ಕಾರ್ತಿಕ್ ಸಿಕ್ಕಿದರೆ ಮಹತ್ವದ ಮಾಹಿತಿ ಬಹಿರಂಗವಾಗುವ ಸಾಧ್ಯತೆ
ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣರದ್ದು ಎಂದು ಹೇಳಲಾಗುತ್ತಿರುವ ಅಶ್ಲೀಲ ವೀಡಿಯೊಗಳನ್ನು ವೈರಲ್ ಮಾಡಿದ ಆರೋಪ ಎದುರಿಸುತ್ತಿರುವ ಪ್ರಜ್ವಲ್ ಕಾರಿನ ಚಾಲಕ ಕಾರ್ತಿಕ್ ಬಂಧನಕ್ಕೆ ಎಸ್‌ಐಟಿ ಬಲೆ ಬೀಸಿದೆ.
ಕಾರ್ತಿಕ್ ಬಂಧನವಾದರೆ ಈ ಪ್ರಕರಣಕ್ಕೆ ನಿರ್ಣಾಯಕವಾದ ತಿರುವು ಸಿಗಬಹುದು ಎನ್ನಲಾಗುತ್ತಿದೆ. ಕಾರ್ತಿಕ್‌ನನ್ನು ಬಳಸಿಕೊಂಡು ಯಾರೋ ಪ್ರಜ್ವಲ್ ವೀಡಿಯೊ ಮಾಡಿಸಿ ಸಂಗ್ರಹಿಸಿಟ್ಟುಕೊಂಡಿದ್ದರು. ಚುನಾವಣೆ ಸಮಯದಲ್ಲಿ ಸಂದರ್ಭ ನೋಡಿಕೊಂಡು ಅದನ್ನು ಪೆನ್‌ಡ್ರೈವ್‌ಗಳಿಗೆ ಹಾಕಿ ಸಾವಿರ ಸಾವಿರ ಸಂಖ್ಯೆಯಲ್ಲಿ ಹಂಚಲಾಗಿದೆ ಎಂಬ ಬಲವಾದ ಗುಮಾನಿ ಇರುವುದರಿಂದ ಈ ಕೇಸಿನಲ್ಲಿ ಕಾರ್ತಿಕ್ ಬಂಧನದಿಂದ ತಿರುವು ಸಿಗುವ ನಿರೀಕ್ಷೆಯಿದೆ.
ಕಾರ್ತಿಕ್ ನಿರೀಕ್ಷಣಾ ಜಾಮೀನು ಅರ್ಜಿ ವಜಾವಾಗಿದ್ದು, ಹೀಗಾಗಿ ಬಂಧನ ಖಚಿತ ಎನ್ನಲಾಗುತ್ತಿದೆ. ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್, ಪುಟ್ಟಿ ಆಲಿಯಾಸ್ ಪುಟ್ಟರಾಜ್, ನವೀನ್ ಗೌಡ ಹಾಗೂ ಚೇತನ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಹಾಸನದ ಮೂರನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಮಾಡಿದೆ.
ಎಡಿಟ್ ಮಾಡಿದ ಅಶ್ಲೀಲ ವೀಡಿಯೊ, ಫೋಟೊ ಸೃಷ್ಟಿ ಮಾಡಿ ಪೆನ್‌ಡ್ರೈವ್ ಮೂಲಕ ಹಂಚಿದ ಆರೋಪ ಮಾಡಲಾಗಿತ್ತು. ಆರೋಪ ಕೇಳಿಬರುತ್ತಿದ್ದಂತೆ ಏಪ್ರಿಲ್ 23ರಂದು ಹಾಸನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಕಾರ್ತಿಕ್, ಪುಟ್ಟರಾಜ್, ನವೀನ್ ಗೌಡ, ಶರತ್ ಆಲಿಯಾಸ್ ಕ್ವಾಲಿಟಿ ಬಾರ್ ಶರತ್ ವಿರುದ್ಧ ಜೆಡಿಎಸ್ ದೂರು ನೀಡಿತ್ತು. ನವೀನ್ ಗೌಡ ಮತ್ತು ಇತರರು ಆರೋಪಿಗಳು ಎಂದು ಸೆನ್ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
ನ್ಯಾಯಾಲಯಕ್ಕೆ ರಿಮೈಂಡರ್ ಅರ್ಜಿ ಮೂಲಕ ಕಾರ್ತಿಕ್, ಪುಟ್ಟರಾಜು ಹಾಗೂ ಚೇತನ್ ಎಂಬ ಹೆಸರು ಉಲ್ಲೇಖಿಸಿ ಮಾಹಿತಿ ರವಾನಿಸಲಾಗಿತ್ತು. ತಮ್ಮ ವಿರುದ್ದ ಕೇಸ್ ದಾಖಲಾಗುತ್ತಲ್ಲೇ ಆರೋಪಿಗಳು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಅರ್ಜಿ ವಜಾ ಬೆನ್ನಲ್ಲೇ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಪೆನ್‌ಡ್ರೈವ್ ವೈರಲ್ ಆರೋಪ ಪ್ರಕರಣ ಇನ್ನೂ ಎಸ್ಐಟಿಗೆ ಹಸ್ತಾಂತರವಾಗಿಲ್ಲ. ಕೇಸ್ ಹಸ್ತಾಂತರ ಆಗದ ಹಿನ್ನೆಲೆಯಲ್ಲಿ ಹಾಸನ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಹೆಚ್ಚಿನ ವಿಚಾರಣೆಗೆ ಹಾಜರಾಗುವಂತೆ ಕಾರು ಚಾಲಕ ಕಾರ್ತಿಕ್ ಗೌಡಗೆ ಈಗಾಗಲೇ ಎಸ್‌ಐಟಿ ನೋಟಿಸ್ ನೀಡಿದೆ. ಕಾರ್ತಿಕ್ ಗೌಡ ಮಲೇಷ್ಯಾಕ್ಕೆ ಹೋಗಿದ್ದಾನೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದರು. ಬಳಿಕ ಪ್ರತ್ಯಕ್ಷವಾಗಿದ್ದ ಕಾರ್ತಿಕ್ ಗೌಡ ನಾನು ಎಲ್ಲಿಯೂ ಹೋಗಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ಪ್ರಜ್ವಲ್ ರೇವಣ್ಣ ಡ್ರೈವರ್ ಆಗಿದ್ದ ಕಾರ್ತಿಕ್ ಜತೆ ಕೈ ಅಭ್ಯರ್ಥಿ ಶ್ರೇಯಸ್ ಪಟೇಲ್ ಇರುವ ಫೋಟೋಗಳು ವೈರಲ್ ಆಗಿವೆ. ಈ ಬಗ್ಗೆ ಮಾತನಾಡಿದ್ದ ಶ್ರೇಯಸ್, ದೇವರಾಜೇ ಗೌಡ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಆದರೆ ಈಗ ಡಿ.ಕೆ ಶಿವಕುಮಾರ್ಗೆ ಪೆನ್‌ಡ್ರೈವ್ ತಲುಪಿಸಿದ್ದ ಆರೋಪ ಹೊತ್ತಿರುವ ಪುಟ್ಟರಾಜು ಜೊತೆಗೂ ಕಾಣಿಸಿಕೊಂಡಿದ್ದಾರೆ. ಪುಟ್ಟರಾಜ್ ಮನೆಯಲ್ಲಿ ಊಟ ಮಾಡಿದ್ದಾರೆ ಎನ್ನಲಾದ ಫೋಟೊ ವೈರಲ್ ಆಗಿವೆ.
























