ರಾತ್ರಿಯಿಂದೀಚೆಗೆ ಪ್ರವಾಹ ಮಟ್ಟ ಏರಿಕೆ ; ಹೋಟೆಲ್, ಅಂಗಡಿಗಳು ಜಲಾವೃತ
ಹೆಬ್ರಿ: ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹೆಬ್ರಿ ಭಾಗದಲ್ಲಿ ಪ್ರವಾಹದದ ಆತಂಕ ಉಂಟಾಗಿದೆ. ನಿನ್ನೆ ರಾತ್ರಿ ಸೀತಾನದಿಯಲ್ಲಿ ಪ್ರವಾಹ ಮಟ್ಟ ಏರಿಕೆಯಾಗಿ ರಸ್ತೆ ಮೇಲೆ ಹರಿದ ಪರಿಣಾಮವಾಗಿ ವಾಹನ ಸಂಚಾರ ಸ್ಥಗಿತಗೊಂಡಿದೆ.
ನದಿ ರಸ್ತೆ ಮೇಲೆ ಹರಿಯಲಾರಂಭಿಸುತ್ತಿದ್ದಂತೆ ವಾಹನ ಸವಾರರು ಎಚ್ಚರಿಕೆ ವಹಿಸಿದ್ದ ಪರಿಣಾಮ ಸಂಚಾರ ದಟ್ಟಣೆ ಕಡಿಮೆಯಾಗಿತ್ತು. ನೀರಿನ ಮಟ್ಟ ಹೆಚ್ಚುತ್ತಿದ್ದಂತೆ ವಾಹನ ಸಂಚಾರ ಪೂರ್ಣ ಸ್ಥಗಿತಗೊಳಿಸಲಾಯಿತು.
ನದಿಯ ಪ್ರವಾಹ ರಸ್ತೆ ಅಕ್ಕಪಕ್ಕದ ಹೋಟೆಲ್, ಅಂಗಡಿ ಮನೆಗಳಿಗೂ ನುಗ್ಗಿದೆ. ಸುತ್ತಮುತ್ತಲಿರುವ ತೋಟ ಮತ್ತು ಗದ್ದೆಗಳು ಜಲಾವೃತವಾಗಿವೆ.
ಮಂಗಳವಾರ ಬೆಳಗ್ಗಿನ ತನಕ ನದಿ ನೀರಿನ ಮಟ್ಟ ಕಡಿಮೆಯಾಗಿಲ್ಲ. ಹೀಗಾಗಿ ಸದ್ಯಕ್ಕೆ ಆಗುಂಬೆ ಸಂಪರ್ಕ ಕಡಿತಗೊಂಡಿದ್ದು, ವಾಹನಗಳಿಗೆ ಹೆಬ್ರಿಯಲ್ಲೇ ರಸ್ತೆ ಬದಲಿಸಿ ಮಾಂಡಿಮೂರುಕೈ, ಮಡಾಮಕ್ಕಿ, ಸೋಮೇಶ್ವರ ಮಾರ್ಗವಾಗಿ ಸಂಚರಿಸಲು ಸೂಚಿಸಲಾಗಿದೆ. ಇಂದು ಕೂಡ ಭಾರಿ ಮಳೆಯಾಗುತ್ತಿರುವ ಕಾರಣ ನದಿ ಪ್ರವಾಹ ಏರುತ್ತಲೇ ಇದೆ.






























































