ಬಿಜೆಪಿ-ಜೆಡಿಎಸ್‌ ಮೈಸೂರು ಚಲೋ ಪಾದಯಾತ್ರೆ ಪ್ರಾರಂಭ

ಬೆಂಗಳೂರು: ಮುಡಾ ಹಗರಣದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್‌ ಮೈಸೂರು ಚಲೋ ಪಾದಯಾತ್ರೆಗೆ ಇಂದು ಬೆಂಗಳೂರಿನಲ್ಲಿ ಚಾಲನೆ ನೀಡಲಾಯಿತು. ಬೆಂಗಳೂರಿನ ಕೆಂಗೇರಿ ಕೆಂಪಮ್ಮ ದೇವಸ್ಥಾನದ ಬಳಿ ನಗಾರಿ ಬಾರಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ಪಾದಯಾತ್ರೆಗೆ ಚಾಲನೆ ನೀಡಿದರು.

ಇಂದಿನಿಂದ ಆಗಸ್ಟ್ 10ರವರೆಗೆ ಏಳು ದಿನಗಳ ಕಾಲ ಒಟ್ಟು 124 ಕಿ.ಮೀವರೆಗೆ ಪಾದಯಾತ್ರೆ ಸಾಗಿ ಮುಡಾ ಕಚೇರಿಯಲ್ಲಿ ಕೊನೆಯಾಗಲಿದೆ. ಕೊನೆಯ ದಿನದಂದು ಮೈಸೂರಿನಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಥವಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಹಲವು ನಾಯಕರು ಭಾಗಿಯಾಗುವ ಸಾಧ್ಯತೆಯಿದೆ.

ಇದು ಜನ ವಿರೋಧಿ ಸರಕಾರವಾಗಿದ್ದು ಮುಡಾ, ವಾಲ್ಮೀಕಿ ಪ್ರಕರಣ ಬಯಲಿಗೆ ಬಂದಿದೆ. ಜನರ ಆಸ್ತಿಗಳನ್ನು ನುಂಗಿದ ಸರಕಾರದ ವಿರುದ್ಧ ನಾವು ಜನಾಂದೋಲನ ಮಾಡುತ್ತಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದರು. ದೇವೇಗೌಡರ ಕುಟುಂಬದಿಂದ ನೈಸ್ ಸುತ್ತಮುತ್ತ ಅತಿಕ್ರಮಣವಾಗಿದೆ ಎಂದು ಡಿ.ಕೆ.ಶಿವಕುಮಾರ್‌ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಅವರ ಕೈಯಲ್ಲೇ ಇದೆ. ನಾವು ಅಕ್ರಮವಾಗಿ ಆಸ್ತಿ ಮಾಡಿದರೆ ಸರ್ಕಾರ ವಶಪಡಿಸಿಕೊಳ್ಳಲಿ ಅಥವಾ ಮುಟ್ಟುಗೋಲು ಹಾಕಿಕೊಳ್ಳಲಿ. ನಾವು ನ್ಯಾಯಬದ್ಧವಾಗಿ ಬದುಕಿದ್ದೇವೆ, ಇವರ ಥರ ಬದುಕಿಲ್ಲ. ಶಿವಕುಮಾರ್‌ ಬಿಡದಿಯಲ್ಲಿ ಆರೋಪ ಮಾಡಿದ್ದಾರೆ. ಅವರಿಗೆ ನಾನು ಬಿಡದಿಯಲ್ಲೇ ಉತ್ತರ ನೀಡುತ್ತೇನೆ ಎಂದರು.

ಪಾದಯಾತ್ರೆಯ ಹಾದಿ

  • ಆ.3 – ಕೆಂಗೇರಿಯಲ್ಲಿ ಆರಂಭ- ಬಿಡದಿಯಲ್ಲಿ ವಾಸ್ತವ್ಯ
  • ಆ.4 – ಬಿಡದಿಯಲ್ಲಿ ಆರಂಭ- ಕೆಂಗಲ್‌ನಲ್ಲಿ ವಾಸ್ತವ್ಯ
  • ಆ.5 – ಕೆಂಗಲ್‌ನಲ್ಲಿ ಆರಂಭ-ನಿಡಘಟ್ಟದಲ್ಲಿ ವಾಸ್ತವ್ಯ
  • ಆ.6 – ನಿಡಘಟ್ಟದಲ್ಲಿ ಆರಂಭ-ಮಂಡ್ಯದಲ್ಲಿ ವಾಸ್ತವ್ಯ
  • ಆ.7 – ಮಂಡ್ಯದಲ್ಲಿ ಆರಂಭ-ತೂಬಿನಕೆರೆಯಲ್ಲಿ ವಾಸ್ತವ್ಯ
  • ಆ.8 – ತೂಬಿನಕೆರೆಯಲ್ಲಿ ಆರಂಭ-ಶ್ರೀರಂಗಪಟ್ಟಣದಲ್ಲಿ ವಾಸ್ತವ್ಯ
  • ಆ.9 – ಶ್ರೀರಂಗಪಟ್ಟಣದಲ್ಲಿ ಆರಂಭ-ಮೈಸೂರು ಹೊರವಲಯದಲ್ಲಿ ವಾಸ್ತವ್ಯ
  • ಆ.10 – ಮೈಸೂರಿನಲ್ಲಿ ಅಂತ್ಯ




























































































































error: Content is protected !!
Scroll to Top