ಮಂಗಳೂರು : ಜ್ಞಾನ ಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ಬೆಂಗಳೂರು ವತಿಯಿಂದ ಕ್ರೀಡಾ ಬರವಣಿಗೆಗಾಗಿ ಕೊಡಮಾಡುವ ಕರ್ನಾಟಕ ಕಲಾಶ್ರೀ ರಾಜ್ಯ ಪ್ರಶಸ್ತಿಗೆ ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆ ಭಾಜನರಾಗಿದ್ದಾರೆ.
ಏ.7ರಂದು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಕನ್ನಡ ಭವನದಲ್ಲಿ ಜ್ಞಾನ ಮಂದಾರ ಶೈಕ್ಷಣಿಕ, ಸಾಂಸ್ಕೃತಿಕ ಅಕಾಡೆಮಿ ಬೆಂಗಳೂರು ಆಯೋಜಿಸಿದ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದಲ್ಲಿ ನಡೆದ ಕನ್ನಡ ಕಲಾ ಪ್ರತಿ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಡಾ.ಸಿ. ಸೋಮ ಶೇಖರ್ ಕಲಾಶ್ರೀ ಪ್ರಶಸ್ತಿ ನೀಡಿ ಪುರಸ್ಕರಿಸಿದರು.
ಸುಮಾರು 30 ವರ್ಷಗಳಿಂದ ಕ್ರೀಡಾ ಲೇಖನಗಳ ಮೂಲಕ ಗುರುತಿಸಿಕೊಂಡಿರುವ ಜಗದೀಶ್ಚಂದ್ರ ಅಂಚನ್ ರಾಜ್ಯ, ಅಂತಾರಾಜ್ಯ ಮಟ್ಟದ ದಿನ ಪತ್ರಿಕೆ, ವಾರಪತ್ರಿಕೆ ಹಾಗೂ ಮಾಸಪತ್ರಿಕೆಗಳಲ್ಲಿ ಇಲ್ಲಿಯವರೆಗೆ ಸುಮಾರು 5 ಸಾವಿರಕ್ಕೂ ಹೆಚ್ಚು ಕ್ರೀಡಾ ಲೇಖನ/ಅಂಕಣ, ಬರಹಗಳನ್ನು ಬರೆದಿದ್ದಾರೆ. ಇವರು ಹಲವಾರು ರಾಜ್ಯ, ಅಂತಾರಾಜ್ಯ ಹಾಗೂ ಜಿಲ್ಲಾ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ.




















