5 ತಿಂಗಳುಗಳಿಂದ ಆಂಬುಲೆನ್ಸ್ ಸಿಬ್ಬಂದಿಗೆ ಸಂಬಳವಿಲ್ಲ
ಕಾರ್ಕಳ : ಕಳೆದ ಐದು ತಿಂಗಳಿನಿಂದ 108 ಸಿಬ್ಬಂದಿ ಸಂಬವಿಲ್ಲದೆ ದುಡಿಯುತ್ತಿದ್ದಾರೆ. ಆಂಬುಲೆನ್ಸ್ ನಿರ್ವಹಣೆಯ ಗುತ್ತಿಗೆ ಪಡೆದುಕೊಂಡಿರುವ ಜಿವಿಕೆ ಸಂಸ್ಥೆ ಕಳೆದ ಡಿಸೆಂಬರ್‌ನಿಂದ ಸಿಬ್ಬಂದಿಗಳಿಗೆ ವೇತನವನ್ನು ನೀಡಿಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 108 ಆರೋಗ್ಯ ಕವಚ ಯೋಜನೆಯಲ್ಲಿ ಪೈಲಟ್ ಹಾಗೂ ಇಎಂಟಿ ಹುದ್ದೆಗಳಲ್ಲಿ ರಾಜ್ಯಾದ್ಯಂತ 3700 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ್ಯಾರು ಡಿಸೆಂಬರ್‌ನಿಂದ ಸಂಬಳವನ್ನೇ ಪಡೆದಿಲ್ಲ. ಇದೇ ರೀತಿ ಮುಂದುವರೆದರೆ ಸಿಬ್ಬಂದಿಗಳು ತಮ್ಮ ಕುಟುಂಬ ನಿರ್ವಹಣೆಗಾಗಿ ಒದ್ದಾಡುವ ಪರಿಸ್ಥಿತಿ ಎದುರಾಗಲಿದೆ.
ಈ ಮೊದಲು ಜಿವಿಕೆ ಇಎಂಆರ್‌ಐ ಕಂಪನಿ ಆರೋಗ್ಯ ಕವಚ ನಿರ್ವಹಿಸುತ್ತಿತ್ತು. ಪ್ರಸ್ತುತ ಇಎಂಆರ್‌ಐ ಹೆಲ್ತ್ ಗ್ರೀನ್ ಸರ್ವಿಸಸ್ ಎಂಬ ಹೊಸ ಕಂಪನಿ ನಿಭಾಯಿಸುತ್ತಿದೆ. ಸರಕಾರ ನಮಗೆ ಹಣ ಬಿಡುಗಡೆ ಮಾಡಿಲ್ಲ ಎಂದು ಈ ಹೊಸ ಏಜೆನ್ಸಿ ಸರಕಾರಕ್ಕೆ ಬೊಟ್ಟು ಮಾಡುತ್ತಿದೆ. ಇನ್ನೊಂದೆಡೆ ಸರಕಾರ ಏಜೆನ್ಸಿಗೆ ಹಣ ಬಿಡುಗಡೆ ಮಾಡಿದ್ದು, ಯಾವುದೂ ಬಾಕಿ ಇಲ್ಲ ಎಂದು ಹೇಳುತ್ತಿದೆ. ಆದರೆ, ಈ ನೆಪಗಳ ನಡುವೆ ಸಿಬ್ಬಂದಿ ವೇತನವಿಲ್ಲದೇ ಪರದಾಡುವಂತಾಗಿದೆ.

ಕಳೆದ ಐದು ತಿಂಗಳಿನಿಂದ ಬಾಕಿ ಉಳಿದಿರುವ ಸಂಬಳ, ಈ ಮೊದಲು ಕೊಡುತ್ತಿದ್ದ ಟಿಎ ಡಿಎ ನೀಡುವಂತೆ ಸಿಬ್ಬಂದಿ ಆಗ್ರಹಿಸುತ್ತಿದ್ದಾರೆ. 108 ವಾಹನ ಪಂಚರ್ ಸೇರಿದಂತೆ ಸಣ್ಣಪುಟ್ಟ ರಿಪೇರಿಗೆ ಸಿಬ್ಬಂದಿ ತಮ್ಮ ಸ್ವಂತ ಹಣ ಹಾಕುತ್ತಿದ್ದು, ಈ ಖರ್ಚನ್ನು ಕಂಪನಿಯಿಂದ ಹಿಂದಿರುಗಿಸಬೇಕು. ಅಲ್ಲದೆ ಈ ಹಿಂದೆ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕನಿಷ್ಠ ವೇತನ ಜಾರಿ ಮಾಡಿ ಸಿಬ್ಬಂದಿಗೆ ಪ್ರತಿ ತಿಂಗಳು ₹36,038 ವೇತನ ಪಾವತಿಸಲಾಗಿತ್ತು. ಬಳಿಕ ಏಕಾಏಕಿ ₹6,038 ಕಡಿಮೆ ಮಾಡಿದೆ. ಇದಕ್ಕೆ ಕಾರಣವನ್ನೂ ಸಂಸ್ಥೆ ನೀಡಿಲ್ಲ ಎಂಬುವುದು ಸಿಬ್ಬಂದಿಯ ವಾದ.
ಈ ಸಂಸ್ಥೆ ಯಾಕೆ ವೇತನ ನೀಡುತ್ತಿಲ್ಲ. ಸರಕಾರ ಹೇಳಿದಂತೆ ಹಣ ಬಿಡುಗಡೆ ಮಾಡಿದ್ದರೆ ಆ ಹಣ ಎಲ್ಲಿ ಹೋಗಿದೆ. ಈ ಬಗ್ಗೆ ಸರಕಾರ ಸಮಗ್ರ ತನಿಖೆ ಮಾಡಬೇಕು. ಸಂಸ್ಥೆ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕು. ಪ್ರತಿಯೊಬ್ಬ ಸಿಬ್ಬಂದಿಗೂ ಬಾಕಿಯಿರುವ ವೇತನ ಬಿಡುಗಡೆ ಮಾಡುವ ಕೆಲಸವಾಗಬೇಕು. ಇಲ್ಲವಾದಲ್ಲಿ ಸಂಸ್ಥೆ ವಿರುದ್ಧ ಸಿಬ್ಬಂದಿಗಳು ಹೋರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಲಿದೆ.
ಸಂಬಳವಿಲ್ಲದೆ ಕಳೆದ 5 ತಿಂಗಳುಗಳಿಂದ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಈ ಬಗ್ಗೆ ಗುತ್ತಿಗೆ ಪಡೆದಿರುವ ಸಂಸ್ಥೆ ಮತ್ತು ಸರಕಾರ ಕಿಂಚಿತ್ತು ಯೋಚಿಸದಿರುವುದು ವಿಷಾದನೀಯ. ತಕ್ಷಣವೇ ಸಮಸ್ಯೆ ಪರಿಸುವತ್ತ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು.
-ಸಿಬ್ಬಂದಿ
ತಾಲೂಕು ಸರಕಾರಿ ಆಸ್ಪತ್ರೆ ಕಾರ್ಕಳ
ವರದಿ : ನಳಿನಿ ಎಸ್. ಸುವರ್ಣ





















