ಕಾರ್ಕಳದಲ್ಲಿ ಹೆಚ್ಚುತ್ತಿದೆ ಆನ್‌ಲೈನ್‌ ವಂಚನೆ – ಬೆಚ್ಚಿಬೀಳಿಸುವಂತಿದೆ ಯಾಮಾರಿಸುವ ರೀತಿ

ಕಾರ್ಕಳ : ವ್ಯಾಟ್ಸಪ್ ಖಾತೆಗೆ ಬ್ಯಾಂಕ್ ಲೋಗೊ ಜೊತೆಗೆ ಸಂದೇಶ ಕಳುಹಿಸಿ ಖಾತೆಯಿಂದ ಹಣ ಲಪಟಾಯಿಸುವ ಜಾಲ ಇದೀಗ ಸಕ್ರಿಯವಾಗಿದ್ದು ಕಾರ್ಕಳದಲ್ಲೂ ಇಂತಹ ಅನೇಕ ಪ್ರಕರಣಗಳು ನಡೆಯುತ್ತಿದೆ. ಬಗೆ ಬಗೆಯ ರೀತಿಯಲ್ಲಿ ವಂಚಕರು ಆನ್‌ಲೈನ್‌ ನಲ್ಲಿ ಸಾರ್ವಜನಿಕರಿಗೆ ಪಂಗನಾಮ ಹಾಕುತ್ತಿದ್ದಾರೆ. ಕಳೆದ ಒಂದು ವರ್ಷದಲ್ಲಿ ಕಾರ್ಕಳ ಹೆಬ್ರಿ ಪರಿಸರದಲ್ಲೂ ಅನೇಕ ಪ್ರಕರಣಗಳು ದಾಖಲಾಗಿದೆ. ಹಣ ಕಳಕೊಂಡವರಲ್ಲಿ ಬ್ಯಾಂಕ್‌ ಅಧಿಕಾರಿಗಳು, ಇಂಜಿನೀಯರ್‌, ಶಿಕ್ಷಕರೂ ಸೇರಿದ್ದಾರೆ. ಅನೇಕರು ಸಮೀಪದ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದರೆ, ಸಣ್ಣ ಮೊತ್ತ ಕಳೆದುಕೊಂಡವರು ವಿಷಯ ಬಹಿರಂಗಪಡಿಸದೇ ಸುಮ್ಮನಾಗಿದ್ದಾರೆ. ಮತ್ತೆ ಕೆಲವರು ಸೈಬರ್ ಅಪರಾಧ ವರದಿ ಪೋರ್ಟಲ್ (1930) ಕರೆ ಮಾಡಿ ದೂರು ದಾಖಲಿಸಿರುತ್ತಾರೆ.

ಬ್ಯಾಂಕ್‌ನಿಂದ ಬಂದ ಸಂದೇಶ ಇರಬೇಕೆಂದು ನಂಬುತ್ತಿರುವ ಗ್ರಾಹಕರು ಪೂರ್ವಾಪರ ಆಲೋಚಿಸದೆ ಮೊಬೈಲ್‌ಗೆ ಬಂದ ಮೆಸೇಜ್ ಮೇಲೆ ಕ್ಲಿಕ್ ಮಾಡುತ್ತಾರೆ. ಕ್ಲಿಕ್‌ ಮಾಡಿದ ತಕ್ಷಣವೇ ಆಪ್ (apk. ಫೈಲ್) ಇನ್‌ಸ್ಟಾಲ್ ಆಗುವುದು. ಅಲ್ಲಿ ಮಾಹಿತಿ ಶೇರ್ ಮಾಡುತ್ತಿದ್ದಂತೆ ಗ್ರಾಹಕರ ಬ್ಯಾಂಕ್ ಖಾತೆಯ ನಿಯಂತ್ರಣ ಸಂಪೂರ್ಣ ವಂಚಕರು ಹಿಡಿತಕ್ಕೆ ಪಡೆದು ಮೊಬೈಲ್‌ಗೆ ಬರುವ ಬ್ಯಾಂಕ್‌ otp ಬಳಕೆ ಮಾಡಿ ಹಣವನ್ನು ಲಪಟಾಯಿಸುತ್ತಾರೆ. ಇದಾದ ತಕ್ಷಣವೇ ವ್ಯಾಟ್ಸಪ್ ಖಾತೆಯೇ ಡಿಲಿಟ್ ಆಗುತ್ತದೆ.

ಪಾರ್ಸೆಲ್‌ ಆಮೀಷ
ವಿದೇಶದಿಂದ ಪಾರ್ಸೆಲ್‌ ಬಂದಿದೆ ಎಂದು ಸಂದೇಶ ಕಳುಹಿಸಿ ಕಸ್ಟಮ್‌ ಅಧಿಕಾರಿ, ವಿಮಾನ ನಿಲ್ದಾಣ ಪ್ರಾಧಿಕಾರದವರು, ಐಟಿ, ಇಡಿ, ಸಿಬಿಐ ಅಧಿಕಾರಿಗಳೆಂದು ವಂಚಿಸುವ ಜಾಲವೊಂದು ಸಕ್ರಿಯವಾಗಿದೆ. ಸಾರ್ವಜನಿಕರಿಗೆ ಕರೆ ಮಾಡಿ ನಿಮ್ಮ ಪಾರ್ಸೆಲ್‌ನಲ್ಲಿ ಮಾದಕ ವಸ್ತುಗಳಿದ್ದು ಅವುಗಳನ್ನು ವಶಪಡಿಸಿಕೊಂಡಿರುವುದಾಗಿ ನಂಬಿಸಿ ಅನಂತರ ವಿಡಿಯೋ ಕರೆ ಮಾಡಿ ನಿಮ್ಮನ್ನು ಡಿಜಿಟಲ್‌ ಅರೆಸ್ಟ್‌ ಮಾಡಿರುವುದಾಗಿ ಬೆದರಿಸಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೀವು ದಂಡ ಪಾವತಿಸಬೇಕೆಂದು ವಿವಿಧ ಖಾತೆಗಳಿಗೆ ಲಕ್ಷಾಂತರ ರೂ. ವರ್ಗಾಯಿಸಿಕೊಳ್ಳಲಾಗುತ್ತಿದೆ.

