ತ್ರಿಪುರ ಗರಿಷ್ಠ, ಬಿಹಾರ ಕನಿಷ್ಠ
ಹೊಸದಿಲ್ಲಿ : ಶುಕ್ರವಾರ ನಡೆದ ಮೊದಲ ಹಂತದ 102 ಲೋಕಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಬರೀ ಶೇ.62.37 ಮತದಾನ ಆಗಿರುವುದು ಕಳವಳ ಹುಟ್ಟಿಸಿದೆ. ರಾತ್ರಿ 9 ಗಂಟೆಗಾಗುವಾಗ ಮತದಾನ ಲೆಕ್ಕಾಚಾರ ಪೂರ್ಣಗೊಂಡಿದ್ದು, ಚುನಾವಣಾ ಆಯೋಗ ಅಂಕಿಅಂಶ ಪ್ರಕಟಿಸಿ ಕಡಿಮೆ ಮತದಾನವಾದ ಬಗ್ಗೆ ಬೇಸರ ವ್ಯಕ್ತಪಡಿಸಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಮೊದಲ ಹಂತದಲ್ಲಿ ಶೇ.69.43 ಮತದಾನವಾಗಿತ್ತು. ಈ ಸಲ ಸತತ ಪ್ರಯತ್ನಗಳ ಹೊರತಾಗಿಯೂ ಅದಕ್ಕಿಂತ ಕಡಿಮೆ ಮತದಾನವಾಗಿದೆ.
ಪಶ್ಚಿಮ ಬಂಗಾಳದಲ್ಲಿ ವ್ಯಾಪಕ ಹಿಂಸಾಚಾರ ನಡೆದಿದ್ದು, ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಇದಕ್ಕೆ ಪರಸ್ಪರರನ್ನು ದೂಷಿಸಿವೆ. ಇದರ ಹೊರತಾಗಿಯೂ ಪಶ್ಚಿಮ ಬಂಗಾಳದಲ್ಲಿ ಶೇ.68.62 ಮತದಾನವಾಗಿದೆ. ಕಳೆದ ಹಲವಾರು ತಿಂಗಳಿಂದ ಹಿಂಸಾತ್ರಸ್ತವಾಗಿರುವ ಮಣಿಪುರದಲ್ಲೂ ಶೇ.77.57 ಮತದಾನವಾಗಿದೆ. ತ್ರಿಪುರಲ್ಲಿ ಗರಿಷ್ಠ ಶೇ.80.17, ಬಿಹಾರದಲ್ಲಿ ಕನಿಷ್ಠ ಶೇ.48.5 ಮತದಾನವಾಗಿದೆ ಎಂದು ಚುನಾವನಾ ಆಯೋಗ ತಿಳಿಸಿದೆ.































