ಮಳೆ ನೀರು ಹರಿದು ಹೋಗಲು ವ್ಯವಸ್ಥೆಯಿಲ್ಲದೆ ಸಮಸ್ಯೆ
ಅಯೋಧ್ಯೆ : ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಿದ ರಾಮ ಮಂದಿರ ಸೋರುತ್ತಿದೆ. ಮೊದಲ ಮಳೆಗೆ ಗರ್ಭಗುಡಿಯ ಮೇಲ್ಛಾವಣಿಯಿಂದ ನೀರು ತೊಟ್ಟಿಕ್ಕಲು ಶುರುವಾಗಿದೆ ಏಂದು ಮಂದಿರದ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ತಿಳಿಸಿದ್ದಾರೆ.
ದೇವಾಲಯದ ಕಾಮಗಾರಿ ಸಮರ್ಪಕವಾಗಿಲ್ಲ ಎಂದು ಆರೋಪಿಸಿರುವ ಸತ್ಯೇಂದ್ರ ದಾಸ್, ಮಧ್ಯರಾತ್ರಿ ತುಂತುರು ಮಳೆಯಾದ ಬಳಿಕ ಸೋರಿಕೆ ಕಂಡುಬಂದಿದೆ. ದೇವಾಲಯದ ಆವರಣದಿಂದ ಮಳೆನೀರು ಹರಿದು ಹೋಗಲು ಯಾವುದೇ ವ್ಯವಸ್ಥೆ ಮಾಡಿಲ್ಲ. ದೇವಾಲಯದ ಅಧಿಕಾರಿಗಳು ಲೋಪಗಳನ್ನು ಸರಿಪಡಿಸಬೇಕೆಂದು ಒತ್ತಾಯಿಸಿದ್ದಾರೆ.
ಮೇಲ್ಛಾವಣಿಯಿಂದ ನೀರು ಸೋರಿಕೆಯಾಗುತ್ತಿರುವ ಮಾಹಿತಿ ಸಿಕ್ಕಿದ ನಂತರ ದೇವಾಲಯದ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು ದೇವಾಲಯಕ್ಕೆ ಆಗಮಿಸಿ ಮೇಲ್ಛಾವಣಿಯನ್ನು ದುರಸ್ತಿ ಮಾಡಲು ಸೂಚನೆ ನೀಡಿದ್ದಾರೆ.
ಈ ವರ್ಷದ ಡಿಸೆಂಬರ್ ವೇಳೆಗೆ ಮಂದಿರ ನಿರ್ಮಾಣ ಪೂರ್ಣಗೊಳ್ಳಲಿದ್ದು, ಎಲ್ಲ ಸಮಸ್ಯೆಗಳನ್ನು ನಿವಾರಿಸಲಾಗುವುದು ಎಂದು ಹೇಳಿದ್ದಾರೆ.
ಮೊದಲ ಭಾರಿ ಮಳೆಯಲ್ಲಿ ದೇವಾಲಯದ ಗರ್ಭಗುಡಿಯ ಮೇಲ್ಛಾವಣಿಯಿಂದ ನೀರು ಸೋರಿಕೆಯಾಗಿದೆ. ರಾಮ ಲಲ್ಲಾನ ವಿಗ್ರಹದ ಮುಂದೆ ಅರ್ಚಕರು ಕುಳಿತುಕೊಳ್ಳುವ ಸ್ಥಳ ಮತ್ತು ವಿಐಪಿ ದರ್ಶನಕ್ಕೆ ಜನರು ಬರುವ ಸ್ಥಳದ ಮೇಲಿನ ಛಾವಣಿಯಿಂದ ಮಳೆ ನೀರು ಸೋರಿಕೆಯಾಗುತ್ತಿದೆ.
ಕಳೆದ ಜನವರಿ 22ರಂದು ರಾಮಮಂದಿರ ಲೋಕಾರ್ಪಣೆ ಮಾಡಲಾಗಿದೆ. ಅವಸರದಿಂದ ಕಾಮಗಾರಿ ಮುಗಿಸಿದ ಕಾರಣ ಅಲ್ಲಲ್ಲಿ ಲೋಪಗಳು ಉಳಿದುಕೊಂಡಿವೆ ಎನ್ನಲಾಗುತ್ತಿದೆ.






























