ಆನ್‌ ಲೈನ್‌ ಸಾಲ
ಆನ್‌ ಲೈನ್‌ ಮುಖಾಂತರ ಸಾಲ ನೀಡುವುದಾಗಿ ನಂಬಿಸಿ ಸಾಲ ಪಡೆಯಲು ಮೊಬೈಲ್‌ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡುವಂತೆ ಸೂಚಿಸಲಾಗುತ್ತದೆ. ಡೌನ್‌ ಲೋಡ್‌ ಆದ ಅನಂತರ ಸಾಲ ನೀಡಿ, ಸಾಲ ಮರುಪಾವತಿ ಮಾಡಿದರೂ ಹೆಚ್ಚಿನ ಮೊತ್ತಕ್ಕಾಗಿ ಕಿರುಕುಳ ನೀಡಲಾಗುತ್ತಿದೆ. ಹೆಚ್ಚಿನ ಹಣ ನೀಡದೇ ಇದ್ದ ಸಂದರ್ಭ ಮೊಬೈಲ್‌ ನಲ್ಲಿ ಸೇವ್‌ ಆಗಿರುವ ಸಂಪರ್ಕ ಸಂಖ್ಯೆಗಳಿಗೆ ನೀವು ಹಣ ಪಾವತಿ ಮಾಡಲು ಬಾಕಿ ಇರುವುದಾಗಿ ಸಂದೇಶ ಕಳುಹಿಸುತ್ತಾರೆ. ಮೊಬೈಲ್‌ ನಲ್ಲಿನ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಬೆದರಿಕೆಯೊಡ್ಡುತ್ತಾರೆ.

ಐಟಂ ವಾಪಸ್‌ ನೀಡುವ ಸಂದರ್ಭ ಎಚ್ಚರಿಕೆ
ಆನ್‌ಲೈನ್‌ನಲ್ಲಿ ಖರೀದಿಸಿದ ವಸ್ತುಗಳು ಡ್ಯಾಮೇಜ್‌ ಆಗಿದ್ದಲ್ಲಿ ಆ ವಸ್ತುಗಳನ್ನು ಹಿಂತಿರುಗಿಸಿ ಹಣ ಮರು ಪಡೆಯುವುದು ಹೇಗೆ ಎನ್ನುವ ಬಗ್ಗೆ ಮಾಹಿತಿ ಪಡೆಯಲು ಸರ್ಚ್‌ ಮಾಡಿದಾಗ ದೊರೆಯುವ ಮೊಬೈಲ್‌ ಸಂಖ್ಯೆಗಳಿಗೆ ಕರೆ ಮಾಡಿದಾಗ ಅಲ್ಲೂ ಮೋಸ ಹೋಗುವ ಸಂಭವವಿದೆ. ಫಾರ್ಮಾಟ್‌ ಒಂದನ್ನು ಭರ್ತಿ ಮಾಡಿ ಎಂದು ವೈಯಕ್ತಿಕ ವಿವರಗಳು ಹಾಗೂ ಹಣ ಹಿಂಪಡೆಯುವ ಬಗ್ಗೆ ಬ್ಯಾಂಕ್‌ ಖಾತೆ ನಮೂದಿಸಿದ ತಕ್ಷಣ ಸಾರ್ವಜನಿಕರ ಹಣ ಸೈಬರ್‌ ವಂಚಕರ ಪಾಲಾಗುತ್ತಿದೆ.

ಪಾರ್ಟ್‌ ಟೈಮ್‌ ಉದ್ಯೋಗ ಮಾಡಲಿಚ್ಚುವವರಿಗೆ ಎನ್ನುವ ವ್ಯಾಟ್ಸಪ್ ಲಿಂಕ್‌ ಅನ್ನು ನಂಬಿಸಿ ವಂಚಕರು ನೀಡಿದ ಆನ್‌ ಲೈನ್‌ ಟಾಸ್ಕ್‌ ಗಳನ್ನು ಕಂಪ್ಲೀಟ್‌ ಮಾಡಿದ ತಕ್ಷಣ ಹಣ ನೀಡುವುದಾಗಿ ಹೇಳಿ ಮೊದಲು ಸಣ್ಣ ಮೊತ್ತದ ಹಣವನ್ನು ಪಾವತಿಸುತ್ತಾರೆ. ಆ ಬಳಿಕ ವಂಚಕರು ಹೆಚ್ಚಿನ ಹಣ ಬೇಕಾದಲ್ಲಿ ಹೂಡಿಕೆ ಮಾಡುವಂತೆ ತಿಳಿಸಿ, ಹಣವನ್ನು ವರ್ಗಾಯಿಸಿಕೊಂಡು ಮೋಸ ಮಾಡುತ್ತಾರೆ.

