ರಾಜ್ಯ ಬಿಜೆಪಿ ಘಟಕ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್ ಕುಮಾರ್ ಕಿಡಿ
ರಾಜ್ಯದಲ್ಲಿ ರಾವಣ ಸರಕಾರ
ಕಾರ್ಕಳ : ಹುಬ್ಬಳ್ಳಿಯಲ್ಲಿ ನಡೆದ ಹಿಂದೂ ಯುವತಿಯ ಬರ್ಬರ ಹತ್ಯೆ ಖಂಡಿಸಿ ಪ್ರತಿಭಟಿಸಿದ ಕಾರ್ಕಳ ಎಬಿವಿಪಿ ವಿರುದ್ದ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿರುವುದಕ್ಕೆ ರಾಜ್ಯ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್ ಕಿಡಿಕಾರಿದ್ದಾರೆ. ಅನ್ಯ ಕೋಮಿನ ಜಿಹಾದಿ ಮನಸ್ಥಿತಿಯ ವ್ಯಕ್ತಿಯಿಂದ ಹತ್ಯೆಯಾದ ಹದಿಹರೆಯದ ಹಿಂದೂ ಯುವತಿಯೋರ್ವಳ ಸಾವಿಗೆ ನ್ಯಾಯ ಕೇಳಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರೆ ಪ್ರಕರಣ ದಾಖಲಿಸುವುದೆಂದರೆ ರಾಜ್ಯದಲ್ಲಿ ರಾವಣ ಆಡಳಿತವಿದೆಯೆ ? ಎಂದು ಸುನಿಲ್ ಕುಮಾರ್ ಪ್ರಶ್ನಿಸಿದರು.

ಅರ್ಥ ಮಾಡಿಕೊಳ್ಳಬೇಕಿದೆ
ಸಿದ್ದರಾಮಯ್ಯ ಸರಕಾರದಲ್ಲಿ ನ್ಯಾಯವನ್ನೆ ಕೇಳಬಾರದು ಎಂದಾದರೆ ಎಂತಹ ದಾರಿದ್ರ್ಯದ ಸ್ಥಿತಿ ನಮ್ಮ ರಾಜ್ಯಕ್ಕೆ ಬಂದಿದೆ. ಯುವತಿಯನ್ನು ಪೈಶಾಚಿಕವಾಗಿ ಚುಚ್ಚಿದ ದುಷ್ಕರ್ಮಿಯ ಮನೆಗೆ ಭದ್ರತೆ ಕೊಡುತ್ತಾರೆ. ನ್ಯಾಯ ಕೇಳಿದ ವಿದ್ಯಾರ್ಥಿ ಸಂಘಟನೆ ಮೇಲೆ ಎಪ್ಐಆರ್ ದಾಖಲಿಸುತ್ತಾರೆ ಎಂದಾದರೆ ಈ ಸರಕಾರದಲ್ಲಿ ಹಿಂದೂಗಳಿಗೆ ಭದ್ರತೆ, ರಕ್ಷಣೆ ಎಷ್ಟರ ಮಟ್ಟಿಗೆ ಕುಸಿದಿದೆ ಎನ್ನುವುದನ್ನು ನಾಡಿನ ಜನತೆ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಸುನಿಲ್ ಕುಮಾರ್ ಹೇಳಿದರು.
