ಕಾರ್ಕಳ : ಕೈ ಸಾಲ ಮರು ಪಾವತಿಯಾಗಿ ನೀಡಿರುವ 10 ಲಕ್ಷ ರೂ. ಮೊತ್ತದ ಚೆಕ್ನ್ನು ಬ್ಯಾಂಕಿಗೆ ನಗದೀಕರಣಕ್ಕಾಗಿ ಹಾಜರುಪಡಿಸಿದಾಗ ಚೆಕ್ ಅಮಾನ್ಯಗೊಂಡಿರುವುದಾಗಿ ಆರೋಪಿಸಿ ಬೆಳ್ತಂಗಡಿ ಹಿರಿಯ ಸಿವಿಲ್ ಜಡ್ಜ್ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಬೆಳ್ತಂಗಡಿಯ ಗುರುವಾಯನಕೆರೆಯ ಶಿವಾಜಿ ನಗರದ ವಡಿವೇಲು ಎಂಬವರು ಕಾರ್ಕಳದ ಕುಕ್ಕುಂದೂರು ಗ್ರಾಮದ ಅಯ್ಯಪ್ಪನಗರದ ಶ್ರೀನಿವಾಸ ಎಂಬವರ ವಿರುದ್ಧ ದಾಖಲಿಸಿದ್ದ ಚೆಕ್ ಬೌನ್ಸ್ ಕ್ರಿಮಿನಲ್ ಪ್ರಕರಣವನ್ನು ವಿಚಾರಣೆ ನಡೆಸಿರುವ ನ್ಯಾಯಾಧೀಶ ಮನು ಬಿ.ಕೆ. ಅವರು ಆರೋಪಿ ಶ್ರೀನಿವಾಸ ನಿರಪರಾಧಿ ಎಂಬುದಾಗಿ ತೀರ್ಪು ನೀಡಿರುತ್ತಾರೆ.
ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಶ್ರೀನಿವಾಸ ಅವರು ನಾನು ದೂರುದಾರರೊಂದಿಗೆ ಯಾವುದೇ ಹಣ ಕಾಸು ವ್ಯವಹಾರ ನಡೆಸಿರುವುದಿಲ್ಲ ಮತ್ತು ಆತನಿಂದ ಯಾವುದೇ ಸಾಲವನ್ನು ಪಡೆದಿಲ್ಲ ಹಾಗೂ ಸಾಲ ಮರು ಪಾವತಿಯ ಬಗ್ಗೆ ಯಾವುದೇ ಚೆಕ್ಕನ್ನು ನೀಡಿರುವುದಿಲ್ಲ ಎಂದಿದ್ದಾರೆ. ಅಲ್ಲದೆ ದೂರುದಾರರು ತನ್ನ ಸಹಿ ಇರುವ ಖಾಲಿ ಚೆಕ್ಕನ್ನು ಮೋಸದಿಂದ ದುರ್ಬಳಕೆ ಮಾಡಿ ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ. ದೂರುದಾರರು 10 ಲಕ್ಷ ರೂ. ಸಾಲ ನೀಡುವಷ್ಟರ ಮಟ್ಟಿಗಿನ ಆರ್ಥಿಕ ಸ್ಥಿತಿಯನ್ನು ಹೊಂದಿರುವುದಿಲ್ಲ ಎಂಬಿತ್ಯಾದಿ ವಿಚಾರಗಳನ್ನು ಶ್ರೀನಿವಾಸ್ ಅವರ ಪರ ಕಾರ್ಕಳದ ಹಿರಿಯ ನ್ಯಾಯವಾದಿ ಕೆ. ವಿಜೇಂದ್ರ ಕುಮಾರ್ ಅವರು ಮಂಡಿಸಿದ ವಾದವನ್ನು ಪುರಸ್ಕರಿಸಿದ ನ್ಯಾಯಾಲಯವು ಆರೋಪಿಯ ವಿರುದ್ಧದ ಪ್ರಕರಣವನ್ನು ವಜಾಗೊಳಿಸಿ ತೀರ್ಪು ನೀಡಿರುತ್ತದೆ.





