ಇತ್ತೀಚೆಗೆ ಕಾರ್ಕಳದಲ್ಲಿ ನಡೆದ ವಂಚನೆ ಪ್ರಕರಣಗಳು
ಅಜೆಕಾರು ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೋರ್ವರಿಗೆ ಮಿಶಾ ಎಂದು ಪರಿಚಯಿಸಿಕೊಂಡು ಇನ್ಸ್ಟಾಗ್ರಾಂ ಖಾತೆಯನ್ನು ಲೈಕ್ ಮತ್ತು ಶೇರ್ ಮಾಡಿದರೆ ಹಣವನ್ನು ಪಾವತಿಸುವುದಾಗಿ ನಂಬಿಸಿ, ಅನಂತರ ಬೇರೆ ಬೇರೆ ಟಾಸ್ಕ್‌ಗಳನ್ನು ನೀಡಿ ಹಣ ಹೂಡುವಂತೆ ಮಾಡಿ ಒಟ್ಟು 20 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.

ಕಾರ್ಕಳದ ಕಾಲೇಜೊಂದರ ವಿದ್ಯಾರ್ಥಿನಿಯೋರ್ವಳಿಗೆ Group on ಎಂಬ ಕಂಪನಿಯ ಹೆಸರು ಹೇಳಿಕೊಂಡು 500 ರೂ. ವೆಬ್‌ಸೈಟ್‌ಗೆ ಹಾಕಿದರೆ 2 ಸಾವಿರ ರೂ. ವಾಪಾಸ್ ಕೊಡುವುದಾಗಿ ನಂಬಿಸಿ ನುಡಿದಂತೆ ನಡೆದಿದ್ದು, 1.‌ 20 ಲಕ್ಷ ರೂ. ಮೊತ್ತವನ್ನು ಹಂತ ಹಂತವಾಗಿ ವರ್ಗಾವಣೆ ಮಾಡಿ ಮೋಸವೆಸಗಿದ್ದಾರೆ.

ಹೆಬ್ರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರ ಆಧಾರ್‌ ಕಾರ್ಡ್‌ ಫಿಂಗರ್‌ ಪ್ರಿಂಟ್‌ ಬಳಸಿಕೊಂಡು 1. 90 ಲಕ್ಷ ರೂ. ವಂಚಿಸಲಾಗಿದೆ.

ಹೆಬ್ರಿ ಮೂಲದ ಮಹಿಳೆಯೋರ್ವರಿಗೆ ಕರೆ ಮಾಡಿ, ಆಕೆಯ ಪತಿಯ ಪರಿಚಯದವರು ಎಂದು ಹೇಳಿ ಸಾಲವಾಗಿ ಪಡೆದ ಹಣವನ್ನು ವಾಪಸ್‌ ಹಾಕುವುದಾಗಿ ಹೇಳಿ 30 ಸಾವಿರ ರೂ. ವರ್ಗಾವಣೆ ಮಾಡಿರುತ್ತೇನೆ. ಅದರಲ್ಲಿ 18 ಸಾವಿರ ರೂ. ವಾಪಸ್‌ ಹಾಕುವಂತೆ ತಿಳಿಸಿ ನಂಬಿಕೆ ಬರುವಂತೆ ವರ್ತಿಸಿ 50 ಸಾವಿರ ರೂ. ಹಣವನ್ನು ದೋಚಿದ್ದಾರೆ.

ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಧಾರ್ಮಿಕ ಸಂಸ್ಥೆಯೊಂದರ ಧರ್ಮಗುರು OLX ವೆಬ್‌ಸೈಟ್‌ನಲ್ಲಿ ಬೈಕ್‌ ಖರೀದಿಸುವ ಬಗ್ಗೆ ಹುಡುಕಾಡುತ್ತಿರುವಾಗ ಅದರಲ್ಲಿ ಸಿಕ್ಕ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿರುತ್ತಾರೆ. ಆತ ಬೈಕ್‌ ಮಾರಾಟಕ್ಕಿರುವುದಾಗಿ ತಿಳಿಸಿದ್ದು ಅದಕ್ಕಾಗಿ ಧರ್ಮಗುರು 1 ಲಕ್ಷ 10 ಸಾವಿರ ರೂ. ಹಣ ಪಾವತಿಸಿ ವಂಚನೆಗೊಳಪಟ್ಟಿದ್ದಾರೆ.

ಹಣ ದುಪ್ಪಟ್ಟು ಮಾಡುವ ಆಮಿಷ ಒಡ್ಡಿ ಫೈನಾನ್ಸ್‌ ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವರಿಗೆ ವಂಚಿಸಲಾಗಿದೆ. 90 ಸಾವಿರ ಪಾವತಿಸಿದಲ್ಲಿ ಪ್ರತಿದಿನ 10,560/- ರಂತೆ 88 ದಿನಗಳು ಹಣವನ್ನು ವಾಪಾಸ್ ನೀಡುವುದಾಗಿ ಸೈಬರ್‌ ವಂಚಕರು ತಿಳಿಸಿ, ಹಾಗೆ ಮಾಡಿರುವ ಗ್ರಾಮಾಂತರ ಠಾಣೆ ವ್ಯಾಪ್ತಿಯ ವ್ಯಕ್ತಿಯೋರ್ವರು 90 ಸಾವಿರ ರೂ. ಕಳೆದುಕೊಂಡಿರುತ್ತಾರೆ.

