ಇನ್ನಾ ಪರಿಸರದಲ್ಲಿ ವಿದ್ಯುತ್‌ ಸ್ಥಾವರ ಸ್ಥಾಪನೆಗೆ ವಿರೋಧ

ಉಡುಪಿ : ನಂದಿಕೂರು ಯುಪಿಸಿಎಲ್ (ಅದಾನಿ ಗ್ರೂಪ್) ವಿದ್ಯುತ್ ಸ್ಥಾವರದಿಂದ 400 ಕೆವಿ ವಿದ್ಯುತ್ ಲೈನ್ ಅಳವಡಿಕೆಗಾಗಿ ಜನರ ವಿರೋಧದ ನಡುವೆ ಕಾಮಗಾರಿ ನಡೆಯುತ್ತಿದೆ. ಇದನ್ನು ವಿರೋಧಿಸಿ ಜೂ. 12 ರಂದು ಬೆಳಗ್ಗೆ 10 ಗಂಟೆಗೆ ಇನ್ನಾ ಗ್ರಾ. ಪಂ. ಬಳಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ವಿದ್ಯುತ್ ಲೈನ್ ವಿರೋಧಿ ಹೋರಾಟ ಸಮಿತಿ ಕಾರ್ಯದರ್ಶಿ ಚಂದ್ರಹಾಸ್ ಶೆಟ್ಟಿ ತಿಳಿಸಿದರು.

ಸೋಮವಾರ ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಪ್ರತಿಭಟನೆಯ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅವರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಬೇಕು. ಜನರ ಪ್ರಶ್ನೆಗಳಿಗೆ ಉತ್ತರಿಸಬೇಕು. ಪಕ್ಷಾತೀತವಾಗಿ ನಡೆಯುವ ಪ್ರತಿಭಟನೆಯಲ್ಲಿ ಇನ್ನಾ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಭಾಗವಹಿಸಲಿದ್ದಾರೆ. ಯೋಜನೆ ಬಗ್ಗೆ ಈಗಾಗಲೇ ಅನೇಕ ಬಾರಿ ಸರಕಾರ, ಜಿಲ್ಲಾಧಿಕಾರಿ, ಜಿಲ್ಲೆಯ ಶಾಸಕರು, ಉಸ್ತುವಾರಿ ಸಚಿವರಿಗೆ ಮನವಿ ನೀಡಲಾಗಿದೆ. ಹಕ್ಕೊತ್ತಾಯ ಪ್ರತಿಭಟನೆಗಳನ್ನು ಕೂಡ ಮಾಡಲಾಗಿದೆ. ಆದರೂ, ಇವೆಲ್ಲವನ್ನು ಧಿಕ್ಕರಿಸಿ ಯೋಜನೆಯ ಗುತ್ತಿಗೆ ಪಡೆದುಕೊಂಡಿರುವ ಸ್ಟೆರ್ ಲೈಟ್ ಕಂಪೆನಿ ಜಿಲ್ಲಾಧಿಕಾರಿಯವರ ಆದೇಶವಿದೆ ಎಂದು ಹೇಳಿ ಭೂ ಮಾಲಕರಿಗೆ ಯಾವುದೇ ಪೂರ್ವ ಮಾಹಿತಿ ಅಥವಾ ನೋಟಿಸ್ ನೀಡದೇ ಕಾಮಗಾರಿಗೆ ಮುಂದಾಗಿದೆ ಎಂದು ಚಂದ್ರಹಾಸ್‌ ಶೆಟ್ಟಿ ತಿಳಿಸಿದರು.

ಕಾರ್ಕಳ ತಹಶಿಲ್ದಾರ್ ಉಪಸ್ಥಿತಿಯಲ್ಲಿ ಪೊಲೀಸ್ ಪಡೆಯ ಸಹಕಾರದಲ್ಲಿ ಏಕಾಏಕಿ ಜೆಸಿಬಿ ತಂದು ಜನರ ಪ್ರತಿರೋಧವನ್ನು ಮನ್ನಿಸದೆ ಫಲವತ್ತಾದ ಗದ್ದೆಗಳ ನಡುವೆಯೇ ಕಾಮಗಾರಿ ನಡೆಸಲಾಗುತ್ತಿದೆ ಎಂದು‌ ಚಂದ್ರಹಾಸ್‌ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಕೃಷಿಯನ್ನು ನಂಬಿಕೊಂಡಿರುವ ರೈತರು ತಮ್ಮ ಫಲವತ್ತಾದ ಕೃಷಿ ಭೂಮಿ ಕಳೆದುಕೊಳ್ಳುವ ಅಪಾಯ ಬಂದೊದಗಿದೆ. ಹಾಗಾಗಿ ಟವರ್ ಲೈನ್ ನಿರ್ಮಾಣ ಯೋಜನೆಯನ್ನು ಕೈ ಬಿಟ್ಟು ಪರ್ಯಾಯ ಯೋಜನೆ ಮೂಲಕ ವಿದ್ಯುತ್ ಸರಬರಾಜು ಮಾಡಲು ಸಂಬಂಧಪಟ್ಟವರು ಮುಂದಾಗಬೇಕು ಎಂದವರು ಆಗ್ರಹಿಸಿದರು.

ಸಮಿತಿ ಅಧ್ಯಕ್ಷ ಅಮರನಾಥ್ ಶೆಟ್ಟಿ, ಜಿ. ಪಂ. ಮಾಜಿ ಸದಸ್ಯೆ ರೇಷ್ಮಾ ಉದಯ್ ಶೆಟ್ಟಿ, ಗ್ರಾ. ಪಂ. ಸದಸ್ಯ ದೀಪಕ್ ಕೋಟ್ಯಾನ್, ಸಮಿತಿಯ ಸದಸ್ಯರಾದ ದಿನೇಶ್ ಕೋಟ್ಯಾನ್, ಪ್ರವೀಣ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.









































































































error: Content is protected !!
Scroll to Top