ಕಾರ್ಕಳ : ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯ ಹಳೆವಿದ್ಯಾರ್ಥಿಗಳ ಸಮಾವೇಶವು ಇತ್ತೀಚೆಗೆ ಶಾಲೆಯ ಶ್ರೀ ವರದೇಂದ್ರ ಸಭಾಭವನದಲ್ಲಿ ಜರುಗಿತು. 1953ರಲ್ಲಿ ಸ್ಥಾಪನೆಗೊಂಡ ಸಂಸ್ಥೆ ಪ್ರಾರಂಭಗೊಂಡಿದ್ದು ವಿವಿಧ ವರ್ಷಗಳಲ್ಲಿ ಅಧ್ಯಯನ ನಡೆಸಿದ ಸುಮಾರು 200 ಹಳೆ ವಿದ್ಯಾರ್ಥಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಎ. ಯೋಗೀಶ ಹೆಗ್ಡೆ ಮಾತನಾಡಿ, ಹಳೆ ವಿದ್ಯಾರ್ಥಿಗಳು ಶಾಲೆಯ ಅವಿಭಾಜ್ಯ ಅಂಗವಾಗಿದ್ದು ಶಾಲೆಯ ಪ್ರಗತಿಯಲ್ಲಿ ಅವರ ಪಾತ್ರ ಅತ್ಯಂತ ಮಹತ್ತರವಾದುದು ಎಂದ ಅವರು ಶ್ರೀಮದ್ ಭುವನೇಂದ್ರ ವಿದ್ಯಾಸಂಸ್ಥೆಗಳ ಅಭಿವೃದ್ಧಿಗೆ ಹಳೆ ವಿದ್ಯಾರ್ಥಿಗಳು ನೀಡಿದ ಕೊಡುಗೆ ಮತ್ತು ಸಹಕಾರ ಅವಿಸ್ಮರಣೀಯವಾಗಿದೆ ಎಂದರು.
ಲೆಕ್ಕ ಪರಿಶೋಧಕ ಕೆ. ಕಮಲಾಕ್ಷ ಕಾಮತ್ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಅಭಿನಂದಿಸಿದರು ಬಳಿಕ ಮಾತನಾಡಿದ ಅವರು ಭುವನೇಂದ್ರ ವಿದ್ಯಾಸಂಸ್ಥೆಗಳ ಯಶಸ್ಸಿಗೆ ಶ್ರಮಿಸಿದ ಮತ್ತು ಶ್ರಮಿಸುತ್ತಿರುವ ಶಿಕ್ಷಕ ವೃಂದದವರನ್ನು ಹಾಗೂ ಆಡಳಿತ ವರ್ಗವನ್ನು ಅಭಿನಂದಿಸಿದರು.
ಶಾಲೆಯ ನಿವೃತ್ತ ಗಣಿತ ಶಿಕ್ಷಕ ಕೆ. ಪಾಂಡುರಂಗ ರಾವ್ ಮಾತನಾಡಿ, ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಸರಕಾರವು ಕೇವಲ ವೇತನಾನುದಾನವನ್ನು ಒದಗಿಸುತ್ತಿರುವುದರಿಂದ ಶಾಲೆಯ ಇತರ ಅಭಿವೃದ್ಧಿ ಕಾರ್ಯಗಳಿಗೆ ಹಳೆವಿದ್ಯಾರ್ಥಿಗಳ ನೆರವು ಅವಶ್ಯವಾಗಿದೆ ಎಂದರು. ಶಾಲಾ ಆಡಳಿತ ಮಂಡಳಿ ಸದಸ್ಯ ಎಸ್. ನಿತ್ಯಾನಂದ ಪೈ ಸಂದರ್ಭೋಚಿತವಾಗಿ ಮಾತನಾಡಿದರು.

ಹಳೆ ವಿದ್ಯಾರ್ಥಿಗಳಾದ ಆರ್. ಗೋಪಿನಾಥ ಶೆಣೈ, ಡಾ. ಆರತಿ ಸುಂದರೇಶ್, ರೆಂಜಾಳ ನಾರಾಯಣ ಜೆ. ಶೆಣೈ ಮತ್ತು ಕುಮಾರಿ ಕಿರಣ ಕಾಮತ್ ಅನಿಸಿಕೆ ಹಂಚಿಕೊಂಡರು. ಶಾಲೆಯ ನಿವೃತ್ತ ಸಮಾಜಶಾಸ್ತ್ರ ಶಿಕ್ಷಕ ಕೆ. ನಾಗಾ ಭಟ್, ಶಾಲಾ ಸಂಚಾಲಕ ನರೆಂದ್ರ ಕಾಮತ್ ಕೆ, ಆಡಳಿತ ಮಂಡಳಿಯ ಸದಸ್ಯರಾದ ಟಿ. ರಾಮಚಂದ್ರ ನಾಯಕ್, ಜ್ಯೋತಿ ಜೆ. ಪೈ, ಬೋಳ ರಾಹುಲ್ ಕಾಮತ್, ವೈ. ಮೋಹನ ಶೆಣೈ, ಡಾ. ಯೋಗೀಶ್ ಎಸ್. ಕಾಮತ್ ಮತ್ತು ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ವಿದ್ಯಾ ಕಿಣಿ ಉಪಸ್ಥಿತರಿದ್ದರು. ಸಂಸ್ಕೃತ ಶಿಕ್ಷಕಿ ಪೂರ್ಣಿಮಾ ಪ್ರಭು ಪ್ರಾರ್ಥಿಸಿದರು. ಹಿರಿಯ ಶಿಕ್ಷಕ ಸಂಜಯ ಕುಮಾರ್ ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕ ಆರ್. ನಾರಾಯಣ ಶೆಣೈ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
























