ಈ ತಂದೆ ಮಗ ಸೋತು ಹೋಗಲಿ ಎಂದು ಹಾರೈಸುತ್ತಿದ್ದಾರೆ!

ತಿರುವನಂತಪುರ : ಈ ಸಲದ ಚುನಾವಣೆಯಲ್ಲಿ ಬದುಕಿನ ಅತಿ ದೊಡ್ಡ ಸಂದಿಗ್ಧ ಪರಿಸ್ಥಿತಿಯನ್ನು ಯಾರಾದರೂ ಎದುರಿಸುತ್ತಿದ್ದರೆ ಅದು ಮಾಜಿ ರಕ್ಷಣಾ ಸಚಿವ, ಕಾಂಗ್ರೆಸ್‌ನ ಹಿರಿಯ ನಾಯಕ ಎ. ಕೆ. ಆ್ಯಂಟನಿ. ಎಲ್ಲ ರಾಜಕೀಯ ನಾಯಕರು ತಮ್ಮ ಮಕ್ಕಳಿಗೆ ಟಿಕೆಟ್‌ ಕೊಡಿಸಿ, ಅವರನ್ನು ಗೆಲ್ಲಿಸಿ ಭವಿಷ್ಯ ಭದ್ರಪಡಿಸುವ ಧಾವಂತದಲ್ಲಿದ್ದರೆ ಆ್ಯಂಟನಿಯವರದ್ದು ಇದಕ್ಕೆ ವಿರುದ್ಧವಾಗಿರುವ ಪರಿಸ್ಥಿತಿ.
ಎ. ಕೆ. ಆ್ಯಂಟನಿಯವರ ಪುತ್ರ ಅನಿಲ್‌ ಆ್ಯಂಟನಿ ಈಗ ಬಿಜೆಪಿಯಲ್ಲಿದ್ದಾರೆ. ಆ್ಯಂಟನಿಯವರ ತಳಮಳಕ್ಕೆ ಇದುವೇ ಕಾರಣ.

ಇಷ್ಟು ಮಾತ್ರವಲ್ಲ ಅನಿಲ್‌ ಈ ಸಲ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ತವರು ರಾಜ್ಯದಲ್ಲೇ ಕಣಕ್ಕಿಳಿದಿರುವ ಮಗನ ಗೆಲುವಿಗೆ ಹಾರೈಸಬೇಕೋ ಅಥವಾ ತನ್ನ ಪಕ್ಷದ ಅಭ್ಯರ್ಥಿಗಳಿಗಾಗಿ ಕೆಲಸ ಮಾಡಬೇಕೋ ಎಂಬ ಸಂದಿಗ್ಧತೆ ಆ್ಯಂಟನಿಯವರನ್ನು ಕಾಡುತ್ತಿದೆ.
ಕೆಲವು ತಿಂಗಳ ಹಿಂದೆ ಅನಿಲ್‌ ಬಿಜೆಪಿ ಸೇರುವುದರೊಂದಿಗೆ ಕಾಂಗ್ರೆಸ್‌ಗೆ ಬಲವಾದ ಆಘಾತ ನೀಡಿದ್ದಾರೆ. ಎ. ಕೆ. ಆ್ಯಂಟನಿ ಕಾಂಗ್ರೆಸ್‌ನ ಹಿರಿಯ ನಾಯಕ ಮಾತ್ರವಲ್ಲದೆ ಸೋನಿಯಾ ಗಾಂಧಿಯ ವಿಶ್ವಾಸಾರ್ಹ ವ್ಯಕ್ತಿ. ಈಗಲೂ ಕಾಂಗ್ರೆಸ್‌ನಲ್ಲಿ ನಿಷ್ಠಾವಂತ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಯುಪಿಎ ಸರಕಾರದಲ್ಲಿ ರಕ್ಷಣಾ ಸಚಿವನಂಥ ಮಹತ್ವದ ಹುದ್ದೆಯನ್ನು ಸೋನಿಯಾ ಗಾಂಧಿ ಅವರಿಗೆ ದಯಪಾಲಿಸಿದ್ದರು. ಕಾಂಗ್ರೆಸ್‌ನ ಥಿಂಕ್‌ ಟ್ಯಾಂಕ್‌ಗಳಲ್ಲಿ ಒಬ್ಬರಾಗಿದ್ದ ಆ್ಯಂಟನಿಯವರ ಪುತ್ರನೇ ಬಿಜೆಪಿ ಸೇರಿದ್ದು ಕಾಂಗ್ರೆಸ್‌ ಪಾಲಿಗೆ ಅದರಲ್ಲೂ ಕೇರಳದ ಕಾಂಗ್ರೆಸ್‌ ನಾಯಕರ ಪಾಲಿಗೆ ಆಗಿರುವ ದೊಡ್ಡ ಹಿನ್ನಡೆ.
ಅನಿಲ್‌ ಅವರನ್ನು ಬಿಜೆಪಿ ಈ ಸಲ ಪತ್ತನತಿಟ್ಟಂ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಇಲ್ಲಿ ತನ್ನ ಮಗ ಗೆಲ್ಲಬಾರದು ಎಂದು ಹಾರೈಸಬೇಕಾದ ದುರ್ದೈವ ಆ್ಯಂಟನಿ ಪಾಲಿಗಾಗಿದೆ. ಮಾಧ್ಯಮದವರ ಜತೆ ಮಾತನಾಡಿದ ಆ್ಯಂಟನಿ ಮಗ ಬಿಜೆಪಿ ಸೇರಿದ ನಿರ್ಧಾರವೇ ತಪ್ಪು, ಇನ್ನು ಅವನ ಗೆಲುವನ್ನು ಹೇಗೆ ಹಾರೈಸಲಿ? ಅನಿಲ್‌ ಸೇರಿದಂತೆ ಬಿಜೆಪಿಯ ಯಾರೊಬ್ಬರೂ ಗೆಲ್ಲಬಾರದೆಂದೇ ಹಾರೈಸುತ್ತೇನೆ ಎಂದಿದ್ದಾರೆ. ಪಕ್ಷ ಹೇಳಿದರೆ ಮಗನ ವಿರುದ್ಧ ಪ್ರಚಾರ ಮಾಡಲೂ ತಯಾರಿದ್ದೇನೆ ಎಂದು ಅವರು ಘೋಷಿಸಿದ್ದಾರೆ.

































































































error: Content is protected !!
Scroll to Top