ವಾಟ್ಸಾಪ್ ಮೂಲಕ ಆನ್‌ಲೈನ್‌ ಜಾಬ್ ಬಗ್ಗೆ ಸಂದೇಶ ರವಾನಿಸಿ ಯೂಟ್ಯೂಬ್ ಲಿಂಕ್‌ ಕ್ಲಿಕ್ ಮಾಡಿ ಸಬ್‌ ಸಬ್‌ ಸ್ಕ್ರೈಬ್‌ ಮಾಡುವಂತೆ ತಿಳಿಸಿ ಟಾಸ್ಕ್ ಕ್ರಿಯೇಟ್ ಮಾಡಿರುತ್ತಾರೆ. ಬಳಿಕ ಹಣ ಪಾವತಿಸಲು ಹೇಳಿ ಹಂತ ಹಂತವಾಗಿ ಒಟ್ಟು 6,50,000 ರೂ. ವಂಚಿಸಿರುತ್ತಾರೆ.

ನಿಟ್ಟೆ ಗ್ರಾಮದ ವ್ಯಕ್ತಿಯೋರ್ವರು ಎಸಿಸಿ ಸಿಮೆಂಟ್‌ ಡೀಲರ್‌ ಶಿಪ್‌ ಪಡೆಯುವ ಬಗ್ಗೆ ಗೂಗಲ್‌ ನಲ್ಲಿ ಹುಡುಕಾಡಿದ ಸಂದರ್ಭ ದೊರೆತ ನಂಬರ್‌ಗೆ ಕರೆ ಮಾಡಿ ಸಿಮೆಂಟ್ ವ್ಯವಹಾರದ ಬಗ್ಗೆ ಮಾತನಾಡಿರುತ್ತಾರೆ. ಬಳಿಕ ಡೀಲರ್ ಶಿಪ್ ಮತ್ತು ರಿಜಿಸ್ಟ್ರೇಷನ್ ಶುಲ್ಕವೆಂದು ರೂ. 1,25,000 NEFT ಮೂಲಕ ಆಪಾದಿತನ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಮುಂಬಯಿಯ ಅಂಧೇರಿ ಈಸ್ಟ್ ಬ್ರಾಂಚ್‌ನ ಖಾತೆಗೆ ಪಾವತಿಸಿರುತ್ತಾರೆ. ಅನಂತರ ಆತನು ತಿಳಿಸಿದಂತೆ 1000 ಚೀಲ ಸಿಮೆಂಟ್ ಆರ್ಡರ್ ಮಾಡಲು ರೂ. 3,36,000 ರೂ ಪಾವತಿಸಲು ತಿಳಿಸಿದಂತೆ ಹಣ ಪಾವತಿಸಲು ಪ್ರಯತ್ನಿಸಿದ್ದು ತಾಂತ್ರಿಕ ತೊಂದರೆಯಿಂದ ಹಣ ಪಾವತಿ ಆಗಿರುವುದಿಲ್ಲ. ಅಪಾದಿತನು ಎಸಿಸಿ ಸಿಮೆಂಟ್ ಡೀಲರ್ ಶಿಪ್ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ್ದಾನೆ.

ಗ್ಯಾಸ್‌ ಏಜೆನ್ಸಿ ಮಾಲಕರಿಗೆ ವ್ಯಕ್ತಿಯೋರ್ವ ಕರೆ ಮಾಡಿ ಕಾರ್ಕಳ ತಾಲೂಕಿನ ಮಾಳ ಕೂಡಬೆಟ್ಟು ಶಾಲೆಯಲ್ಲಿ ಆರ್ಮಿ ಕ್ಯಾಂಪ್ ನಡೆಯುತ್ತಿದೆ. ಈ ಕ್ಯಾಂಪ್‌ಗೆ 4 ಗ್ಯಾಸ್ ಸಿಲಿಂಡರ್ ಸರಬರಾಜು ಮಾಡುವಂತೆ ಕೇಳಿರುತ್ತಾನೆ. ಆಪಾದಿತನು ಮತ್ತೆ ಕರೆ ಮಾಡಿ ವೆರಿಫೈಗೆಂದು ಹಣ ಹಾಕಬೇಕು ಅನಂತರ ತಾವು ದುಪ್ಪಟ್ಟು ಹಣವನ್ನು ವಾಪಾಸ್ ಕೊಡುತ್ತೇವೆಂದು ತಿಳಿಸಿರುತ್ತಾನೆ. ಅದರಂತೆ ಗ್ಯಾಸ್‌ ಏಜೆನ್ಸಿ ಮಾಲಕರು ಫೋನ್ ಪೇ ಮೂಲಕ 39, 260 ರೂ. ಹಣ ಪಾವತಿಸಿರುತ್ತಾರೆ. ಹಂತ ಹಂತವಾಗಿ 4 ಬಾರಿ ಗೂಗಲ್ ಪೇ ಮತ್ತು ಫೋನ್ ಪೇ ಮೂಲಕ ಒಟ್ಟು 92,513 ರೂ. ವರ್ಗಾವಣೆ ಮಾಡಿರುತ್ತಾರೆ. ಆಪಾದಿತನು ಇಂಡಿಯನ್ ಆರ್ಮಿಯ ಆಫೀಸರ್ ಎಂದು ನಂಬಿಸಿ ವಂಚಿಸಿರುತ್ತಾನೆ.

