ಕಾರ್ಕಳ ಬಿಜೆಪಿ ಕಚೇರಿಯಲ್ಲಿ ಸಂಸ್ಥಾಪನಾ ದಿನಾಚರಣೆ

ಕಾರ್ಕಳ : ಕಾರ್ಕಳದ ಬಿಜೆಪಿ ಕಚೇರಿಯಲ್ಲಿ ಏ.6ರಂದು ಭಾರತೀಯ ಜನತಾ ಪಾರ್ಟಿಯ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು. ಭಾರತೀಯ ಜನಸಂಘದ ಅವಧಿಯಿಂದ ಬಾಜಪದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಜೇಂದ್ರ ಕಿಣಿ ಭಾರತಾಂಬೆ ಮತ್ತು ಪಂಡಿತ್ ದೀನ್ ದಯಾಳ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಜಕೀಯ ಅಂಗವಾಗಿ ಸ್ಥಾಪಿತವಾಗಿದ್ದ ಭಾರತೀಯ ಜನಸಂಘವು 1980ರಲ್ಲಿ ಭಾರತೀಯ ಜನತಾ ಪಕ್ಷವಾಗಿ ಮರು ನಾಮಕರಣಗೊಂಡಿದ್ದು, ಎಂ.ಸಿ. ಚಾಗ್ಲ ಉದ್ಘಾಟಿಸಿದ್ದರು.

ಹೆಮ್ಮೆಯ ವಿಷಯ
1998-2004 ಅವಧಿಯಲ್ಲಿ ಮಿತ್ರ ಪಕ್ಷಗಳ ಸಹಾಯದೊಂದಿಗೆ ಕೇಂದ್ರ ಸರಕಾರ ರಚಿಸಿ ದೇಶದ ಆಡಳಿತ ನಡೆಸಿತ್ತು. ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್. ಕೆ. ಅಡ್ವಾಣಿ ಈ ಪಕ್ಷದ ಹಿರಿಯ ಮತ್ತು ಮುಖ್ಯ ನಾಯಕರು. 2014 ಭಾರತದ ಸಾರ್ವತ್ರಿಕ ಲೋಕಸಭಾ ಚುನಾವಣೆ‌ ಹಾಗೂ 2019ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತ ಪಡೆದು ಭಾರತೀಯ ಜನತಾ ಪಾರ್ಟಿ ಇಂದು 303 ಕ್ಷೇತ್ರಗಳಲ್ಲಿ ಅಧಿಕಾರ ನಡೆಸುತ್ತಿದೆ ಎಂದು ಹೇಳಲು ಹೆಮ್ಮೆ ಅನಿಸುತ್ತಿದೆ ಎಂದು ವಿಜೇಂದ್ರ ಕಿಣಿ ಹೇಳಿದರು.

ಬಿಜೆಪಿ ವಕ್ತಾರ ರವೀಂದ್ರ ಮೊಯಿಲಿ ಮಾತನಾಡಿ, ವಿಜೇಂದ್ರ ಕಿಣಿಯವರು ಭಾರತೀಯ ಜನತಾ ಪಾರ್ಟಿಯಲ್ಲಿ ಖಜಾಂಚಿಯಾಗಿ ಕರ್ತವ್ಯ ನಿಭಾಯಿಸಿದವರು. ಹಿಂದುತ್ವಕ್ಕೆ ಒತ್ತುಕೊಟ್ಟು ಜನಸಂಘದ ದಿನದಿಂದಲೂ ಇಂದಿನವರೆಗೆ ಬಾಜಪದಲ್ಲಿ ಕಾರ್ಯನಿರ್ವಹಣೆಯನ್ನು ಮಾಡುತ್ತಾ ಬಂದಿದ್ದು, ಅವರ ಹುಮ್ಮಸ್ಸು ಮಾತ್ರ ಇನ್ನು ಕಳೆಗುಂದಿಲ್ಲ. ಸಂಘದ ಸಿದ್ಧಾಂತವನ್ನು ಜೀವನದಲ್ಲಿ ಅಳವಡಿಸಿಕೊಂಡು, ಯುವನಾಯಕರು ಪಕ್ಷದ ನಿಯಮಾಳಿಗಳಿಗೆ ಬದ್ಧರಾಗಿ, ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳಸುತ್ತಿರುವ ಇಂತಹ ಕಾರ್ಯಕರ್ತರಿಂದಲೇ ಇಂದು ಬಿಜೆಪಿ ಸದೃಢವಾಗಿದೆ ಎಂದರು.

ಸಹಾಯಧನ
ಸ್ಥಾಪನಾ ದಿನದ ಅಂಗವಾಗಿ ಕಾರ್ಕಳ ಬಿಜೆಪಿ ವತಿಯಿಂದ ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿರುವ ಮಿಯ್ಯಾರಿನ ಶೇಖರ ಪೂಜಾರಿಯವರ ಮನೆಗೆ ಭೇಟಿ ನೀಡಿ ಅವರ ಔಷಧೋಪಚಾರಗಳಿಗೆ ಸಹಾಯಧನ ಹಸ್ತಾಂತರಿಸಲಾಯಿತು.

ಈ ಸಂದರ್ಭ ಕಾರ್ಕಳ ತಾಲೂಕು ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್‌ ನಾಯಕ್‌, ಜಿಲ್ಲಾ ಉಪಾಧ್ಯಕ್ಷ ಮಹಾವೀರ ಹೆಗ್ಡೆ, ಹಿರಿಯರಾದ ರಾಮಚಂದ್ರ ನಾಯಕ್‌, ವೈ. ಸುಂದರ ಹೆಗ್ಡೆ, ಬಾಜಪ ಮಂಡಲದ ಪ್ರಧಾನ ಕಾರ್ಯದರ್ಶಿ ಸತೀಶ್‌ ಪೂಜಾರಿ, ಉಪಾಧ್ಯಕ್ಷ ಅನಂತಕೃಷ್ಣ ಶೆಣೈ, ಕಾರ್ಯದರ್ಶಿ ಪ್ರವೀಣ್‌ ಸಾಲ್ಯಾನ್‌, ಕಾರ್ಯಾಲಯ ಕಾರ್ಯದರ್ಶಿ ಜ್ಯೋತಿ ರಮೇಶ್‌, ಯುವಮೋರ್ಚಾ ಅಧ್ಯಕ್ಷ ರಾಕೇಶ್‌ ಶೆಟ್ಟಿ, ಮಿಯ್ಯಾರು ಗ್ರಾ. ಪಂ. ಅಧ್ಯಕ್ಷೆ ಸನ್ಮತಿ ನಾಯಕ್‌, ಪುರಸಭಾ ಸದಸ್ಯರು, ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.









































































































error: Content is protected !!
Scroll to Top