ಜನಪ್ರತಿನಿಧಿಗಳಲ್ಲಿ ಇರಬೇಕು ಭಾರತೀಯತೆ

ಭಾರತದಲ್ಲಿ ಈಗ ಚುನಾವಣೆಯ ಪರ್ವಕಾಲ. ಹಳ್ಳಿಯಿಂದ ದಿಲ್ಲಿಯವರೆಗೆ ಎಲ್ಲ ಕಡೆ ಚುನಾವಣೆಯದ್ದೇ ಚರ್ಚೆ. ಇಡೀ ವಿಶ್ವ ಭಾರತದ ಚುನಾವಣೆ ಮೇಲೆ ಕಣ್ಣಿಟ್ಟಿದೆ. ಈಗಾಗಲೇ ಚುನಾವಣೆಯ ಎಲ್ಲ ತಯಾರಿ ಪ್ರಕ್ರಿಯೆಗಳು ನಡೆದಿವೆ. ದಿನದಿಂದ ದಿನಕ್ಕೆ ಚುನಾವಣಾ ಕಾವು ಹೆಚ್ಚಾಗುತ್ತಿದೆ. ರಾಜಕೀಯ ರಂಗದಲ್ಲಿ ಹಿರಿಯ ಮುತ್ಸದ್ದಿ ರಾಜಕಾರಣಿಯಿಂದ ಹಿಡಿದು ನಿನ್ನೆ ಮೊನ್ನೆ ರಾಜಕೀಯಕ್ಕೆ ಸೇರಿಕೊಂಡ ಕಾರ್ಯಕರ್ತನವರೆಗೆ ಎಲ್ಲರೂ ಚುನಾವಣಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಿವಿಧ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಗೆಲುವಿಗೆ ಪ್ರಚಾರಕಾರ್ಯದಲ್ಲಿ ತೊಡಗಿಸಿಕೊಂಡಿವೆ.

ಸ್ವಾತಂತ್ರ್ಯ ಪಡೆದು 75 ವರ್ಷವಾದರೂ ಇನ್ನೂ ನಮ್ಮಲ್ಲಿ ಜಾತಿ, ಕುಲ, ಪಂಗಡ ಎಂಬ ಭೇದಭಾವ ಅಳಿದುಹೋಗಿಲ್ಲ. ಶಿಕ್ಷಣದ ಕೊರತೆಯಿಂದ ಅನೇಕ ರೀತಿಯ ಕುಂದುಕೊರತೆಗಳು ಸಮಾಜದಲ್ಲಿ ಉಳಿದುಕೊಂಡಿವೆ. ಚುನಾವಣೆಗಳು ಬಂದಾಗ ಎಲ್ಲ ರಾಜಕೀಯ ಪಕ್ಷಗಳು, ತಮ್ಮ ಅಭ್ಯರ್ಥಿ ಆಯ್ಕೆಯಲ್ಲಿ ಮತ್ತೆ ಜಾತಿ ಸಮೀಕರಣ, ಜನಬಲ, ಹಣಬಲ, ಕುಟುಂಬ ರಾಜಕಾರಣ, ರಾಜಕೀಯ ಹೊಂದಾಣಿಕೆಗಳು ಇತ್ಯಾದಿಗಳಿಗೆ ಪ್ರಾಶಸ್ತ್ಯ ನೀಡುತ್ತಿವೆ.

