ರೈತರ ಮೇಲೆ ಸರಕಾರದ ಕುಮ್ಕಿ ಲೀಸ್‌ ಪ್ರಹಾರ : ಆತಂಕದಲ್ಲಿ ಅನ್ನದಾತ

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕುಮ್ಕಿ ಭೂಮಿಯನ್ನು ಹೊಂದಿರುವ ರೈತರಿಗೆ ಅದನ್ನು ಲೀಸ್‌ ಮೇಲೆ ನೀಡಲು ಮುಂದಾಗಿರುವ ಸರಕಾರದ ನಡೆ ಕೃಷಿಕರಲ್ಲಿ ಆತಂಕದ ಕಾರ್ಮೋಡ ಕವಿಯುವಂತೆ ಮಾಡಿದೆ. ಕದೀಂ ವರ್ಗ ಜಮೀನಿನಲ್ಲಿ ಕೃಷಿ ಮಾಡುವ ರೈತರಿಗೆ ನೀಡಿರುವ 100 ಮೀ.ವರೆಗಿನ ಕುಮ್ಕಿ ಭೂಮಿಯಲ್ಲಿ ಕೃಷಿಗೆ ಪೂರಕವಾದ ಮೇವು, ಸೊಪ್ಪುಗಳ ಬಳಕೆಗೆ ಅನುಮತಿಯಿದೆ. ಈಗ ಇದೇ ಭೂಮಿಯನ್ನು ಗುತ್ತಿಗೆ ನೀಡಲು ಸರ್ಕಾರ ನಿರ್ಧರಿಸಿ ಈ ಕುರಿತು ಸುತ್ತೋಲೆ ಹೊರಡಿಸಿದೆ. ಜಿಲ್ಲೆಗಳಲ್ಲಿ ಬಹುತೇಕ ರೈತರು ತಮ್ಮ ಕೃಷಿ ಜಮೀನಿನ ಅಕ್ಕಪಕ್ಕ ಕುಮ್ಕಿ ಹೊಂದಿರುವುದು ಸಾಮಾನ್ಯ. ಅನೇಕರು ಇದರಲ್ಲೇ ತೋಟ ಇನ್ನಿತರ ಕೃಷಿ ಕಾರ್ಯ ಮಾಡಿಕೊಂಡಿದ್ದಾರೆ. ಸರಕಾರದ ಸುತ್ತೋಲೆಯಿಂದ ಅವರ ಬದುಕು ಅತಂತ್ರವಾಗುವ ಸ್ಥಿತಿ ನಿರ್ಮಾಣವಾಗಿದೆ.

ಗ್ಯಾರಂಟಿ ಯೋಜನೆಗಳಿಂದ ಖಜಾನೆ ಖಾಲಿ ಮಾಡಿಕೊಂಡಿರುವ ಸರಕಾರ ಹೇಗಾದರೂ ಮಾಡಿ ಹಣ ಹೊಂದಿಸಿಕೊಳ್ಳುವ ಸಲುವಾಗಿ ರೈತರ ಮೇಲೆಯೇ ಮಾರಕ ಪ್ರಹಾರ ಮಾಡಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ಈ ನಡೆಯನ್ನು ತೀವ್ರವಾಗಿ ವಿರೋಧಿಸಿದ್ದು, ಯಾವ ಕಾರಣಕ್ಕೂ ಕುಮ್ಕಿ ಭೂಮಿ ಮೇಲೆ ಶುಲ್ಕ ವಿಧಿಸಿ ರೈತರನ್ನು ಶೋಷಣೆ ಮಾಡಲು ಬಿಡುವುದಿಲ್ಲ ಎಂದು ಹೇಳಿದೆ.

ಏನಿದು ಕುಮ್ಕಿ ಭೂಮಿ ಲೀಸ್‌ ಯೋಜನೆ?

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 4.30 ಲಕ್ಷ ಎಕರೆ ಮತ್ತು ಉಡುಪಿ ಜಿಲ್ಲೆಯಲ್ಲಿ ಸುಮಾರು 2.25 ಲಕ್ಷ ಎಕರೆ ಕುಮ್ಕಿ ಜಮೀನು ಇದೆ. ಒಂದು ಎಕರೆಗೆ 1 ಸಾವಿರ ರೂಪಾಯಿಯಂತೆ ರೈತರಿಂದ ವಸೂಲಿ ಮಾಡಿ ಗುತ್ತಿಗೆ ನೀಡಲು ಸರ್ಕಾರ ಉದ್ದೇಶಿಸಿದೆ.

