ಉಡುಪಿ : ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಹಾಗೂ ಉತ್ತಮ ಅಂಕಗಳಿಸುವಲ್ಲಿ ಉಪನ್ಯಾಸಕರು ಪೂರಕ ಶಕ್ತಿಯಾಗಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶ್ರೀ ಮಾರುತಿರವರು ತಿಳಿಸಿದರು.
ಅವರು ಉಡುಪಿ ಜಿಲ್ಲಾ ಗಣಕ ವಿಜ್ಞಾನ ಉಪನ್ಯಾಸಕರ ಸಂಘದ ವತಿಯಿಂದ ಜೂ. 5ರಂದು ಬಂಟಕಲ್‌ನಲ್ಲಿರುವ ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಒಂದು ದಿನದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ಪ್ರಥಮ ಪಿಯುಸಿ ಗಣಕ ವಿಜ್ಞಾನ ಪಠ್ಯಕ್ರಮ ಬದಲಾವಣೆಯಾದಾಗ ಮೊದಲ ಹಂತವೇ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ವಿಷಯ ಮನದಟ್ಟು ಮಾಡಲು ಸಮರ್ಥರಾಗುವುದು. ಈ ನಿಟ್ಟಿನಲ್ಲಿ ತಮ್ಮ ವೃತ್ತಿಯಲ್ಲಿ ಇನ್ನೂ ಪರಿಷ್ಕೃತಗೊಳ್ಳಬೇಕು ಎಂದರು.
ಉಡುಪಿ ಜಿಲ್ಲಾ ಗಣಕವಿಜ್ಞಾನ ಉಪನ್ಯಾಸಕರಿಗೆ ಪೈಥಾನ್ ಪ್ರೋಗ್ರಾಮಿಂಗ್ ಕುರಿತು ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಕವಿಜ್ಞಾನ ವಿಭಾಗದ ಉಪನ್ಯಾಸಕರಾದ ರಂಜನ್, ಗುರುಪ್ರಸಾದ್ ಹಾಗೂ ಯಶಸ್ವಿನಿ ಕಾರ್ಯಗಾರ ನಡೆಸಿದರು.
ಆನಂದ ತೀರ್ಥ ಪ.ಪೂ. ಕಾಲೇಜಿನ ಉಪಪ್ರಾಂಶುಪಾಲೆ ಕಮಲಾಕ್ಷಿ ಪ್ರಕಾಶ್ ಮಾತನಾಡಿ, ಉಪನ್ಯಾಸಕರು ಪಠ್ಯಕ್ರಮ ಬದಲಾವಣೆಗೆ ಸೂಕ್ತವಾಗಿ ಹೊಂದಿಕೊಂಡು ವಿದ್ಯಾರ್ಥಿಗಳಿಗೆ ಪೂರ್ಣಪ್ರಮಾಣದ ಜ್ಞಾನ ಒದಗಿಸುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲ ಡಾ. ತಿರುಮಲೇಶ್ವರ ಭಟ್ ಮಾತನಾಡಿ, ನಮ್ಮ ದೇಶ ಗಣಕೀಕೃತ ದೇಶವಾಗುವಲ್ಲಿ ಗಣಕ ವಿಜ್ಞಾನ ಉಪನ್ಯಾಸಕರ ಪಾತ್ರ ಮಹತ್ತರವಾದುದು ಎಂದರು.
ನೂತನ ಪದಾಧಿಕಾರಿಗಳ ನೇಮಕ
ಇದೇ ಸಂದರ್ಭ ಸಂಘದ ನೂತನ ಅಧ್ಯಕ್ಷರನ್ನಾಗಿ ಕಾರ್ಕಳ ಕ್ರಿಯೇಟಿವ್ ಪ.ಪೂ. ಕಾಲೇಜಿನ ಗಣಕ ವಿಜ್ಞಾನ ಉಪನ್ಯಾಸಕ ಜ್ಞಾನೇಶ್ ಕೋಟ್ಯಾನ್ ಹಾಗೂ ಕಾರ್ಯದರ್ಶಿಯಾಗಿ ಉಡುಪಿ ವಿದ್ಯೋದಯ ಪ.ಪೂ ಕಾಲೇಜಿನ ಶಕುಂತಳ ರಾಜೇಶ್ ಮತ್ತು ಖಜಾಂಚಿಯಾಗಿ ಕುಂದಾಪುರ ಸೆಂಟ್ ಮೇರಿಸ್ ಕಾಂಪೋಸಿಟ್ ಪ.ಪೂ. ಕಾಲೇಜಿನ ಬಿನು ಜಯಚಂದ್ರ ಪಾಲನ್ ಅವರನ್ನು ನೇಮಕ ಮಾಡಲಾಯಿತು.
ನಿಕಟಪೂರ್ವ ಅಧ್ಯಕ್ಷ ರಾಮ ನಾಯ್ಕ ಸ್ವಾಗತಿಸಿ, ಗಾಯತ್ರಿ ನಿರೂಪಿಸಿದರು. ದಿವ್ಯ ವಂದಿಸಿದರು.
