ಕಾರ್ಕಳ ಕಸಬಾದ ಚೋಲ್ಪಾಡಿಯ ನಿವಾಸಿಯೊಬ್ಬರ ಗೂಗಲ್‌ ಪೇ appನಲ್ಲಿ ಸಮಸ್ಯೆ ಕಾಣಿಕೊಂಡಾಗ ಇಂಟರ್‌ನೆಟ್‌ ಮೂಲಕ ಇದನ್ನು ಗೂಗಲ್‌ ಸರ್ವಿಸ್‌ ನಂಬರ್‌ ಪಡೆಯಲು ಯತ್ನಿಸಿ ದೂರು ಸಲ್ಲಿಸಿದರು. ಇದಾದ ಕೆಲವೇ ಕ್ಷಣಗಳಲ್ಲಿ ಅವರಿಗೊಂದು ಕರೆ ಬಂತು. ತಾನು ಗೂಗಲ್‌ ಪೇಯಿಂದ ಮಾತನಾಡುತ್ತಿರುವುದಾಗಿ ಪರಿಚಯಿಸಿಕೊಂಡ ಆತ ಕೂಡಲೇ 38 ಸಾವಿರ ರೂ ಪಾವತಿಸಿ ಸಮಸ್ಯೆಯನ್ನು ಬಗೆಹರಿಸಿಕೊಡುತ್ತೇನೆ ಎಂದು ಹೇಳಿರುತ್ತಾನೆ. ಅದರಂತೆ ಹಣ ಪಾವತಿಸಿದ ಬಳಿಕ ಅವನ ಫೋನ್‌ ನಾಟ್‌ ರೀಚಬಲ್‌ ಆಗಿದೆ. ಆತ ಯಾರು, ಏನು, ಎತ್ತ ಎಂದು ವಿಚಾರಿಸದ ಕಾರಣ ಹಣ ಕಳೆದುಕೊಳ್ಳಬೇಕಾಯಿತು.

ರಜೆ ಕಳೆಯಲೆಂದು ಕುವೈಟ್‌ನಿಂದ ಊರಿಗೆ ಬಂದಿದ್ದ ಸಾಣೂರು ಗ್ರಾಮದ ಕುಂಟಲ್ಪಾಡಿಯ ವ್ಯಕ್ತಿಯೊಬ್ಬರು ಡೆಬಿಟ್‌ ಕಾರ್ಡ್‌ ನವೀಕರಣ ಮಾಡಲು ಬ್ಯಾಂಕ್‌ನ ವೆಬ್‌ಸೈಟಿನಲ್ಲಿ ಸಿಕ್ಕಿದ ಕಸ್ಟಮರ್‌ ಕೇರ್‌ ನಂಬರ್‌ಗೆ ಫೋನ್‌ ಮಾಡಿದ್ದಾರೆ. ಕರೆ ಸ್ವೀಕರಿಸಿದ ವ್ಯಕ್ತಿ ತನ್ನನ್ನು ಬ್ಯಾಂಕಿನ ಅಧಿಕಾರಿ ಎಂದು ಪರಿಚಯಿಸಿಕೊಂಡು ಗೂಗಲ್‌ ಪ್ಲೇ ಸ್ಟೋರ್‌ನಿಂದ ಕಸ್ಟಮರ್‌ app ಡೌನ್‌ಲೋಡ್‌ ಮಾಡಿ ಅದರಲ್ಲಿ ಕೇಳಿದ ಮಾಹಿತಿಗಳನ್ನು ನಮೂದಿಸಲು ಹೇಳಿದ್ದಾನೆ. ಆತ ಹೇಳಿದಂತೆ ಮಾಡಿದ ಕೂಡಲೇ ಬ್ಯಾಂಕ್‌ ಖಾತೆಯಿಂದ ಮೂರು ಹಂತಗಳಲ್ಲಿ 81,500 ರೂ. ಮೊತ್ತ ಕಡಿತವಾಗಿದೆ.

ಪಳ್ಳಿ ಗ್ರಾಮದ ವ್ಯಕ್ತಿಯೊಬ್ಬರ ಮೊಬೈಲ್‌ಗೆ ಯುಪಿಐಡಿ ಲಿಂಕ್‌ ಬಂದಿದೆ. ಇದನ್ನು ಓಪನ್‌ ಮಾಡಿದಾಗ ಅವರ ಖಾತೆಗೆ 1 ರೂ. ಜಮೆಯಾಗಿದೆ. ನಂತರ ಕ್ಷಣಾರ್ಧದಲ್ಲಿ ಅವರ ಖಾತೆಯಿಂದ 98,900 ರೂ. ಮಂಗಮಾಯವಾಗಿದೆ. ಈ ಪ್ರಕರಣದಲ್ಲಿ ಅವರು ಬರೀ ಅಪರಿಚಿತರು ಕಳುಹಿಸಿದ ಯುಪಿಐಡಿ ಲಿಂಕ್‌ ಮಾತ್ರ ಓಪನ್‌ ಮಾಡಿದ್ದರಷ್ಟೆ. ಬೇರೇನೂ ಮಾಡಿರಲಿಲ್ಲ ಎನ್ನುವುದು ಗಮನಾರ್ಹ.