ಕುಮ್ಕಿ ಭೂಮಿಯನ್ನು 30 ವರ್ಷಕ್ಕೆ ಲೀಸ್‌ ನೀಡುವ ಬಗ್ಗೆ ಸುತ್ತೋಲೆ ಹೊರಡಿಸಲಾಗಿದೆ. 30 ವರ್ಷಗಳ ಗುತ್ತಿಗೆ ಮೊತ್ತವನ್ನು ಒಂದೇ ಬಾರಿ ಪಾವತಿಸಲು ಸೂಚನೆ ನೀಡಲಾಗಿದೆ. ಈಗಾಗಲೇ ಕುಮ್ಕಿ ಭೂಮಿಯಲ್ಲಿ ಪ್ಲಾಂಟೇಶನ್ ಬೆಳೆಗಳನ್ನು ಬೆಳೆದಿರುವ ರೈತರು ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೃಷಿಕರಿಗೆ ಪಟ್ಟಾ ಜಾಗದ ಸುತ್ತ ನಾಲ್ಕೂವರೆ ಸಂಕೋಲೆ ಕುಮ್ಕಿ ಹಕ್ಕು ಇತ್ತು. ಸರಕಾರ ಕರ್ನಾಟಕ ಭೂ ಕಂದಾಯ ಅಧಿನಿಯಮ 1964ಕ್ಕೆ ತಿದ್ದುಪಡಿ ಮಾಡಿ ಕಲಂ 94(ಇ) ಸೇರಿಸಿದೆ. ಈ ಸೆಕ್ಷನ್ ಪ್ರಕಾರ ಪ್ಲಾಂಟೇಶನ್ ಭೂಮಿಯನ್ನು ಗುತ್ತಿಗೆ ನೀಡಲಾಗುತ್ತದೆ. 2005ಕ್ಕಿಂತ ಮೊದಲು ಪ್ಲಾಂಟೇಶನ್ ಬೆಳೆಗಳು ಆ ಜಮೀನಲ್ಲಿ ಇರಬೇಕೆಂಬ ಷರತ್ತು ವಿಧಿಸಲಾಗಿದೆ. ಒಂದು ಕುಟುಂಬಕ್ಕೆ ಗರಿಷ್ಠ 25 ಎಕರೆ ಗುತ್ತಿಗೆ ನೀಡಲಾಗುತ್ತದೆ ಎಂದು ಹೇಳಲಾಗಿದೆ. ಇದರಿಂದ ಕುಮ್ಕಿಭೂಮಿ ಹೊಂದಿರುವ ರೈತರು ಜಮೀನು ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ.

ಕುಮ್ಕಿ ಭೂಮಿಯನ್ನು‌ ಲೀಸ್​​ಗೆ ನೀಡುವ ಬಗ್ಗೆ ಸರ್ಕಾರ ಸುತ್ತೋಲೆ ಹೊರಡಿಸಿರುವ ಸುತ್ತೋಲೆ ವಿರುದ್ಧ ಬೆಳ್ತಂಗಡಿ ಬಿಜೆಪಿ‌ ಶಾಸಕ ಹರೀಶ್ ಪೂಂಜ ಕಿಡಿ ಕಾರಿದ್ದಾರೆ. ರೈತರಿಗೆ ಅನ್ಯಾಯ ಮಾಡುವ ಸುತ್ತೋಲೆಯನ್ನು ರಾಜ್ಯ ಸರ್ಕಾರ ಹೊರಡಿಸಿದೆ. ರೈತರ ಹಿತ ಕಾಯುವ ಕೆಲಸವನ್ನು ಬಿಜೆಪಿ ಮಾಡಲಿದೆ ಎಂದು ಅವರು ಹೇಳಿದ್ದಾರೆ.
ಕುಮ್ಕಿ ಭೂಮಿಯ ಗುತ್ತಿಗೆಗೆ ಇಂತಿಷ್ಟು ಹಣವೆಂದು ನಿಗದಿ ಮಾಡಲಾಗಿದೆ. ಇದರ ಮೂಲ ಉದ್ದೇಶ ಕಂದಾಯ ಹೆಚ್ಚು ಮಾಡಿಕೊಳ್ಳುವುದಾಗಿದೆ. 25 ಎಕರೆ ಹೊಂದಿರುವ ಕೃಷಿಕ ಅದನ್ನು ಲೀಸ್‌ಗೆ ಪಡೆಯಬೇಕಾದರೆ ಸುಮಾರು 24 ಲಕ್ಷ ರೂ. ಕಟ್ಟಿ ಅರ್ಜಿ ಹಾಕಬೇಕಾಗಿದೆ. ಕುಮ್ಕಿ ಜಮೀನಲ್ಲಿ ಕೃಷಿಕರು ಕೃಷಿ ಮಾಡಿಕೊಂಡು ಜೀವನ ಮಾಡಿಕೊಂಡು ಬಂದಿದ್ದಾರೆ. 1974ರ ಕಾಯ್ದೆ ಪ್ರಕಾರ ಲೀಸ್​​ಗೆ ಕೊಡಬಾರದು ಎಂದು ಇದೆ. ಇದು ಕಾನೂನುಬಾಹಿರ ಸುತ್ತೋಲೆ. ರೈತರ ಜೀವನದ ಮೇಲೆ ಸರ್ಕಾರ ಚೆಲ್ಲಾಟ ಆಡುತ್ತಿದೆ. ಲೀಸ್ ಎನ್ನುವ ಸುತ್ತೋಲೆಯನ್ನು ಸರ್ಕಾರ ವಾಪಾಸು ಪಡೆಯಬೇಕು. ಖಜಾನೆಗೆ ತುಂಬಿಸುವ ಷಡ್ಯಂತ್ರದ ಸುತ್ತೋಲೆ ವಾಪಾಸು ಪಡೆಯಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ 98 ಕೃಷಿಕರ ಬಳಿ‌‌ ಕುಮ್ಕಿ ಜಮೀನು ಇದೆ ಎಂದು ಅವರು ಹೇಳಿದ್ದಾರೆ.





























































































































error: Content is protected !!
Scroll to Top