ಕಾನೂನು ಕಣಜ : ನ್ಯಾಯಾಧೀಶರ ಮತ್ತು ಲೋಕ ನೌಕರರ (ಸರಕಾರಿ ನೌಕರ) ವಿರುದ್ಧ ಕ್ರಿಮಿನಲ್ ಮೊಕದ್ದಮೆ ?

ಯಾವುದೇ ಸಂದರ್ಭದಲ್ಲಿ ನ್ಯಾಯಾಧೀಶರು ಅಥವಾ ಲೋಕ ನೌಕರರು ಅಂದರೆ ಕೇಂದ್ರ ಸರಕಾರದ ಅಥವಾ ರಾಜ್ಯ ಸರಕಾರದ ಸಾರ್ವಜನಿಕ ನೌಕರರು ಕಾನೂನಿನ ಪ್ರಕಾರ ಶಿಕ್ಷಾರ್ಹವಾದ ಅಪರಾದವನ್ನು ನಡೆಸಿದ ಸಂದರ್ಭದಲ್ಲಿ ಸರಕಾರದ ಮಂಜೂರಾತಿ ಅಂದರೆ ಅನುಮತಿಯ ಆದೇಶ ಇಲ್ಲದೇ ನೇರವಾಗಿ ಕಾನೂನು
ಅಭಿಯೋಜನಾ ಕ್ರಮವನ್ನು ಕೈಗೊಳ್ಳಲು ಆಗುವುದಿಲ್ಲ. ಕಾರಣ ಕ್ರಿಮಿನಲ್ ಪ್ರೊಸಿಜರ್ ಕೋಡ್ (ದಂಡ ಪ್ರಕ್ರಿಯಾ ಸಂಹಿತೆ) 1973 ರ ಕಲಂ 197 ರ ಪ್ರಕಾರ ಅವರ ವಿರುದ್ಧ ಪ್ರಕರಣವನ್ನು ದಾಖಲಿಸುವ ಪೂರ್ವ ಸರಕಾರದ ವಿಶೇಷ ಅನುಮತಿ ಪಡೆಯಬೇಕಾಗುತ್ತದೆ. ಯಾವುದೇ ನ್ಯಾಯಾಧೀಶರು ಅಥವಾ ಸರಕಾರದ ಸಾರ್ವಜನಿಕ ನೌಕರರು ತಮ್ಮ ಕರ್ತವ್ಯಗಳನ್ನು ಆತ್ಮವಿಶ್ವಾಸದಿಂದ ನಿರ್ವಹಿಸಲು ಅವರಿಗೆ ನೈತಿಕ ಬಲವನ್ನು ನೀಡಬೇಕೆನ್ನುವುದು ಹಾಗೂ ಅನಾವಶ್ಯಕವಾಗಿ ಅಂತಹ ನ್ಯಾಯಾಧೀಶರು ಮತ್ತು ಸರಕಾರದ ಸಾರ್ವಜನಿಕ ನೌಕರರ ವಿರುದ್ಧ ಸುಳ್ಳು ಆರೋಪ ಅಥವಾ ಆಪಾದನೆಗಳನ್ನು ಮಾಡುವುದನ್ನು ತಡೆಯುವುದು ಈ ಕಲಂ ಅಂದರೆ ಪ್ರಕರಣದ ಮುಖ್ಯ ಉದ್ದೇಶವಾಗಿರುತ್ತದೆ. ಹೀಗಾಗಿ ನ್ಯಾಯಾಧೀಶರು ಮತ್ತು ಲೋಕ ನೌಕರರು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವ ಸಂದರ್ಭದಲ್ಲಿ ಅನ್ಯಾಯಕ್ಕೊಳಗಾದ ವ್ಯಕ್ತಿಯು ಅಂತಹ ಅಧಿಕಾರಿಗಳ ವಿರುದ್ಧ ವೈಯಕ್ತಿಕ ನೆಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಾದರೆ ಸರಕಾರದ ಪೂರ್ವಾನುಮತಿ ಅಗತ್ಯವಿರುತ್ತದೆ. ನ್ಯಾಯಾಧೀಶರು ಅಥವಾ ಸಾರ್ವಜನಿಕ
ಅಧಿಕಾರಿಗಳು ಕೇಂದ್ರ ಸರಕಾರದ ನೌಕರರಾಗಿದ್ದಲ್ಲಿ ಪೂರ್ವಾನುಮತಿಯನ್ನು ಕೇಂದ್ರ ಸರಕಾರದಿಂದಲೂ ಹಾಗೂ ರಾಜ್ಯ ಸರಕಾರದ ನೌಕರರಾಗಿದ್ದಲ್ಲಿ ಪೂರ್ವಾನುಮತಿಯನ್ನು ರಾಜ್ಯ ಸರಕಾರದಿಂದಲೂ ಕ್ರಮ ಜರುಗಿಸಲು ಇಚ್ಛಿಸುವ ವ್ಯಕ್ತಿಯು ಪಡೆಯಬೇಕಾಗುತ್ತದೆ. ಈ ರೀತಿಯಾಗಿ ಪ್ರಕರಣವನ್ನು ಜರುಗಿಸಲು ಅನುಮತಿಯನ್ನು ಕೋರಿ ಅರ್ಜಿಸಲ್ಲಿಸಿದ ಸಂದರ್ಭದಲ್ಲಿ ಅನುಮತಿಯನ್ನು ನೀಡುವುದಕ್ಕಿಂತ ಮುಂಚೆ ನ್ಯಾಯಾಧೀಶರ ಅಥವಾ ಸರಕಾರದ ಸಾರ್ವಜನಿಕ ನೌಕರರ ವಿರುದ್ಧ ಮಾಡಲಾದ ಆಪಾದನೆಗಳಲ್ಲಿ ಮೇಲ್ನೋಟಕ್ಕೆ ಏನಾದರೂ ಸತ್ಯಾಂಶ ಕಂಡು ಬರುವುದೇ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕಾಗುತ್ತದೆ. ಮೇಲ್ಕಾಣಿಸಿದ ಕಾನೂನು ಭಾರತ ಒಕ್ಕೂಟದ ಸಶಸ್ತ್ರ ದಳದ ಸದಸ್ಯರಿಗೂ ಅನ್ವಯವಾಗುತ್ತದೆ. ಸಶಸ್ತ್ರ ದಳ ಎಂದರೆ ಭಾರತೀಯ ಸೇನಾ ಪಡೆ, ಕೇಂದ್ರದ ಸೇನಾ ಪಡೆ ಮತ್ತು ಕೇಂದ್ರದ ಮೀಸಲು ಪೊಲೀಸ್ ಪಡೆ ಸಹ ಸೇರಿರುತ್ತದೆ. ಆದರೆ ಒಬ್ಬ ನ್ಯಾಯಾಧೀಶರಾಗಿ ಅಥವಾ ಸರಕಾರದ ಸಾರ್ವಜನಿಕ ನೌಕರರಾಗಿದ್ದುಕೊಂಡು ಅಪರಾದ ನಡೆಸುವ ಉದ್ದೇಶಕ್ಕಾಗಿ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಲ್ಲಿ ಅಥವಾ ಕಾನೂನಿನ ಚೌಕಟ್ಟಿನ ವ್ಯಾಪ್ತಿಯನ್ನು ಮೀರಿ ವೈಯಕ್ತಿಕ ನೆಲೆಯಲ್ಲಿ ಅಪರಾದ ನಡೆಸಿದ ಸಂದರ್ಭದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕಾನೂನು ರೀತಿಯ ಮೊಕದ್ದಮೆಯನ್ನು ದಾಖಲಿಸಲು ಸರಕಾರದಿಂದ ಯಾವುದೇ ಪೂರ್ವಾನುಮತಿಯನ್ನು ಪಡೆಯುವ ಅಗತ್ಯವಿರುವುದಿಲ್ಲ. ಉದಾಹರಣೆಗಾಗಿ ಗ್ರಾಮ ಪಂಚಾಯತ್ ಅಥವಾ ಸ್ಥಳೀಯ ಆಡಳಿತ ಮಂಡಳಿಯ ಅಧ್ಯಕ್ಷರು ತಮ್ಮ ಅಧಿಕಾರ ಚಲಾವಣೆಯ ಸಂದರ್ಭದಲ್ಲಿ ಸಾರ್ವಜನಿಕ ನಿಧಿಯನ್ನು ದುರ್ಬಳಕೆ ಅಥವಾ ದುರುಪಯೋಗಪಡಿಸಿಕೊಂಡ ಬಗ್ಗೆ ಅಪರಾದಕ್ಕೆ ಸಂಬಂಧಿಸಿದಂತೆ ಅವರ ಆಡಳಿತಾವಧಿ ಮುಗಿದ ನಂತರ ಕೈಗೊಳ್ಳಬಹುದಾದ ಯಾವುದೇ ಕಾನೂನು ಕ್ರಮಕ್ಕೆ ಸರಕಾರರ ಪೂರ್ವಭಾವಿಯ ಅನುಮತಿಯ ಅಗತ್ಯವಿರುವುದಿಲ್ಲ.































































































































error: Content is protected !!
Scroll to Top