ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಇಂದು ಶಾಸಕರ ನೇತೃತ್ವದಲ್ಲಿ ತುರ್ತು ಸಭೆ
ಕಾರ್ಕಳ : ಈ ಮಳೆಗಾಲದಲ್ಲಿ ಅಲ್ಲಲ್ಲಿ ಭೂ ಕುಸಿತಗಳು ಸಂಭವಿಸಿದ್ದು, ಭಾರಿ ಪ್ರಮಾಣದಲ್ಲಿ ನಾಶನಷ್ಟ ಉಂಟಾಗಿದೆ. ರಸ್ತೆಗೆ ಗುಡ್ಡೆಗಳು ಜರಿದು ಬಿದ್ದು ವಾಹನ ಸಂಚಾರ ವ್ಯತ್ಯಯವಾದ ಅನೇಕ ಘಟನೆಗಳು ಸಂಭವಿಸಿವೆ. ಉತ್ತರ ಕನ್ನಡ ಜಿಲ್ಲೆಯ ಶಿರೂರು, ನಿನ್ನೆ ಕೇರಳದ ವಯನಾಡಿನಲ್ಲಿ ಸಂಭವಿಸಿದ ವಿನಾಶಕಾರಿ ಭೂ ಕುಸಿತದ ಬಳಿಕ ಎಚ್ಚೆತ್ತುಕೊಂಡಿರುವ ರಾಜ್ಯ ಸರಕಾರ ಕಾರ್ಕಳ ಮತ್ತು ಹೆಬ್ರಿ ಸೇರಿ 31 ತಾಲೂಕುಗಳನ್ನು ಭೂ ಕುಸಿತ ಪೀಡಿತ ಎಂದು ಘೋಷಿಸಿ ಗರಿಷ್ಠ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದೆ.
ಕಾರ್ಕಳ ಮತ್ತು ಹೆಬ್ರಿ ಜೊತೆ ಉಡುಪಿ ಜಿಲ್ಲೆಯ ಬೈಂದೂರು, ಕುಂದಾಪುರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಕಡಬ, ಮಂಗಳೂರು, ಮೂಡುಬಿದಿರೆ, ಪುತ್ತೂರು ಮತ್ತು ಸುಳ್ಯ ತಾಲೂಕುಗಳು ಭೂ ಕುಸಿತ ಪೀಡಿತ ಜಿಲ್ಲೆಗಳು ಯಾದಿಯಲ್ಲಿವೆ. ಉಳಿದಂತೆ ಉತ್ತರ ಕನ್ನಡ, ಮಲೆನಾಡು ಭಾಗದ ಶಿವಮೊಗ್ಗ, ಕೊಡಗು, ಚಿಕ್ಕಮಗಳೂರಿನ ಕೆಲವು ತಾಲೂಕುಗಳನ್ನು ಭೂಕುಸಿತ ಪೀಡಿತ ಎಂದು ಹೆಸರಿಸಲಾಗಿದೆ.
ಸುನಿಲ್ ಕುಮಾರ್ ತುರ್ತು ಸಭೆ

ಕಳೆದೆರಡು ದಿನಗಳಿಂದ ವರುಣಾರ್ಭಟ ಹೆಚ್ಚಿದ್ದು, ಹಲವೆಡೆ ನೆರೆ, ಭೂ ಕುಸಿತ ಮತ್ತು ಮರಗಳು, ವಿದ್ಯುತ್ ಕಂಬಗಳು ಮುರಿದು ಬಿದ್ದಿರುವ ಹಿನ್ನೆಲೆಯಲ್ಲಿ ಶಾಸಕ ವಿ. ಸುನಿಲ್ ಕುಮಾರ್ ಇಂದು ಅಧಿಕಾರಿಗಳ ತುರ್ತು ಸಭೆ ಕರೆದಿದ್ದಾರೆ. ಸಂಭಾವ್ಯ ಅಪಾಯವನ್ನು ತಪ್ಪಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗುವುದು.







