ಹೇಯಕೃತ್ಯಕ್ಕೆ ಕಾರಣ
ಕಾಂಗ್ರೆಸ್ ಒಲೈಕೆ, ತುಷ್ಟೀಕರಣ ನೀತಿ ಇಷ್ಟೊಂದು ಹೇಯ ಕೃತ್ಯಕ್ಕೆ ಕಾರಣವಾಗಿದೆ. ದುಷ್ಕರ್ಮಿಯ ರಕ್ಷಣೆಗೆ ಕಾಂಗ್ರೆಸ್ ನಿಂತಿರುವುದು ಸ್ಪಷ್ಟ. ಕಾಣದ ಕೈಗಳಲ್ಲ. ನೇರ ಸರಕಾರವೇ ಆರೋಪಿಯ ರಕ್ಷಣೆಗೆ ನಿಂತಿದೆ. ಪೊಲೀಸ್ ಬಲದ ಮೂಲಕ ಈ ಕೆಲಸ ಮಾಡುತ್ತಿದೆ. ಸಿದ್ದರಾಮಯ್ಯರವರೇ ನಿಮ್ಮದೆ ಪಕ್ಷದ ಜನಪ್ರತಿನಿಧಿಯ ಮನೆ ಮಗಳು ಹತ್ಯೆಯಾಗಿರುವುದು ಎನ್ನುವುದನ್ನು ನೆನಪಿಡಿ. ನಿಮ್ಮದೆ ಪಕ್ಷದ ಮನೆ ಮಗಳಿಗೆ ರಕ್ಷಣೆ ಕೊಡಲಾಗದ ನಿಮ್ಮಿಂದ ರಾಜ್ಯದ ಹೆಣ್ಣು ಮಕ್ಕಳಿಗೆ ರಕ್ಷಣೆ ಒದಗಿಸಲು ಸಾಧ್ಯವೇ ? ಎಂದು ಸುನಿಲ್ ಕುಮಾರ್ ಕಿಡಿಕಾರಿದರು.
ಕೈಕಟ್ಟಿ ಕೂರಲು ಸಾಧ್ಯವಿಲ್ಲ
ರಾಜ್ಯದಲ್ಲಿ ಎಬಿವಿಪಿ ಕಾರ್ಯಕರ್ತರ ಆಕ್ರೋಶದ ಕಟ್ಟೆ ಒಡೆದಿದೆ. ಅಮಾಯಕ ಯುವತಿಗೆ ನ್ಯಾಯಕ್ಕಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಪೊಲೀಸ್ ಪ್ರಯೋಗದ ಮೂಲಕ ಅವರನ್ನು ಹತ್ತಿಕ್ಕುವ, ತಡೆಯುವ ಕೆಲಸ ನಿಮ್ಮಿಂದ ಆಗುತ್ತಿದೆ. ಹಿಂದೂ ಹೆಣ್ಣುಮಕ್ಕಳ ಜೀವ ರಕ್ಷಣೆಗಾಗಿ ರಸ್ತೆಗಿಳಿಯುವ ಪ್ರತಿಭಟನಕಾರರ ವಿರುದ್ದ ಕಾನೂನು ಕ್ರಮದ ಜಾರಿಗೆ ಮುಂದಾದರೆ ಕೈ ಕಟ್ಟಿ ಕೂರಲು ಸಾಧ್ಯವಿಲ್ಲ ಎಂದು ಸುನಿಲ್ ಕುಮಾರ್ ಎಚ್ಚರಿಕೆ ನೀಡಿದರು.
ನಿಮ್ಮದೆ ತಾಳಕ್ಕೆ ಕುಣಿಯುವ ಕೈಗೊಂಬೆ ಪೊಲೀಸರು ವಿದ್ಯಾರ್ಥಿ ಸಂಘಟನೆಗಳ ಮೇಲೆ ಕ್ರಮಕ್ಕೆ ಮುಂದಾದರೆ ನಾವು ಸುಮ್ಮನಿರಲಾರೆವು ಎಂದಿದ್ದಾರೆ. ಈ ರಾಜ್ಯದಲ್ಲಿ ಯುವಕ- ಯುವ ಸಮೂಹಕ್ಕೆ ನಿಮ್ಮ ಸರಕಾರದಲ್ಲಿ ಬೆಲೆ ಇಲ್ಲ. ರಕ್ಷಣೆ ಕೊಡಬೇಕಾದ ಪೊಲೀಸರೆ ಕಾನೂನು ಕ್ರಮದ ಹೆಸರಲ್ಲಿ ಭಕ್ಷಕರಾಗುತ್ತಿದ್ದಾರೆ ಎಂದು ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.





































