ವಯನಾಡು ಭೂ ಕುಸಿತ : ಕರ್ನಾಟಕದ 6 ಮಂದಿ ಸಾವು

ಕಲ್ಪೇಟ್ಟ: ಕೇರಳದ ವಯನಾಡಿನಲ್ಲಿ ಸಂಭವಿಸಿದ ಘೋರ ಭೂ ಕುಸಿತದಲ್ಲಿ ಕರ್ನಾಟಕದ 6 ಮಂದಿ ಮೃತಪಟ್ಟಿದ್ದಾರೆ. ಮೃತರು ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಯವರು ಎಂದು ತಿಳಿದುಬಂದಿದೆ. 50 ವರ್ಷದ ರಾಜೇಂದ್ರ, 45 ವರ್ಷದ ರತ್ನಮ್ಮ, ವಯನಾಡಿನ ಮೇಪ್ಪಾಡಿಯಲ್ಲಿ ವಾಸವಿದ್ದ 62 ವರ್ಷದ ಪುಟ್ಟಸಿದ್ದ ಶೆಟ್ಟಿ ಮತ್ತು 50 ವರ್ಷದ ರಾಣಿ ಎಂಬವರು ಸಾವನಪ್ಪಿದ್ದಾರೆ. ಇವರೆಲ್ಲರೂ ಚಾಮರಾಜನಗರ ಜಿಲ್ಲೆಯವರು. ಮಂಡ್ಯದ ಎರಡೂವರೆ ವರ್ಷದ ನಿಹಾಲ್​, ಅಜ್ಜಿ ಲೀಲಾವತಿ (55) ಶವ ಕೂಡ ಪತ್ತೆಯಾಗಿದೆ. ಅನಿಲ್​​, ಅವರ ಪತ್ನಿ ಝಾನ್ಸಿ, ದೇವರಾಜ್ ಎಂಬವರಿಗೆ ಗಾಯಗಳಾಗಿವೆ. ಇವರು ಮಂಡ್ಯ ಜಿಲ್ಲೆ ಕೆ.ಆರ್​.ಪೇಟೆ ತಾಲೂಕಿನ ಕತ್ತರಘಟ್ಟ ನಿವಾಸಿಗಳಾಗಿದ್ದಾರೆ. ಚಾಮರಾಜನಗರದ ಜಿಲ್ಲೆಯ ತ್ರಯಂಬಕಪುರದ ಸ್ವಾಮಿಶೆಟ್ಟಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಚಾಮರಾಜನಗರದ ಒಂದು ಕುಟುಂಬ ನಾಪತ್ತೆ

ಮುಂಡಕೈನಲ್ಲಿ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಯ ಮತ್ತೊಂದು ಕುಟುಂಬ ನಾಪತ್ತೆಯಾಗಿದೆ ಎನ್ನಲಾಗಿದೆ. ಟೀ ಎಸ್ಟೇಟ್​ನಲ್ಲಿ ಕೆಲಸ ಮಾಡುತ್ತಿದ್ದ ಝಾನ್ಸಿರಾಣಿ ಮತ್ತು ಅವರ ಎರಡೂವರೆ ವರ್ಷದ ಪುತ್ರ ನಿಹಾಲ್ ಗುಡ್ಡಕುಸಿತದಲ್ಲಿ ಕಣ್ಮರೆಯಾಗಿದ್ದಾರೆ.

ಗೋಮಾತೆಯಿಂದಾಗಿ ಬದುಕುಳಿದ ಕನ್ನಡಿಗ

ಮೇಪ್ಪಾಡಿಯಲ್ಲಿ ಚಾಮರಾಜನಗರದ ವಿನೋದ್ ಎಂಬವರು ಪವಾಡಸದೃಶವಾಗಿ ಬದುಕುಳಿದಿದ್ದಾರೆ. ಭೂ ಕುಸಿತವಾಗುವಾಗ ಕೊಟ್ಟಿಗೆಯಲ್ಲಿದ್ದ ದನಕರುಗಳು ಅರಚುತ್ತಿದ್ದವು, ತಕ್ಷಣವೇ ಎಚ್ಚೆತ್ತ ವಿನೋದ್ ಮನೆ ಪಕ್ಕದಲ್ಲಿರುವ ಮತ್ತೊಂದು ಗುಡ್ಡವನ್ನೇರಿ ಪ್ರಾಣ ಉಳಿಸಿಕೊಂಡಿದ್ದಾರೆ. 2 ತಿಂಗಳ ಬಾಣಂತಿಯಾಗಿರುವ ವಿನೋದ್ ಪತ್ನಿ ಪ್ರಮೀದಾ ಎರಡು ದಿನಗಳ ಹಿಂದಷ್ಟೇ ಕೇರಳದಿಂದ ಚಾಮರಾಜನಗರಕ್ಕೆ ತೆರಳಿದ್ದರಿಂದ ಪಾರಾಗಿದ್ದಾರೆ.











































































error: Content is protected !!
Scroll to Top