ರಾಜಕೀಯ ನಾಯಕರು ಭರ್ಜರಿ ಭಾಷಣ ಬಿಗಿಯುತ್ತಾರೆ, ದೇಶದ ಭವಿಷ್ಯದ ಚಿಂತನೆ ವ್ಯಕ್ತಪಡಿಸುತ್ತಾರೆ, ದೇಶಪ್ರೇಮದ ಬಗ್ಗೆ ಮಾತಾಡುತ್ತಾರೆ. ಒಬ್ಬರನ್ನೊಬ್ಬರು ಹೀಯಾಳಿಸುತ್ತ ಕೆಸರೆರಚಾಟ ನಡೆಸಿ, ಉಚಿತ ಭರವಸೆಗಳನ್ನು ಕೊಟ್ಟುಕೊಂಡು ಪ್ರಚಾರದ ಭರಾಟೆಯಲ್ಲಿ ಗೆಲ್ಲುವುದನ್ನು ಮಾತ್ರ ನೋಡುತ್ತಾರೆ. ಕೆಲವೊಬ್ಬರು ಪ್ರತಿ ಚುನಾವಣೆಯಲ್ಲಿ ಪಕ್ಷಾಂತರ ಮಾಡಿ ಅಧಿಕಾರದಾಹಿಯಾಗುವುದು, ಜನ ಸೇವೆ ಹೆಸರಿನಲ್ಲಿ ಎಲ್ಲ ಅಧಿಕಾರ ಅನುಭವಿಸಿ, 7-8 ಬಾರಿ ಗೆದ್ದ ನಂತರವೂ, ಇನ್ನೊಬ್ಬರಿಗೆ ಅವಕಾಶ ನೀಡದೆ (ನೀಡಿದ್ದರೂ ತಮ್ಮ ಕುಟುಂಬ ಸದಸ್ಯರಿಗೆ ಮಾತ್ರ) ಹಣಬಲ, ಜನಬಲ, ಸಮುದಾಯ, ಜಾತಿ ಲೆಕ್ಕಾಚಾರದ ಮೇಲೆ ಮತ ಕೇಳುವ ನಮ್ಮ ರಾಜಕಾರಣಿಗಳ ಬಗ್ಗೆ ಏನೆನ್ನಬೇಕು? ಅವರಲ್ಲಿ ಎಲ್ಲಿದೆ ಭಾರತೀಯತೆ? ಎಲ್ಲಿದೆ ಭಾರತದ ಭವಿಷ್ಯದ ಚಿಂತೆ? ಅವರ ಆಸ್ತಿ ಕೆಲವೇ ವರ್ಷಗಳಲ್ಲಿ ನೂರಾರು, ಸಾವಿರಾರು ಕೋಟಿ ಆಗಿರುತ್ತದೆ. ದೇಶಸೇವೆ ಹೆಸರಲ್ಲಿ ಒಮ್ಮೆ ಗೆದ್ದರೆ ಸಾಕು, ಜನರ ಮೇಲೆ ದರ್ಪ, ಉದ್ದಟತನ ತೋರುವುದು, ಕನಿಷ್ಠ ಮೂಲಸೌಕರ್ಯ ನೀಡಲು ಕೂಡ ಮನಸ್ಸು ಮಾಡದ ಜನಪ್ರತಿನಿಧಿಗಳು ಇದ್ದಾರೆ. ಮುಂದೊಂದು ದಿನ ದೇಶಕ್ಕೆ ಆಪತ್ತು ಬಂದೊದಗಿದಲ್ಲಿ ನಮ್ಮ ಜನಪ್ರತಿನಿದಿಗಳು/ರಾಜಕಾರಣಿಗಳು ಯಾರೂ ಯುದ್ಧ ಮಾಡಲು ಹೆಜ್ಜೆ ಇಡುವುದಿಲ್ಲ.
ನಾವು ಇತ್ತೀಚೆಗೆ ಇಸ್ರೇಲ್, ಉಕ್ರೇನ್ ಯುದ್ಧದ ಸಮಯದಲ್ಲಿ ಅಲ್ಲಿನ ಆಡಳಿತ ಪಕ್ಷ ಅಥವಾ ವಿರೋಧ ಪಕ್ಷದ ನಾಯಕರು ಯುದ್ಧ ಮಾಡಲು ಸೈನ್ಯದ ಜೊತೆಗೆ ಸೇರಿ ದೇಶಕ್ಕಾಗಿ ಹೋರಾಡಿದ್ದನ್ನು ನೋಡಿದ್ದೇವೆ. ಅದು ಅವರ ಅಪ್ಪಟ ದೇಶಪ್ರೇಮಕ್ಕೆ ಸಾಕ್ಷಿ.

ಈ ಎಲ್ಲ ಪ್ರಕ್ರಿಯೆಗಳನ್ನು ನೋಡಿದಾಗ, ನನಗೆ ಅನಿಸಿದ್ದು, ಈ ಅಮೃತ ಕಾಲದಲ್ಲಿ ನಮ್ಮಲ್ಲಿ ಯಾವೊಬ್ಬ ಅಭ್ಯರ್ಥಿಯಲ್ಲಿಯೂ ಭಾರತೀಯತೆ ಕಾಣದಿರುವುದು. ಕೇವಲ ಬೆರಳೆಣಿಕೆಯಷ್ಟು ರಾಜಕೀಯ ವ್ಯಕ್ತಿಗಳಲ್ಲಿ ಇರಬಹುದು. ಆದರೆ ಸಮಾಜ ಮಾತ್ರ ಬದಲಾವಣೆಗಾಗಿ ಹಂಬಲಿಸುತ್ತಿದೆ, ರಾಮ ರಾಜ್ಯದ ಕನಸು ಕಾಣುತ್ತಿದೆ, ಆದರೆ ರಾಜಕೀಯಕ್ಕೆ ಇದರ ಕಾಳಜಿಯೇ ಇಲ್ಲವಾಗಿದೆ.