ಬೆಂಗಳೂರಿನಲ್ಲಿ ಇನ್ಫೋಸಿಸ್‌ ಸಂಸ್ಥೆಯಲ್ಲಿ ಸಿಸ್ಟಮ್‌ ಇಂಜಿನಿಯರ್‌ ಆಗಿ ಉನ್ನತ ಉದ್ಯೋಗದಲ್ಲಿರುವ ಕಸಬಾ ಗ್ರಾಮದ ಯುವಕನೊಬ್ಬ ಊರಿಗೆ ಬಂದಿದ್ದ ವೇಳೆ ಅವರ ಮೊಬೈಲ್‌ಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಕುರಿತು ಪ್ಯಾಂತನ್ ವೆಂಚರ್ಸ್ ಎಂಬ ಸಂಸ್ಥೆ ಭಾರತದಲ್ಲಿ ಹೂಡಿಕೆ ಪ್ರಾರಂಭಿಸಿದೆ ಎಂಬುದಾಗಿ ವ್ಯಕ್ತಿಯೋರ್ವ ಸಂದೇಶ ಕಳುಹಿಸಿದ್ದಾನೆ. ಈ ಯುವಕ ಇದನ್ನು ನಂಬಿ ಲಿಂಕ್‌ಗೆ ಸೇರಿದ್ದಾರೆ. ಈ ಲಿಂಕ್‌ ಮೂಲಕ ಅವರು ವಾಟ್ಸಪ್‌ ಗ್ರೂಪ್‌ಗೆ ಸೇರಿದ್ದಾರೆ. ಇದರಲ್ಲಿ ಷೇರುಗಳ ಬಗ್ಗೆ ಮಾಹಿತಿ ಬರುತ್ತಿತ್ತು. ಅನಂತರ ಅವರು ಕಳುಹಿಸಿದ ಲಿಂಕ್ ಕ್ಲಿಕ್‌ ಮಾಡಿದಾಗ ಹಂತಹಂತವಾಗಿ ರೂ 7,35,827 ರೂ. ಕಳೆದುಕೊಂಡಿದ್ದಾರೆ. ನಂತರ ಆರೋಪಿಗಳು ಅವರನ್ನು ವಾಟ್ಸಪ್ ಗ್ರೂಪ್‌ನಿಂದ ಕಿತ್ತುಹಾಕಿದ್ದಾರೆ.

ನಲ್ಲೂರು ಗ್ರಾಮದ ಬಿರಾಲುಪೇಟೆಯಲ್ಲಿ ವಾಸವಾಗಿರುವ ಬ್ಯಾಂಕ್‌ ಉದ್ಯೋಗಿಯೊಬ್ಬರ ವಾಟ್ಸಪ್‌ಗೆ Stock Analyisis Technical Group 72 ಎಂಬ ಗ್ರೂಪಿನಿಂದ ಸಂದೇಶವೊಂದು ಬಂದಿದ್ದು, ಅದರಲ್ಲಿ Trading institutional Account ತೆರೆದು ಹಣ ಹೂಡಿಕೆ ಮಾಡುವಂತೆ ತಿಳಿಸಿದ್ದರು. ಅದರಂತೆ ಖಾತೆ ತೆರೆದ ಅವರು 12 ದಿನಗಳಲ್ಲಿ ತನ್ನ ಎರಡು ಬ್ಯಾಂಕ್‌ ಖಾತೆಗಳಿಂದ 5.77 ಲಕ್ಷ ರೂ. ಕಳೆದುಕೊಂಡಿದ್ದಾರೆ. ಅನಂತರ ಆ ವಾಟ್ಸಪ್‌ ಗ್ರೂಪ್‌ನಿಂದ ಯಾವ ಸಂದೇಶವೂ ಬರಲಿಲ್ಲ. ಬ್ಯಾಂಕ್‌ ಉದ್ಯೋಗಿಗೆ ಹಣವೂ ವಾಪಸ್ ಸಿಕ್ಕಿಲ್ಲ.

ವ್ಯಕ್ತಿಯೋರ್ವರು ಆನ್‌ಲೈನ್‌ನಲ್ಲಿ ಕ್ರೆಡಿಟ್‌ ಕಾರ್ಡ್‌ ತರಿಸಿಕೊಂಡ ಬಳಿಕ ಅದನ್ನು ಆಕ್ಟಿವೇಟ್‌ ಮಾಡದೆ ಹಾಗೇ ಇಟ್ಟುಕೊಂಡಿದ್ದರು. ಒಂದು ದಿನ ಅವರ ಮೊಬೈಲ್‌ಗೆ ಒಂದು ಕರೆ ಬಂದಿದ್ದು, ಕ್ರೆಡಿಟ್ ಕಾರ್ಡ್‌ ಇನ್ಶೂರೆನ್ಸ್‌ ಕ್ಯಾನ್ಸಲ್‌ ಮಾಡಿ ಕಾರ್ಡನ್ನು ಆಕ್ಟಿವೇಟ್‌ ಮಾಡಿ ಎಂದು ಹೇಳಿ ಮೊಬೈಲ್‌ಗೆ Indptrsin.in ಲಿಂಕ್ ಕಳುಹಿಸಿದ್ದಾರೆ. ಈ ಲಿಂಕನ್ನು ತೆರೆದಾಗ ಒಟಿಪಿ ಬಂದು ಕೆಲವೇ ನಿಮಿಷಗಳಲ್ಲಿ ಖಾತೆಯಿಂದ 1,67,657 ರೂ. ಕಡಿತವಾದ ಕುರಿತು ಮೆಸೇಜ್‌ ಬಂದಿದೆ. ಹೀಗೆ ಎಲ್ಲವನ್ನೂ ಆನ್‌ಲೈನ್‌ ಮೂಲಕ ನಿಭಾಯಿಸಲು ಹೋಗಿ ಹಣ ಕಳೆದುಕೊಂಡವರು ಹವಾಲ್ದಾರ್‌ಬೆಟ್ಟು ಹಾಡಿಮನೆಯ ನಿವಾಸಿ.

