ಕಾರ್ಕಳ : ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳಿಗೆ ಇಂಗ್ಲೀಷ್ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿ, ಎಳವೆಯಲ್ಲೇ ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ಸುಸಜ್ಜಿತ ಗ್ರಂಥಾಲಯ ನಿರ್ಮಿಸಿರುವುದು ಉತ್ತಮ ವಿಚಾರ ಎಂದು ಶಾಸಕ ವಿ. ಸುನಿಲ್ ಕುಮಾರ್ ಅಭಿಪ್ರಾಯಪಟ್ಟರು.
ಅವರು ಸೆ. 6ರಂದು ಇರ್ವತ್ತೂರು ಬಗಲ್ತಕಟ್ಟೆ ಸ. ಕಿ. ಪ್ರಾ. ಶಾಲೆಯಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿ ಕೊಠಡಿ ಮತ್ತು ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದರು.
ಗ್ರಾಮ ಪಂಚಾಯತ್ ಗೊಂದು ಸುಸಜ್ಜಿತವಾದ ಶಾಲೆ ನಿರ್ಮಾಣದ ಆಲೋಚನೆ ಅವಶ್ಯ. ಹಾಗಾದಲ್ಲಿ ಮಾತ್ರ ಸರಕಾರಿ ಶಾಲೆಗಳು ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ಬಗಲ್ತಕಟ್ಟೆಯ ಶಾಲೆಯ ಅಭಿವೃದ್ಧಿಯಲ್ಲಿ ಗ್ರಾಮಸ್ಥರ ಸಹಕಾರ ಶ್ಲಾಘನೀಯ ಎಂದರು.
ಶಾಲೆಯ ಸಾಧನೆಯಲ್ಲಿ ಶಿಕ್ಷಕರ ಪಾತ್ರ
ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಭಾಸ್ಕರ್ ಎಸ್. ಕೋಟ್ಯಾನ್ ಮಾತನಾಡಿ, ಶಾಲೆಯ ಸಾಧನೆಯಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದು. ಈ ನಿಟ್ಟಿನಲ್ಲಿ ಬಗಲ್ತಕಟ್ಟೆಯ ಮುಖ್ಯ ಶಿಕ್ಷಕರಾದ ನಾಗೇಶ್ ಮತ್ತು ಶಿಕ್ಷಕ ವೃಂದದವರ ಕಾರ್ಯವೈಖರಿ ಮಾದರಿ ಎಂದರು.

ಗ್ರಾ.ಪಂ. ಅಧ್ಯಕ್ಷ ಭರತ್ ಕುಮಾರ್ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆ ಅಭಿವೃದ್ಧಿಯಾದಾಗ ಮಾತ್ರ ಗ್ರಾಮ ಮಾದರಿಯೆನಿಸಲು ಸಾಧ್ಯ. ಸರಕಾರಿ ಶಾಲೆಯ ಅಭಿವೃದ್ಧಿಯಲ್ಲಿ ಶಿಕ್ಷಕರು ಮತ್ತು ಆಡಳಿತ ವ್ಯವಸ್ಥೆಯೊಂದಿಗೆ ಗ್ರಾಮಸ್ಥರ ಸಹಕಾರ ಅತ್ಯಗತ್ಯವಿದೆ ಎಂದರು.
ಪ್ರಾಜೆಕ್ಟರ್ ಕೊಡುಗೆ – ಪುಸ್ತಕ ಹಸ್ತಾಂತರ
ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಉಪನ್ಯಾಸಕಿ ಡಾ. ರಾಜಲಕ್ಷ್ಮೀ ಉದಯ ಕುಮಾರ್ ಅವರು 75 ಸಾ. ರೂ. ವೆಚ್ಚದಲ್ಲಿ ಶಾಲೆಗೆ ಪ್ರಾಜೆಕ್ಟರ್ ಅನ್ನು ಕೊಡುಗೆಯಾಗಿ ನೀಡಿರುತ್ತಾರೆ. ಓವರ್ ಸೀಸ್ ಬ್ಯಾಂಕ್ ವತಿಯಿಂದ ಶಾಲಾ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಹಸ್ತಾಂತರಿಸಲಾಯಿತು.
ಪಂಚಾಯತ್ ಉಪಾಧ್ಯಕ್ಷೆ ದೀಪಾ ಭಂಡಾರಿ, ಜಿ. ಪಂ. ಮಾಜಿ ಸದಸ್ಯ ಉದಯ ಎಸ್. ಕೋಟ್ಯಾನ್, ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಭಾಸ್ಕರ್ ಎಸ್. ಕೋಟ್ಯಾನ್, ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಅಸಿಸ್ಟೆಂಟ್ ಮ್ಯಾನೇಜರ್ ಲಕ್ಷ್ಮೀ, ಎಸ್. ಡಿ. ಎಂ.ಸಿ. ಅಧ್ಯಕ್ಷ ಉಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಾಲಾ ಮುಖ್ಯ ಶಿಕ್ಷಕ ನಾಗೇಶ್ ಸ್ವಾಗತಿಸಿದರು. ಸುಧೀರ್ ನಾಯಕ್ ಸಚ್ಚೇರಿಪೇಟೆ ಕಾರ್ಯಕ್ರಮ ನಿರೂಪಿಸಿ, ಎಸ್ಡಿಎಂಸಿ ಮಾಜಿ ಅಧ್ಯಕ್ಷ ಸುಧಾಕರ ಶೆಟ್ಟಿ ವಂದಿಸಿದರು.






