ದೇಶದ ಭವಿಷ್ಯ ಕಟ್ಟುವ ಚುನಾಯಿತ ಅಭ್ಯರ್ಥಿಗಳಿಂದ ವಿಕಸಿತ ಭಾರತವಾಗಲು ವಿಕಸಿತ ಮನಸ್ಸು, ಅಪ್ಪಟ ದೇಶಪ್ರೇಮ, ಸವಾಲುಗಳನ್ನು ಎದುರಿಸುವ ಶಕ್ತಿ, ಉತ್ತಮ ಶಿಕ್ಷಣ, ಜನಪರ ಕಾಳಜಿ, ಆಧುನಿಕ ಜಗತ್ತಿನ ಆಗುಹೋಗುಗಳ ಬಗ್ಗೆ ಅರಿವು, ದೂರದರ್ಶಿತ್ವ ಇದ್ದಾಗ ಹೆಚ್ಚು ಬದ್ಧತೆಯಿಂದ ಉತ್ತಮ ಕೆಲಸಗಳು ಆಗುತ್ತವೆ. ದೇಶದ ಸದೃಢತೆಗೆ ದಾರಿಯಾಗುತ್ತದೆ. ಸಶಕ್ತ ಭಾರತವನ್ನು ನಾವು ಕಾಣಬಹುದಾಗಿದೆ.

ಆತನಲ್ಲಿ ದೇಶಾಭಿಮಾನವಿಲ್ಲದಿದ್ದರೆ ದೇಶಕ್ಕಾಗಿ ಯಾವ ರೀತಿ ಕೆಲಸ ಮಾಡುವನು?
ದೇಶದ ಪ್ರಗತಿಗೆ ಕೇವಲ ಪ್ರಧಾನಿಯಾದವನಿಗೆ ಭಾರತೀಯತೆ, ದೇಶ ಪ್ರೇಮ, ದೇಶ ಮೊದಲು ಎಂಬ ಕಾಳಜಿ ಇದ್ದರೆ ಸಾಲಲ್ಲ, ಆತನ ಜತೆಗೆ ಇರುವ ಸಚಿವರು, ಶಾಸಕರು ಕೂಡ ತಮ್ಮ ಭಾರತೀಯತೆ, ಪ್ರಾಮಾಣಿಕತೆ ಸಾಬೀತುಪಡಿಸಬೇಕು. ದಕ್ಷ ಹಾಗೂ ಭ್ರಷ್ಟಾಚಾರಮುಕ್ತ ಆಡಳಿತ, ದೇಶ ಮೊದಲು ಎಂಬ ತತ್ವ ಅಳವಡಿಸಿಕೊಳ್ಳಬೇಕು. ಇದರ ಜತೆ ಅತಿ ಹೆಚ್ಚು ಯುವ ಸಮೂಹವಿರುವ, ಉತ್ತಮ ಶಿಕ್ಷಣ, ಜ್ಞಾನ ಹೊಂದಿರುವ ನಮಗೂ ದೇಶದ ಭವಿಷ್ಯದ ಬಗ್ಗೆ ಕಾಳಜಿ ಇರಬೇಕು. ಆಗ ಮಾತ್ರ ದೇಶದ ಪ್ರಗತಿ, ಸ್ಥಿತಿಗತಿ ಉತ್ತಮವಾಗುವುದಕ್ಕೆ ಸಾಧ್ಯ. ಆಗ ನಮ್ಮ ದೇಶದ ಬಗ್ಗೆ ಹೆಮ್ಮೆ, ಅಭಿಮಾನ ಹೆಚ್ಚಾಗುತ್ತದೆ.

ಮತದಾನ ಎಂದರೆ ಪ್ರಜಾಪ್ರಭುತ್ವದ ಹಬ್ಬದ ರೀತಿಯಲ್ಲಿ ಆಚರಿಸಬೇಕಾಗಿದೆ. ಆದ್ದರಿಂದ ನಾವೆಲ್ಲರೂ ಭಾರತೀಯತೆ ಮರೆಯದೆ ನಮ್ಮ ಭವಿಷ್ಯಕ್ಕಾಗಿ, ದೇಶದ ಸಮಗ್ರ ಅಭಿವೃದ್ದಿಗಾಗಿ, ಸದೃಢ ಭಾರತಕ್ಕಾಗಿ, ಜಾಗತಿಕ ಮಟ್ಟದಲ್ಲಿ ಭಾರತದ ಹೆಸರು ಇನ್ನಷ್ಟು ಎತ್ತರಕ್ಕೇರಲು ಎಲ್ಲರೂ ತಪ್ಪದೆ, ಯೋಚಿಸಿ ಮತ ಚಲಾಯಿಸಬೇಕಾಗಿದೆ.































































































error: Content is protected !!
Scroll to Top