ಸಾಣೂರಿನ ಯುವಕನಿಗೆ ಅಪರಿಚಿತರು ಮೋರ್ಗನ್ ಇನ್‌ಸ್ಟಿಟ್ಯೂಷನ್‌ ಎಂಬ ಹೆಸರಿನಲ್ಲಿ ಜೆಪಿಎಮ್ ಪ್ರೋ app ಲಿಂಕ್‌ ಮತ್ತು ಎಲ್ಟಾಸ್ ಫುಡ್ ಆಪ್ ಲಿಂಕ್ ಕಳುಹಿಸಿ ಲಾಭಾಂಶ ಸಿಗಲು ಡಿಮ್ಯಾಟ್ ಅಕೌಂಟ್‌ ತೆರೆದು ಹೂಡಿಕೆ ಮಾಡುವಂತೆ ನಂಬಿಸಿದ್ದಾರೆ. ಇದನ್ನು ನಂಬಿ ಡಿಮ್ಯಾಟ್‌ ಖಾತೆ ತೆರೆದಾಗ ಅವರು ಕಳೆದುಕೊಂಡದ್ದು ಬರೋಬ್ಬರಿ 25,21,587 ರೂ.ವಂಚಕರು ಅವರ ಎಲ್ಲ ಖಾತೆಗಳಿಂದ ಹಂತಹಂತವಾಗಿ ಹಣ ವರ್ಗಾಯಿಸಿಕೊಂಡು ಪಂಗನಾಮ ಹಾಕಿದ್ದಾರೆ.

ಬೈಲೂರಿನ ಮಧ್ಯವಯಸ್ಕರೊಬ್ಬರ ಮೊಬೈಲ್‌ಗೆ ಷೇರು ಮಾರ್ಕೇಟ್‌ಗೆ ಸಂಬಂಧಪಟ್ಟ ವಾಟ್ಸಪ್ ಗ್ರೂಪ್ 907(SSGA) INVESTEORAS ALLANCE ಇದರಿಂದ ಮೇಸೆಜ್ ಬಂದಿದ್ದು, ದಿಯಾ ಎಂಬ ವ್ಯಕ್ತಿ ಈ ಗ್ರೂಪ್‌ನ ಅಡ್ಮಿನ್ ಎಂದು ತೋರಿಸುತ್ತಿತ್ತು. ಕೆಲ ದಿನಗಳ ಬಳಿಕ ಅವರಿಗೆ ಷೇರಿನಲ್ಲಿ ಹೂಡಿಕೆ ಮಾಡಲು ಸುರೇಶ ಕುಮಾರ ಎಂಬಾತನ ಖಾತೆಗೆ 10,87,755 ರೂ. ವರ್ಗಾವಣೆ ಮಾಡಲು ಸೂಚಿಸಿದ್ದಾರೆ. ಹಣ ವರ್ಗಾವಣೆಯಾದ ಬಳಿಕ ಅವರನ್ನು ಬ್ಲಾಕ್‌ ಮಾಡಿ, ವಾಟ್ಸಪ್‌ ಗ್ರೂಪ್‌ನಿಂದ ಕಿತ್ತುಹಾಕಿ ಮಂಗಮಾಯವಾಗಿದ್ದಾರೆ.

ಸಾಣೂರು ಗ್ರಾಮದ ಪುಲ್ಕೇರಿಯ ಮಹಿಳೆಯೊಬ್ಬರು ಫೇಸ್‌ಬುಕ್‌ನಲ್ಲಿ ಬಂದ ಪೋಸ್ಟ್‌ಗೆ ಕಮೆಂಟ್‌ ಮಾಡಿದಾಗ +447944516832 ನಂಬರ್‌ನಲ್ಲಿ ವಾಟ್ಸಾಪ್ ಚಾಟ್ ಮಾಡುವಂತೆ ತಿಳಿಸಿದ್ದಾರೆ. ಅದರಂತೆ ಮಹಿಳೆ ವಾಟ್ಸಾಪ್ ಚಾಟ್‌ ಗ್ರೂಪ್ Hapay Lioyd(HL)ಗೆ ಸೇರಿದ್ದಾರೆ. ಅವರಿಗೆ ಕಂಪನಿಯ ಕಂಟೈನರ್‌ ಖರೀದಿಸಲು 700 ರೂ. ಹಾಕಲು ಸೂಚಿಸಿದ್ದಾರೆ. ಮಹಿಳೆ ಹಣ ಹಾಕಿದ ಒಂದು ತಿಂಗಳ ಬಳಿಕ ಅವರ ಖಾತೆಗೆ 850 ರೂ. ವಾಪಸು ಬಂದಿದೆ. ಸ್ವಲ್ಪ ದಿನ ಬಿಟ್ಟು 5,00,069 ರೂ. ಹಾಕಿದರೆ ಹದಿನೈದು ದಿನದ ನಂತರ 12,00,069 ರೂ. ವಾಪಸು ನೀಡುವುದಾಗಿ ತಿಳಿಸಿದ್ದು, ಇಷ್ಟು ಹಣವನ್ನು ಅವರು ಹಾಕಿದ್ದಾರೆ. ನಂತರ ಮೋಸಗಾರರು ಸೂಚಿಸಿದಂತೆ ಗಂಡನ ಖಾತೆಯಲ್ಲಿದ್ದ 2.5 ಲಕ್ಷ ರೂ.ಯನ್ನು ಎರಡು ಹಂತದಲ್ಲಿ ಹಾಕಿದ್ದಾರೆ. ಆ ನಂತರ ವಂಚಕರ ಮೊಬೈಲ್‌ ನಂಬರ್‌ ಸ್ವಿಚ್‌ಆಫ್‌ ಆಗಿದೆ. ಮಹಿಳೆ ಜೀವಮಾನದಲ್ಲಿ ಉಳಿಸಿದ ಹಣವನ್ನೆಲ್ಲ ಕಳೆದುಕೊಂಡು ಪರಿತಪಿಸುವಂತಾಗಿದೆ.

