ಕುಟುಂಬಕ್ಕೆ ಬೆದರಿಕೆ – ದೂರು ದಾಖಲು
ಹೆಬ್ರಿ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಲದ ಕಂತು ಕಟ್ಟಿಲ್ಲವೆಂದು ಮನೆಯೊಳಗೆ ಬಂಧಿಸಿ ಬೆಂಕಿ ಹಚ್ಚುವುದಾಗಿ ಕುಟುಂಬಕ್ಕೆ ಬೆದರಿಕೆ ಹಾಕಿರುವ ಘಟನೆ ಹೆಬ್ರಿಯಲ್ಲಿ ಸಂಭವಿಸಿದೆ.
ಐಸ್ ಕ್ರೀಂ ವ್ಯಾಪಾರಿ ಗಣೇಶ ಎಂಬವರು 13 ವರ್ಷಗಳಿಂದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಲ್ಲಿದ್ದು, ತಮ್ಮ ಶ್ರೀವಿನಾಯಕ ಗ್ರೂಪ್‌ನಲ್ಲಿ ಸಾಲ ಪಡೆದು ಪ್ರತಿ ವಾರ ಸಾಲದ ಕಂತು ಕಟ್ಟಿರುತ್ತಾರೆ. ಸುಮಾರು 8 ತಿಂಗಳ ಹಿಂದೆ 1,70,000/- ಸಾಲವಿದ್ದು ಆ ಸಾಲವನ್ನು ನವೀಕರಿಸಿ 3,00,000/- ರೂ. ಸಾಲವನ್ನು ಪಡೆದು ವಾರದ ಕಂತಿನ ಹಣವನ್ನು ಪಾವತಿಸಿಕೊಂಡು ಬಂದಿರುತ್ತಾರೆ. ಜೂ. 24 ರಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸೇವಾ ಪ್ರತಿನಿಧಿ ಸಂಗೀತಾ, ಗಣೇಶ್ ಅವರನ್ನು ಯೋಜನೆಯ ಕಚೇರಿಗೆ ಕರೆದು ಸಾಲದ ಕಂತಿನ ಹಣ ಕಟ್ಟುವಂತೆ ಹೇಳಿರುತ್ತಾರೆ. ಗಣೇಶ್ ಅವರು ನನಗೆ ಆರೋಗ್ಯದ ಸಮಸ್ಯೆಯಿದ್ದು, ಈ ವಾರ ಸಾಲದ ಕಂತು ಕಟ್ಟಲು ಹಣವಿಲ್ಲ ಆದ್ದರಿಂದ ನನ್ನ ಉಳಿತಾಯ ಖಾತೆಯಿಂದ ಸಾಲದ ಕಂತನ್ನು ಪಾವತಿಸಿಕೊಳ್ಳುವಂತೆ ಹೇಳಿರುತ್ತಾರೆ. ಆದರೆ ಇದಕ್ಕೆ ಒಪ್ಪದ ಸೇವಾ ಪ್ರತಿನಿಧಿ ಹಣ ಕಟ್ಟಲಿಲ್ಲ ಅಂದರೆ ಇಲ್ಲಿಯೇ ಕುಳಿತುಕೊ ಎಂದು ಹೇಳಿ ಗಣೇಶ್ ಅವರಿಗೆ ಒಳಗಡೆ ಕೂರಿಸಿ ಬಂಧಿಸಿರುತ್ತಾರೆ. ಜು. 1ರಂದು ಗಣೇಶ್ ಅವರು ಮನೆಯಲ್ಲಿ ಇಲ್ಲದ ಸಂದರ್ಭ ಅವರ ಪಕ್ಕದ ಮನೆಯ ಶ್ಯಾಮ ಎಂಬವವರ ಬಳಿ ಇವತ್ತು 5 ಜನ ಬಂದಿರುತ್ತೇವೆ ನಾಳೆ ಇದಕ್ಕಿಂತಲೂ ಹೆಚ್ಚಿನ ಜನ ಬರುತ್ತೇವೆ ಎಂದು ಹೇಳಿರುತ್ತಾರೆ. ಅಲ್ಲದೆ ಗಣೇಶ್ ಅವರ ಮಕ್ಕಳು ಸಂಜೆ ಶಾಲೆಯಿಂದ ಮನೆಗೆ ಬರುವಾಗ ಅವರನ್ನು ತಡೆದು ನಿಮ್ಮ ಅಪ್ಪನಿಗೆ ಹಣ ಕಟ್ಟಲು ಹೇಳಿ ಎಂದು ಹೆದರಿಸಿರುತ್ತಾರೆ. ಜು. 02 ರಂದು ಬೆಳಿಗ್ಗೆ ಗಣೇಶ್ ಅವರು ಮನೆಯಲ್ಲಿರುವಾಗ ಸದಾನಂದ, ಸಂತೋಷ, ರೇವತಿ ಮತ್ತು ಸಂಗೀತಾ ಎಂಬವರು ಅವರ ಮನೆಯ ಅಂಗಳಕ್ಕೆ ಬಂದು ನೀವು ಸಾಲ ಮರು ಪಾವತಿ ಮಾಡದಿದ್ದಲ್ಲಿ ನಿಮ್ಮ ಮನೆಯಲ್ಲಿ ಇರುವ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುವುದಲ್ಲದೆ ನಿಮ್ಮನ್ನು ಮನೆಯ ಒಳಗೆ ಹಾಕಿ ಬೆಂಕಿ ಹಚ್ಚುವುದಾಗಿ ಹೆದರಿಸಿದ್ದಾರೆ ಮತ್ತು ಗಣೇಶ್ ಅವರ ಹೆಂಡತಿಗೆ ಅವಾಚ್ಯ ಶಬ್ದದಿಂದ ಬೈಯ್ದು ನಿಂದಿಸಿರುತ್ತಾರೆ. ಗಣೇಶ್ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.























