ಹೊಸದಿಲ್ಲಿ: ಕೇರಳ, ತಮಿಳುನಾಡು, ಕರ್ನಾಟಕ ಮತ್ತು ಗೋವಾದಲ್ಲಿ ಈ ಸಲ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಮತ್ತು ಕೇಂದ್ರ ಭಾಗಗಳಲ್ಲಿ ಸಾಮಾನ್ಯ ಮಳೆಯಾಗಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ತಿಳಿಸಿದೆ. ಈಶಾನ್ಯ ಭಾರತದಲ್ಲೂ ಋತುವಿನ ಮೊದಲಾರ್ಧದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆ ಸುರಿಯಲಿದೆ ಎಂದು ಭವಿಷ್ಯ ನುಡಿದಿದೆ.
ಒಟ್ಟಾರೆ ದೇಶದಲ್ಲಿ ಈ ಬಾರಿ ಭಾರತದಲ್ಲಿ ಸಾಮಾನ್ಯ ಮುಂಗಾರು ಮಳೆಯಾಗಲಿದೆ. ಈ ವರ್ಷ ಜೂನ್ ಮತ್ತು ಸೆಪ್ಟೆಂಬರ್ ನಡುವೆ ಭಾರತಕ್ಕೆ ಸಾಮಾನ್ಯ ಮಾನ್ಸೂನ್ ನಿರೀಕ್ಷೆ ಇದ್ದು, ಮುಂಗಾರು ಮಳೆ ಶೇಕಡಾ 102ರಷ್ಟು ಆಗಬಹುದು. ಜೂನ್ನಿಂದ ಸೆಪ್ಟೆಂಬರ್ವರೆಗೆ, ಮಧ್ಯ ಮತ್ತು ಪಶ್ಚಿಮ ಭಾಗಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಸ್ಕೈಮೆಟ್ ಅಂದಾಜಿಸಿದೆ.
‘ಮಾನ್ಸೂನ್ ಮುನ್ಸೂಚನೆ – 2024′ ವರದಿ ದೇಶದ ದಕ್ಷಿಣ, ಪಶ್ಚಿಮ ಮತ್ತು ವಾಯುವ್ಯ ಪ್ರದೇಶಗಳಲ್ಲಿ ಅನುಕೂಲಕರವಾದ ಮಳೆಯಾಗಲಿದೆ ಎಂದು ಸೂಚಿಸಿದೆ. ಮಳೆಯಾಶ್ರಿತ ಪ್ರದೇಶಗಳಾದ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಸಾಕಷ್ಟು ಮಳೆಯಾಗುವ ನಿರೀಕ್ಷೆಯಿದೆ. ಆದರೆ ಬಿಹಾರ, ಜಾರ್ಖಂಡ್, ಒಡಿಶಾ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಪೂರ್ವ ರಾಜ್ಯಗಳು ಗರಿಷ್ಠ ಮಾನ್ಸೂನ್ ತಿಂಗಳುಗಳಲ್ಲಿ ಮಳೆ ಕೊರತೆ ಅಪಾಯ ಎದುರಿಸಲಿವೆ.
ವರದಿಯ ಪ್ರಕಾರ, ಜೂನ್ನಿಂದ ಸೆಪ್ಟೆಂಬರ್ವರೆಗಿನ ಮಾನ್ಸೂನ್ ಸಂಭವನೀಯತೆಯು ಅಧಿಕ ಮಳೆಯಾಗುವ ಸಾಧ್ಯತೆಯನ್ನು 10 ಪ್ರತಿಶತ, ಸಾಮಾನ್ಯ ಮಳೆಯ 45 ಪ್ರತಿಶತ ಸಾಧ್ಯತೆಯನ್ನು ಸೂಚಿಸಿದೆ. ಜೊತೆಗೆ 20 ಪ್ರತಿಶತದಷ್ಟು ಸಾಮಾನ್ಯ-ಹೆಚ್ಚು ಮಳೆ, 15 ಪ್ರತಿಶತ ಕಡಿಮೆ- ಸಾಮಾನ್ಯ ಮಳೆ, ಮತ್ತು ಶೇ.10 ರಷ್ಟು ಬರ ಪರಿಸ್ಥಿತಿಯ ಸಾಧ್ಯತೆ ಇದೆ ಎಂದು ಊಹಿಸಿದೆ.
ಮಾಸಿಕ ಪ್ರಮಾಣದಲ್ಲಿ, ಜೂನ್ ಶೇ. 95, ಜುಲೈ ಶೇ. 105, ಆಗಸ್ಟ್ ಶೇ. 98% ಮತ್ತು ಸೆಪ್ಟೆಂಬರ್ ಶೇ. 110 ಸರಾಸರಿ ಮಳೆಯನ್ನು ಪಡೆಯುವ ಮುನ್ಸೂಚನೆ ಇದೆ.






























