ಕಸಬಾ ಗ್ರಾಮದ ಕಾಳಿಕಾಂಬಾ ದೇವಸ್ಥಾನದ ಬಳಿಯಿರುವ 72ರ ಹರೆಯದ ಮಹಿಳೆ ಯಾವ ಆಮಿಷಕ್ಕೆ ಬಲಿ ಬೀಳದಿದ್ದರೂ ಅವರ ವಿವಿಧ ಬ್ಯಾಂಕ್‌ ಖಾತೆಗಳಿಂದ ತನ್ನಿಂದ ತಾನೇ ಹಣ ಮಾಯವಾಗಿದೆ. ಎರಡು ಬ್ಯಾಂಕ್‌ ಖಾತೆಗಳಿಂದ ಒಟ್ಟು 3,00,001 ರೂ. ಲಪಟಾಯಿಸಿದ ಕುರಿತು ಅವರ ಮೊಬೈಲ್‌ಗೆ ಮೆಸೇಜ್‌ ಬಂದಿದೆ. ಬ್ಯಾಂಕಿನಲ್ಲಿ ಹೋಗಿ ವಿಚಾರಿಸಿದಾಗ ಅವರ ಖಾತೆಯಿಂದ ಹಣ ವರ್ಗಾವಣೆಯಾಗಿರುವುದು ದೃಢವಾಗಿದೆ.

ಆ್ಯಪ್ ಇನ್‌ಸ್ಟಾಲ್
ರಾಯಟ್‌ಗಳ ಸಹಾಯದಿಂದ ವಂಚಕರು (ಎಪಿಕೆ) ಫೈಲ್ ಅಥವಾ ಆ್ಯಪ್ ಸಿದ್ಧಪಡಿಸಿ ವ್ಯಾಟ್ಸಪ್‌ ಅಥವಾ ಮೊಬೈಲ್‌ಗೆ ಟೆಕ್ಸ್ ಸಂದೇಶದ ಮುಖಾಂತರ ಬ್ಯಾಂಕ್ ಖಾತೆಗಳಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್‌ಗಳಿಗೆ ಕಳಿಸುತ್ತಾರೆ. ಅದನ್ನು ತೆರೆಯುತ್ತಿದ್ದಂತೆ ಆಟೋಮೆಟಿಕ್ ಆಗಿ ಆ್ಯಪ್ ಇನ್‌ಸ್ಟಾಲ್ ಆಗಲಿದೆ. ಗ್ರಾಹಕರಿಗೆ ಬರುವ ಎಲ್ಲ ಮೆಸೇಜ್‌ಗಳು ವಂಚಕರ ಮೊಬೈಲ್‌ಗೆ ರವಾನೆಯಾಗುತ್ತವೆ. ಆ ಮೂಲಕ ಸುಲಭವಾಗಿ ಒಟಿಪಿ ಪಡೆದು ಸಾರ್ವಜನಿಕರ ಖಾತೆಗಳಿಗೆ ಮೊಬೈಲ್ ನೆಟ್ ಬ್ಯಾಂಕಿಂಗ್ ಸೇವೆ ಅಳವಡಿಸಿಕೊಂಡು ಕ್ಷಣ ಮಾತ್ರದಲ್ಲಿ ಹಣವನ್ನು ತಮ್ಮ ಖಾತೆಗಳಿಗೆ ವರ್ಗಾವಣೆ ಮಾಡಿಕೊಳ್ಳುತ್ತಿದ್ದಾರೆ.

ಸೈಬರ್ ವಂಚನೆ ಸೇರಿದಂತೆ ಸೈಬರ್ ಅಪರಾಧಕ್ಕೆ ಸಂಬಂಧಿಸಿದ ದೂರು ದಾಖಲಿಸಲು ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ (ಸಹಾಯ ಸಂಖ್ಯೆ -1930) ಅನ್ನು ಸಂಪರ್ಕಿಸಬಹುದು. ವಂಚನೆಗೊಳಗಾಗಿ ಗಂಟೆಯೊಳಗೆ ದೂರು ದಾಖಲಿಸಿದ್ದಲ್ಲಿ ಉತ್ತಮ. ಅಥವಾ ಸಮೀಪದ ಪೊಲೀಸ್ ಸ್ಟೇಷನ್‌ನಲ್ಲೂ, cybercrime.gov.in ಮೂಲಕವೂ ದೂರನ್ನು ಸಲ್ಲಿಸಬಹುದಾಗಿದೆ.







































error: Content is protected !!
Scroll to Top