಕ ಕೆ. ಕಮಲಾಕ್ಷ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಡಿಗೆಯು ಕಾರ್ಕಳ ಮುಖ್ಯ ರಸ್ತೆಯಲ್ಲಿ ಸಾಗಿ ಡಾ.ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆಯಲ್ಲಿ ಸಂಪನ್ನಗೊಂಡಿತು. ಕಾಲೇಜು ವಿದ್ಯಾರ್ಥಿಗಳು, ವಿವಿಧ ಇಲಾಖಾ ಅಧಿಕಾರಿಗಳು, ಸಿಬ್ಬಂದಿ, ವಿವಿಧ ಸಂಘ ಸಂಸ್ಥೆಗಳು ಪದಾಧಿಕಾರಿಗಳು ಜಾಥಾದಲ್ಲಿ ಭಾಗವಹಿಸಿದ್ದರು. ಜಾಥಾದ ಬಳಿಕ ಕಾಲೇಜು ವಿದ್ಯಾರ್ಥಿಗಳಿಗೆ ಕಿರು ಪ್ರಹಸನದ ಸ್ಪರ್ಧೆ ಆಯೋಜಿಸಲಾಗಿತ್ತು. ನಂತರ ಟಿ.ಎಂ.ಎ.ಪೈ ಆಸ್ಪತ್ರೆಯ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಮಂಗಳೂರು ಕೆಎಂಸಿ ಖ್ಯಾತ ಹೃದ್ರೋಗ ತಜ್ನ ಡಾ. ಪದ್ಮನಾಭ ಕಾಮತ್ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ವಿಶ್ವ ಹೃದಯ ದಿನದ ಮಹತ್ವ ಮತ್ತು ಉತ್ತಮ ಹೃದಯ ಆರೋಗ್ಯಕ್ಕಾಗಿ ಪಾಲಿಸಬೇಕಾದ ಆಹಾರ ಕ್ರಮ ಹಾಗೂ ವ್ಯಾಯಾಮ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ರೋಟರಿ ಮಾಜಿ ಜಿಲ್ಲಾ ಗವರ್ನರ್ ಡಾ. ಭರತೇಶ್ ಆದಿರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ಸಂದೀಪ್ ಕುಡ್ವ, ಕೆ.ಎಂ.ಸಿ. ಮಂಗಳೂರಿನ ಹೃದ್ರೋಗ ತಜ್ಞ ಡಾ. ದಿತೇಶ್, ಡಾ.ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯ ಪ್ರಭಾರ ಮುಖ್ಯ ವೈದ್ಯಾಧಿಕಾರಿ ಡಾ. ಸಂಜಯ್, ರೋಟರಾಕ್ಟ್ ಕ್ಲಬ್ ಶ್ರೀ ಭುವನೇಂದ್ರ ಕಾಲೇಜು ಇದರ ಅಧ್ಯಕ್ಷೆ ಅಕ್ಷಿತಾ ಶೆಟ್ಟಿಗಾರ್ ಉಪಸ್ಥಿತರಿದ್ದರು. ಇದೇ ಸಂದರ್ಭ ಕಿರು ಪ್ರಹಸನ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಅಧ್ಯಕ್ಷ ಉಪೇಂದ್ರ ವಾಗ್ಲೆ ಸ್ವಾಗತಿಸಿದರು, ಕಾರ್ಯದರ್ಶಿ ಪ್ರಶಾಂತ್ ಜೈನ್ ವಂದಿಸಿದರು. ರಾಜೇಶ್ ಕುಂಟಾಡಿ ಮತ್ತು ಅನುಷಾ ಪ್ರಭು ಕಾರ್ಯಕ್ರಮ ನಿರೂಪಿಸಿದರು.






























































